ನವದೆಹಲಿ, ಮೇ 6- ಲೋಕಸಭೆಯ ಸಂದರ್ಶಕರ ಗ್ಯಾಲರಿಗೆ ತೆರಳಲು ಅಧಿಕೃತ ಪಾಸ್ ಹೊಂದಿದ್ದರೂ, ಕರ್ನಾಟಕದಿಂದ ಬಂದಿದ್ದ ಹಲವು ಸ್ವಾಮೀಜಿಗಳನ್ನು ತಡೆಯಲಾಯಿತು. ಕಾರಣ ಅವರು ಕೈ ಕಡಗ ಹಾಗೂ ಕೊರಳಿಗೆ ಧರಿಸಿದ್ದ ರುದ್ರಾಕ್ಷಿ ಮಾಲೆ ತೆಗೆಯಲು ನಿರಾಕರಿಸಿದ್ದು. ಕಳೆದ ಜನವರಿಯಲ್ಲಿ ಪಠಾಣ್ಕೋಟ್ ವಾಯುನೆಲೆಯ ಮೇಲೆ ಉಗ್ರರ ದಾಳಿ ನಡೆದ ಬಳಿಕ ಸಂಸತ್ ಭವನದ ಭದ್ರತಾ ವ್ಯವಸ್ಥೆಯನ್ನು ಬಿಗಿಗೊಳಿಸಿದ್ದರಿಂದ ಕರ್ನಾಟಕದ ಸ್ವಾಮೀಜಿಗಳಿಗೆ ನಿರಾಶೆ ಉಂಟಾಯಿತು.
ಕೈ ಕಡಗ ಹಾಗೂ ರುದ್ರಾಕ್ಷಿ ಮಾಲೆ ತೆಗೆಯದಿದ್ದರೆ ಪ್ರವೇಶಕ್ಕೆ ನೀಡುವುದಿಲ್ಲ ಎಂದು ಭದ್ರತಾ ಸಿಬ್ಬಂದಿಗಳು ಸೂಚಿಸಿದ್ದಾರೆ. ಅವರ ಆಗ್ರಹದಂತೆ ಮಾಲೆ ಹಾಗೂ ಕಡತ ತೆಗೆಯುವುದು ಧಾರ್ಮಿಕ ನಂಬಿಕೆಗೆ ಅಪಮಾನ ಎಂದು ಸ್ವಾಮೀಜಿಗಳು ವಾದಿಸಿದ್ದರಿಂದ ಸಂಸತ್ ಭವನದಲ್ಲಿ ಗದ್ದಲದ ವಾತಾವರಣ ಉಂಟಾಯಿತು. ಸಾಧು ಸಮುದಾಯವನ್ನು ಅವಮಾನಿಸಲಾಗಿದೆ ಎಂದು ರಾಷ್ಟ್ರೀಯ ಶಿವಾಚಾರ್ಯ ಪರಿಷತ್ ನಿಯೋಗದ ಸಂಚಾಲಕ ಬಸವರಾಜು ಆಕ್ರೋಶ ವ್ಯಕ್ತಪಡಿಸಿದರು.
ಈ ಭೇಟಿ ಕಾರ್ಯಕ್ರಮವನ್ನು ಕಾಂಗ್ರೆಸ್ ಮುಖಂಡ ಎಂ.ಮಲ್ಲಿಕಾರ್ಜುನ ಖರ್ಗೆ ವ್ಯವಸ್ಥೆಗೊಳಿಸಿದ್ದರಿಂದ ಹೀಗೆ ಅವಮಾನಿಸಲಾಯಿತು ಎಂದೂ ಅವರು ಆಪಾದಿಸಿದ್ದಾರೆ. ಖರ್ಗೆ ಕೂಡಾ ಸ್ಥಳಕ್ಕೆ ಆಗಮಿಸಿ ಅಸಹಾಯಕತೆ ವ್ಯಕ್ತಪಡಿಸಿದರು. ಈ ವಿಷಯವನ್ನು ಲೋಕಸಭೆ ಸ್ಪೀಕರ್ ಗಮನಕ್ಕೆ ತರಬಹುದೇ ಎಂದು ನಿಯೋಗ ಕೇಳಿದಾಗ ಇದನ್ನು ಕೇಳುವ ಸ್ಥಿತಿಯಲ್ಲಿ ಸ್ಪೀಕರ್ ಇಲ್ಲ ಎಂದು ಖರ್ಗೆ ಸಮುಜಾಯಿಷಿ ನೀಡಿದರು. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿಯವರನ್ನು ಭೇಟಿ ಮಾಡಿ ಈ ಘಟನೆಯ ಬಗ್ಗೆ ವಿವರಿಸುವುದಾಗಿ ಪರಿಷತ್ ಅಧ್ಯಕ್ಷ ರೇಣುಕ ಶಿವಾಚಾರ್ಯ ಸ್ವಾಮೀಜಿ ಹೇಳಿದರು.