ಕರ್ನಾಟಕ

ಅನಧಿಕೃತವಾಗಿ ಚಿಕಿತ್ಸೆ ನೀಡುತ್ತಿದ್ದ ಇಬ್ಬರು ನಕಲಿ ಆಯುರ್ವೇದ ವೈದ್ಯರ ಬಂಧನ

Pinterest LinkedIn Tumblr

annnnಕೆ.ಆರ್.ಪೇಟೆ,ಏ.29- ಆರೋಗ್ಯ ಇಲಾಖೆಯ ಅಧಿಕಾರಿಗಳ ಕಣ್ಣುತಪ್ಪಿಸಿ ತಾಲೂಕಿನ ಎರಡು ಕಡೆ ಅನಧಿಕೃತವಾಗಿ ಆಯುರ್ವೇದ ಚಿಕಿತ್ಸೆ ನೀಡುತ್ತಿದ್ದ ಇಬ್ಬರು ನಕಲಿ ವೈದ್ಯರನ್ನು ಬಂಧಿಸಿರುವ ಘಟನೆ ನಡೆದಿದೆ. ತಾಲೂಕಿನ ಬಲ್ಲೇನಹಳ್ಳಿ ಗ್ರಾಮದ ಎಸ್.ಎಂ.ಕ್ಲಿನಿಕ್ ನಡೆಸುತ್ತಿದ್ದ ವ್ಯಕ್ತಿ ಶಾಜು(50) ಮತ್ತು ಪಟ್ಟಣದ ಹೊಸ ಕಿಕ್ಕೇರಿ ರಸ್ತೆಯಲ್ಲಿ ಮೊಳೆರೋಗ(ಪೈಲ್ಸ್)ಕ್ಕೆ ಚಿಕಿತ್ಸೆ ನೀಡುತ್ತಿದ್ದ ಬಿಸ್ವಾಸ್(40) ಎಂಬುವವರೇ ಬಂಧಿತ ವ್ಯಕ್ತಿಗಳಾಗಿದ್ದಾರೆ.

ಘಟನೆ ವಿವರ:
ಕಳೆದ 20ವರ್ಷಗಳಿಂದ ಬೂಕನಕೆರೆ ಹೋಬಳಿಯ ಬಲ್ಲೇನಹಳ್ಳಿ ಗ್ರಾಮದಲ್ಲಿ ಆರೋಗ್ಯ ಇಲಾಖೆಯ ಯಾವುದೇ ಲೈಸೆನ್ಸ್ ಪಡೆಯದೇ ಅನಧಿಕೃತವಾಗಿ ಎಸ್.ಎಂ.ಕ್ಲಿನಿಕ್ ಎಂಬ ಚಿಕಿತ್ಸಾ ಕೇಂದ್ರವನ್ನು ತೆರೆದಿದ್ದರು. ಆಯುರ್ವೇದ ವೈದ್ಯನೆಂದು ಈ ಭಾಗದ ಜನರನ್ನು ನಂಬಿಸಿ ಚಿಕಿತ್ಸೆ ನೀಡುತ್ತಿದ್ದ ಕೇರಳ ಮೂಲದ ಶಾಜು ಹಾಗೂ ಪಟ್ಟಣದ ಹೊಸ ಕಿಕ್ಕೇರಿ ರಸ್ತೆಯ ಕೆ.ಬಿ.ಈ. ವಾಣಿಜ್ಯ ಕಟ್ಟಡದಲ್ಲಿ ಕ್ಲಿನಿಕ್ ತೆರೆದಿದ್ದ ಕೋಲ್ಕತ್ತಾ ಮೂಲದ ಬಿಸ್ವಾಸ್ ಎಂಬಾತ ಮೊಳೆರೋಗದ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದನು.

ಇವರುಗಳ ವಿರುದ್ಧ ತಮಗೆ ಬಂದ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮಂಚೇಗೌಡ, ಜಿಲ್ಲಾ ಆಯುಷ್ ಅಧಿಕಾರಿ ಡಾ.ಸೀತಾಲಕ್ಷ್ಮೀ, ತಾಲೂಕು ಆರೋಗ್ಯಾಧಿಕಾರಿ ಡಾ.ಅರವಿಂದ್ ಚಿಕ್ಕಾಡೆ ಅವರನ್ನೊಳಗೊಂಡ ಆರೋಗ್ಯ ಇಲಾಖೆಯ ಅಧಿಕಾರಿಗಳ ತಂಡವು ಎರಡೂ ಚಿಕಿತ್ಸಾ ಕೇಂದ್ರಗಳ ಮೇಲೆ ದಿಢೀರ್ ದಾಳಿಸಿದಾಗ ಚಿಕಿತ್ಸಾಲಯ ನಡೆಸಲು ಬೇಕಾದ ಅಗತ್ಯ ದಾಖಲೆಗಳನ್ನು ಹಾಜರು ಪಡಿಸುವಲ್ಲಿ ವಿಫಲರಾದರು.

ಈ ಹಿನ್ನೆಲೆಯಲ್ಲಿ ಎರಡೂ ಕೇಂದ್ರಗಳಿಗೆ ಬೀಗ ಮುದ್ರೆ ಹಾಕಿದ ಅಧಿಕಾರಿಗಳುಶಾಜು ವಿರುದ್ಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಹಾಗೂ ಬಿಸ್ವಾಸ್ ವಿರುದ್ದ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದರು. ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕರ್ನಾಟಕ ಖಾಸಗಿ ವೈದ್ಯ ಪ್ರಾಧಿಕಾರ ಕಾಯಿದೆ-2007ರ ಅನ್ವಯ ಖಾಸಗಿ ಕ್ಲಿನಿಕ್ ನಡೆಸಲು ಬೇಕಾದ ಅಗತ್ಯ ಲೈಸೆನ್ಸ್ ಪಡೆಯದೇ ಅನಧಿಕೃತ ಕ್ಲಿನಿಕ್ ನಡೆಸುತ್ತಿದ್ದ ಆರೋಪದ ಇಬ್ಬರನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಎರಡನೇ ಬಾರಿ ಸಿಕ್ಕಿಬಿದ್ದ: ಬಿಸ್ವಾಸ್ ಕಳೆದ ವರ್ಷ ಹೊಸ ಕಿಕ್ಕೇರಿ ರಸ್ತೆಯಲ್ಲಿ ಕ್ಲಿನಿಕ್ ನಡೆಸುತ್ತಿದ್ದಾಗ ಇದೇ ರೀತಿ ದಾಳಿ ನಡೆಸಿ ಬಂದಿಸಿ ಆತನ ವಿರುದ್ದ ಪ್ರಕರಣ ದಾಖಲಿಸಲಾಗಿತ್ತು. ಜಾಮೀನು ಪಡೆದು ಹೊರಬಂದಿದ್ದ ಬಿಸ್ವಾಸ್ ಮತ್ತೆ ಅದೇ ಸ್ಥಳದಲ್ಲಿ ಮೊಳೆರೋಗಕ್ಕೆ ಚಿಕಿತ್ಸೆ ನೀಡುವ ಕಾಯಕವನ್ನು ಆರೋಗ್ಯ ಇಲಾಖೆಯ ಅಧಿಕಾರಿಗಳ ಕಣ್ಣು ತಪ್ಪಿಸಿ ಮುಂದುವರೆಸಿದ್ದನು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮಂಚೇಗೌಡ ತಿಳಿಸಿದ್ದಾರೆ.

Write A Comment