ಕರ್ನಾಟಕ

ನಾಯಕತ್ವ ಬದಲಾವಣೆ ಚರ್ಚೆಗಳು ನಡೆಯುತ್ತಿದ್ದರೂ ಸಚಿವರು ಮೌನ ವಹಿಸಿದಕ್ಕೆ ಸಿದ್ದು ಬಣದ ಆಕ್ರೋಶ

Pinterest LinkedIn Tumblr

Siddu

ಬೆಂಗಳೂರು, ಏ.29- ನಾಯಕತ್ವ ಬದಲಾವಣೆ ವಿಷಯದಲ್ಲಿ ಭಾರಿ ಚರ್ಚೆಗಳು ನಡೆಯುತ್ತಿದ್ದರೂ ಸಂಪುಟದ ಸಚಿವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬೆಂಬಲಕ್ಕೆ ಬಾರದೆ ಮೌನ ತಾಳಿರುವುದು ಸಿದ್ದು ಬಣದ ಆಕ್ರೋಶಕ್ಕೆ ಕಾರಣವಾಗಿದೆ. ತೋಟಗಾರಿಕೆ ಸಚಿವ ಶಾಮನೂರು ಶಿವಶಂಕರಪ್ಪ ಅವರನ್ನು ಹೊರತು ಪಡಿಸಿ ಸಂಪುಟದ ಯಾವ ಸಚಿವರೂ ಬಾಯಿ ಬಿಡದೆ ಮೌನವಾಗಿದ್ದಾರೆ. ಸಂಪುಟದಲ್ಲಿ ಇರುವ ಅಸಮರ್ಥರು ಮತ್ತು ನಿಷ್ಕ್ರಿಯ ಸಚಿವರನ್ನು ಕಿತ್ತು ಹಾಕುವ ಸಲುವಾಗಿ ಸಿದ್ದರಾಮಯ್ಯ ಅವರೇ ತಮ್ಮ ಬೆಂಬಲಿಗರ ಮೂಲಕ ಸಮಾನ ಮನಸ್ಕ ಶಾಸಕರ ಸಭೆ ನಡೆಸಿ ಪೂರ್ಣ ಪ್ರಮಾಣದ ಸಂಪುಟ ಪುನಾರಚನೆಯ ಬೇಡಿಕೆಯನ್ನು ತೇಲಿಬಿಟ್ಟಿದ್ದರು.

ಇದು ಸಂಪುಟದ ಬಹಳಷ್ಟು ಸಚಿವರ ಅಸಮಾಧಾನಕ್ಕೆ ಕಾರಣವಾಗಿದೆ. ಆರಂಭದಿಂದಲೂ ಸಿದ್ದರಾಮಯ್ಯ ಅವರನ್ನು ಸಂಪುಟದಲ್ಲಿರುವ ಮೂಲ ಕಾಂಗ್ರೆಸ್‌ನ ಕೆಲ ಸಚಿವರು ಮಲತಾಯಿ ಧೋರಣೆಯಿಂದಲೇ ನೋಡುತ್ತಿದ್ದಾರೆ. ಸಿದ್ದರಾಮಯ್ಯ ಮುಖ್ಯಮಂತ್ರಿ ಆದ 6 ತಿಂಗಳಲ್ಲೇ ನಾಯಕತ್ವ ಬದಲಾವಣೆಯ ಕೂಗೆದ್ದಿತ್ತು. ಅಂದಿನಿಂದ ಈವರೆಗೂ ಸುಮಾರು 70ಕ್ಕೂ ಹೆಚ್ಚು ಬಾರಿ ನಾಯಕತ್ವ ಬದಲಾವಣೆಯ ಕುರಿತಂತೆ ಪ್ರಮುಖ ಚರ್ಚೆಗಳಾಗಿವೆ.

ದಲಿತ ಮುಖ್ಯಮಂತ್ರಿ ಆಗಬೇಕೆಂದು ಕೆಲವರು ಆಂದೋಲನ ನಡೆಸಿದರು. ಅರ್ಕಾವತಿ ಬಡಾವಣೆಯ ಡಿನೋಟಿಫಿಕೇಷನ್ ಹಗರಣದಲ್ಲಿ ಸಿದ್ದರಾಮಯ್ಯ ಅವರ ತಲೆ ದಂಡಕ್ಕೆ ಪಟ್ಟು ಹಿಡಿಯಲಾಗಿತ್ತು. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೆಂಪೇಗೌಡರ ಬದಲು ಟಿಪ್ಪು ಸುಲ್ತಾನ್ ಹೆಸರಿಡಬೇಕೆಂದು ಸಾಹಿತಿ ಗಿರೀಶ್‌ಕಾರ್ನಾಡ್ ಮುಖ್ಯಮಂತ್ರಿ ಸಮ್ಮುಖದಲ್ಲೇ ಹೇಳಿಕೆ ನೀಡಿದ್ದರಿಂದ ಒಂದಷ್ಟು ದಿನ ವಿವಾದ ಭುಗಿಲೆದ್ದಿತ್ತು. ದುಬಾರಿ ವಾಚ್ ಪ್ರಕರಣ, ಎಸಿಬಿ ರಚನೆ, ತಮ್ಮ ಮಗ ಡಾ.ಯತೀಂದ್ರ ಅವರ ಮಾಲೀಕತ್ವದ ಕಂಪೆನಿಗೆ ವಿಕ್ಟೋರಿಯಾ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಪ್ರಯೋಗಾಲಯ ಗುತ್ತಿಗೆ ನೀಡಿದ್ದು ರಾಜಕೀಯ ಬಿರುಗಾಳಿ ಎಬ್ಬಿಸಿದ್ದ ಪ್ರಮುಖ ವಿಷಯವಾಗಿದ್ದು, ಸಿದ್ದರಾಮಯ್ಯ ಅವರ ತಲೆ ತಂಡಕ್ಕೆ ಗರಿಷ್ಠ ಮಟ್ಟದ ಹೋರಾಟ ನಡೆಯುವಂತೆ ಮಾಡಿದ್ದವು.

ಬಿಬಿಎಂಪಿ ಚುನಾವಣೆ, ಜಿಪಂ, ತಾಪಂ ಚುನಾವಣೆ, ಹೆಬ್ಬಾಳ, ದೇವದುರ್ಗ ಉಪಚುನಾವಣೆಗಳ ಹಿನ್ನಡೆ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರ ವಿರುದ್ಧ ಕಾಂಗ್ರೆಸ್ ಒಳ ವಲಯದಲ್ಲಿ ದನಿ ಎದ್ದಿತ್ತು. ನಾಯಕತ್ವ ಬದಲಾವಣೆಗೆ ಚರ್ಚೆ ನಡೆದಿತ್ತು. ಆದರೆ, ಇದ್ಯಾವ ಸಂದರ್ಭವನ್ನೂ ಹೈಕಮಾಂಡ್ ಗಂಭೀರವಾಗಿ ಪರಿಗಣಿಸಿರಲಿಲ್ಲ. ಇತ್ತೀಚಿನ ದಿನಗಳಲ್ಲಿ ಸಮಾನ ಮನಸ್ಕ ಶಾಸಕರ ಸಭೆಗಳು, ದೆಹಲಿಯಲ್ಲಿ ನಡೆದ ಸಂಸದರ ಸಭೆ ಸಿದ್ದರಾಮಯ್ಯ ಅವರ ವಿರುದ್ಧ ಮಡುಗಟ್ಟಿರುವ ಅಸಮಾಧಾನದ ಪ್ರತೀಕವಾಗಿವೆ. ಆದರೆ, ಇದೀಗ ಈ ವಿದ್ಯಮಾನಗಳು ಗಂಭೀರ ಪರಿಸ್ಥಿತಿಯನ್ನು ನಿರ್ಮಿಸಿದ್ದು, ಹೈಕಮಾಂಡ್ ಯಾವುದೇ ನಿರ್ಧಾರ ತೆಗೆದುಕೊಳ್ಳುವ ಸನ್ನಿವೇಶ ಸೃಷ್ಟಿಸಿದೆ.

ಹೀಗಾಗಿ ಸಿದ್ದರಾಮಯ್ಯ ಬಣ ಕೂಡ ಚುರುಕಾಗಿದ್ದು, ಪ್ರತಿ ತಂತ್ರಗಾರಿಕೆಯಲ್ಲಿ ಮುಳುಗಿದೆ. ನಾಯಕತ್ವದ ಪರವಾಗಿ ಮಾತನಾಡುವಂತೆ ಕೆಲ ಸಚಿವರ ಮೇಲೆ ಒತ್ತಡ ಹೇರಲಾಗುತ್ತಿದೆ.

Write A Comment