ಕರ್ನಾಟಕ

ಏಕವಚನದಲ್ಲಿ ಬೈಗುಳ-ಬಹುವಚನದಲ್ಲಿ ಪೌರುಷ

Pinterest LinkedIn Tumblr

siddu-bsyಬೆಂಗಳೂರು, ಏ. ೨೯ – ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪರವರು ಕೈಗೊಂಡಿರುವ ಬರ ಅಧ್ಯಯನ ಪ್ರವಾಸ, ಸವಾಲು – ಪ್ರತಿ ಸವಾಲಿಗೆ ವೇದಿಕೆಯಾಗಿ, ಹಾಲಿ ಹಾಗೂ ಮಾಜಿ ಮುಖ್ಯಮಂತ್ರಿಗಳ ನಡುವಿನ ರಾಜಕೀಯ ಕದನವಾಗಿ ಬದಲಾಗಿದೆ.
ಬರ ಪ್ರವಾಸದಲ್ಲಿ ಪರಸ್ಪರ ಏಕ ವಚನದಲ್ಲಿ ಬೈಯ್ದಾಡಿರುವ ಈ ಇಬ್ಬರೂ ನಾಯಕರು, ರಾಜಕೀಯ ಶಕ್ತಿ, ತಾಕತ್ ತೋರಿಸುವ ಸವಾಲಿನ ಮಾತುಗಳನ್ನು ಆಡಿದ್ದಾರೆ.
ರಾಜ್ಯ ಸರ್ಕಾರದ ಬರ ನಿರ್ವಹಣೆ ವೈಫಲ್ಯದ ಬಗ್ಗೆ ಕೆಂಡ ಮಂಡಲವಾಗಿ ಬಿ.ಎಸ್. ಯಡಿಯೂರಪ್ಪ ವಿಧಾನಸೌಧದ ಮುಂದೆ 2 ಲಕ್ಷ ಜನ ಸೇರಿಸಿ ಹೋರಾಟ ನಡೆಸುವುದಾಗಿ ನೀಡಿರುವ ಹೇಳಿಕೆ ಸಿಎಂ ಸಿದ್ದರಾಮಯ್ಯರವರನ್ನು ಕೆರಳಿಸಿದ್ದು, ಅವನಿಗೊಬ್ಬನಿಗೆ ಜನ ಸೇರಿರೋದು ಗೊತ್ತಿರೋದು ಅವನು 2 ಲಕ್ಷ ಸೇರಿಸಿದರೆ ನಾನು 4 ಲಕ್ಷ ಸೇರಿಸಿ ಶಕ್ತಿ, ತಾಕತ್ ಏನೆಂಬುದನ್ನು ತೋರಿಸುತ್ತೇನೆ ಎಂದು ಏಕ ವಚನದಲ್ಲಿ ಸಿಎಂ ಸಿದ್ದರಾಮಯ್ಯ ಯಡಿಯೂರಪ್ಪರ ವಿರುದ್ಧ ಗುಡುಗಿದ್ದಾರೆ.
ಇದಕ್ಕೂ ಮೊದಲು ನಿನ್ನೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಸಿಎಂಗೆ ಏನಾಗಿದೆ ಧಾಡಿ ಬರ ಪರಿಹಾರಕ್ಕೆ ಸಾವಿರ ಕೋಟಿ ನೀಡಲು ಏನು ತೊಂದರೆ, 2 ದಿನ ಕಾಯುತ್ತೇನೆ ರಾಜ್ಯ ಸರ್ಕಾರ ಹಣ ಬಿಡುಗಡೆ ಮಾಡದಿದ್ದರೇ 2 ಲಕ್ಷ ರೈತರೊಂದಿಗೆ ವಿಧಾನಸೌಧದ ಮುಂದೆ ಧರಣಿ ನಡೆಸುತ್ತೇನೆ ಎಂದು ಧಮಕಿ ಹಾಕಿದ್ದರು.
ಈ ಬರ ಪ್ರವಾಸ ಹಾಲಿ ಸಿಎಂ ಮಾಜಿ ಸಿಎಂಗಳ ಬಲ ಪ್ರದರ್ಶನಕ್ಕೂ ಕಾರಣವಾಗಿ, ನಿತ್ಯ ಆರೋಪ – ಪ್ರತ್ಯಾರೋಪಗಳು ಎಗ್ಗಿಲ್ಲದೆ ನಡೆದಿದೆ. ಇಬ್ಬರು ನಾಯಕರು ಹೋದೆಡೆಯಲ್ಲೆಲ್ಲಾ ಪರಸ್ಪರ ವಾಚಮಾಗೋಚರವಾಗಿ ಟೀಕೆಗಳನ್ನು ಮಾಡುತ್ತಿದ್ದಾರೆ.
ಗುಲ್ಬರ್ಗ ವರದಿ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮುಖ್ಯಮಂತ್ರಿ ಖುರ್ಚಿಗೆ ಕಂಟಕ ಬಂದಿರುವುದರಿಂದ ಅವರು ರಾಜ್ಯದಲ್ಲಿ ಬರ ವೀಕ್ಷಣೆ ಹೆಸರಲ್ಲಿ ಕಾಂಗ್ರೇಸ್ ಱ್ಯಾಲಿ ಮಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಆರೋಪಿಸಿದರು.
ಅವರು ಇಂದು ಶಹಾಪೂರ ತಾಲೂಕಿನಲ್ಲಿ ಬರ ಅಧ್ಯಯನ ಪ್ರವಾಸ ಕೈಗೊಂಡು ಮುಡಬೂಳ ಕೆರೆಗೆ ಭೇಟಿ, ಶಹಪೂರ ತಾಲ್ಲೂಕಿನ ಮಾತನಾಡಿದ ಅವರು, ರಾಜ್ಯದಲ್ಲಿ ಜನ ರಾಜ್ಯದಲ್ಲಿ ಜನ ಬರದಿಂದ ತತ್ತರಿಸಿದ್ದರು ಬರ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಸಂಪುಟದ ಸದಸ್ಯರು ಬೇಜವಾಬ್ದಾರಿ ಹೇಳಿಕೆ ನೀಡುತ್ತಾ ಇದ್ದಾರೆ. ಜನ ಕುಡಿಯುವ ನೀರಿಗಾಗಿ ಪರದಾಡುತ್ತಿದ್ದಾರೆ, ಜಾನುವಾರುಗಳು ನೀರು, ಮೇವುಗಾಗಿ ಪರದಾಡುತ್ತಿವೆ. ಜನ ಜಾನುವಾರುಗಳಿಗೆ ಸೂಕ್ತ ವ್ಯವಸ್ಥೆ ಮಾಡುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. ಕಾಟಾಚಾರಕ್ಕೆ ರಾಜ್ಯ ಸರ್ಕಾರ ಬರ ಅಧ್ಯಯನ ನಡೆಯುತ್ತಿದೆ ಎಂದು ಅವರು ಟೀಕಿಸಿದರು.
ರಾಜ್ಯ ಸರ್ಕಾರದ ಬೇಜವಾಬ್ದಾರಿ ಕಾರ್ಯವೈಖರಿಯ ವಿರುದ್ಧ 2 ಲಕ್ಷ ರೈತರನ್ನು ಸೇರಿಸಿ ಹೋರಾಟ ಮಾಡುತ್ತೇನೆ ಎಂದು ಗುಡುಗಿದರು. ಇದೇ ಸಂದರ್ಭದಲ್ಲಿ ಶಹಾಪುರ ತಾಲೂಕಿನ ಮೂಡಿಬೂಳ ಕೆರೆಯ ಹೂಳನ್ನು ಸ್ವಯಂಪ್ರೇರಿತವಾಗಿ ಎತ್ತುತ್ತಿರುವ ರೈತರ ಕೆಲಸವನ್ನು ಪ್ರಶಂಸಿಸಿ ಇದನ್ನೇ ರಾಜ್ಯಸರ್ಕಾರ ಮಾದರಿಯಾಗಿ ಇಟ್ಟುಕೊಂಡು ಕೆರೆಗಳ ಹೂಳೆತ್ತುವ ಕೆಲಸ ಮಾಡಲಿ ಎಂದರು.
ಸಿಎಂ ಪ್ರತಿ ಸವಾಲು ಸವಾಲ್
ಯಡಿಯೂರಪ್ಪ ಒಬ್ರಿಗೆನ್ರಿ ಜನ ಸೇರಿಸುವುದು ಗೋತ್ತಿರೋದು ನನಗೂ ಸಹ ಜನ ಸೇರಿಸುವ ತಾಕತ್ ಇದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿ ಸವಾಲು ಹಾಕಿದರು.
ಇಂದು ಬೆಳಿಗ್ಗೆ ಮೈಸೂರಿನ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬರ ನಿರ್ವಹಣೆಯಲ್ಲಿ ಸರ್ಕಾರ ಎಡವಿರುವುದನ್ನು ಟೀಕಿಸಿರುವ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ವಿಧಾನಸೌಧದ ಮುಂದೆ 2 ಲಕ್ಷ ಜನ ಸೇರಿಸಿ ಸರ್ಕಾರದ ವಿರುದ್ಧ ಪ್ರತಿಭಟಿಸುವುದಾಗಿ ನೀಡಿರುವ ಹೇಳಿಕೆಗೆ ಕೆಂಡಾಮಂಡಲರಾದ ಮುಖ್ಯಮಂತ್ರಿ ಅವನಿಗೋಬ್ಬನಿಗೇನ್ರಿ ಜನ ಸೇರಿಸೋದು ಗೋತ್ತಿರೊದು ಅವನು 2 ಲಕ್ಷ ಜನ ಸೇರಿಸಿದರೆ ನಾನು 4 ಲಕ್ಷ ಜನ ಸೇರಿಸುವ ಶಕ್ತಿ, ತಾಕತ್ತು ಇದೆ ಎಂದು ಏಕವಚನದಲ್ಲಿ ಗುಡುಗಿದರು.
ಸತ್ಯಾ ಸತ್ಯತೆ ಅರಿಯದೆ ಪ್ರಚಾರಕ್ಕಾಗಿ ಟೀಕಿಸುವುದು ಒಳ್ಳೆಯದಲ್ಲ. ಸರ್ಕಾರ ಬರ ನಿರ್ವಹಣೆಗೆ ಎಲ್ಲಾ ರೀತಿಯ ಕ್ರಮ ಕೈಗೊಂಡಿದೆ. ನೀರು, ಮೇವು ಹಾಗೂ ಉದ್ಯೋಗ ಒದಗಿಸಲು ಬದ್ದವಾಗಿದೆ. ಅಧಿಕಾರಿಗಳಿಗೆ ಈ ಸಂಬಂಧ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ. ನಾನು ಸೇರಿದಂತೆ ಎಲ್ಲಾ ಸಚಿವರು, ಶಾಸಕರು ಈಗಾಗಲೇ ಎಲ್ಲಾ ಜಿಲ್ಲೆಯ ಕ್ಷೇತ್ರಗಳಲ್ಲಿ ಪ್ರವಾಸ ಮಾಡಿ ಪರಿಶೀಲನೆ ನಡೆಸಿ ಕ್ರಮ ಕೈಗೊಂಡಿದ್ದಾರೆ. ಹೀಗಾಗಿ ಬಿ.ಎಸ್.ವೈ ಮಾಡಿರುವ ಆರೋಪದಲ್ಲಿ ಯಾವುದೇ ಉರುಳಿಲ್ಲ ಎಂದು ವಾಗ್ದಾಳಿ ನಡೆಸಿದರು.
ಮಾಧ್ಯಮ ಸೃಷ್ಟಿ
ಸಂಸದರು ದೆಹಲಿಯಲ್ಲಿ ಸಭೆ ಸೇರಿ ನಿಮ್ಮ ವಿರುದ್ದ ಹೈಕಮಾಂಡ್ ಗೆ ದೂರು ನೀಡಿದ್ದಾರೆ. ಜೊತೆಗೆ ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ರವರು ಹೈಕಮಾಂಡ್ ಭೇಟಿ ಮಾಡಿ ಚರ್ಚಿಸಿದ್ದಾರೆ. ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಎಸ್.ಎಂ ಕೃಷ್ಣ ನಮ್ಮ ಹಿರಿಯ ನಾಯಕರು ಇದರ ಬಗ್ಗೆ ವಿಶೇಷ ಅರ್ಥ ಕಲ್ಪಿಸುವುದು ಬೇಡ. ಮುಖ್ಯಮಂತ್ರಿಗಳ ವಿರುದ್ದ ಷಡ್ಯಂತ್ರ ನಡೆಯುತ್ತಿದೆ ಎಂಬುವುದು ಮಾಧ್ಯಮದವರ ಸೃಷ್ಠಿ ಎಂದು ಕಿಡಿ ಕಾರಿದರು.
ಕೆ.ಆರ್ ಕ್ಷೇತ್ರದ ಶಾಸಕ ಎಂ.ಕೆ ಸೋಮಶೇಖರ್ ನಕಲಿ ಜಾತಿ ಪ್ರಮಾಣ ಪತ್ರ ಸಾಬೀತಾಗಿರುವ ಬಗ್ಗೆ ನನಗೆ ತಿಳಿದಿಲ್ಲ ಈ ಪ್ರಕರಣ ನ್ಯಾಯಾಲಯದಲ್ಲಿದೆ. ಈ ಸಂಬಂಧ ಜಿಲ್ಲಾಧಿಕಾರಿ ಶಿಖಾ ಅವರಿಗೆ ವರದಿ ಸಲ್ಲಿಸುವಂತೆ ಕೇಳಿದ್ದೇನೆ. ವರದಿ ಬಂದ ನಂತರ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಹೇಳಿದರು.

Write A Comment