ಕರ್ನಾಟಕ

ಮತ್ತೆ ಕೃಷ್ಣಾವತಾರ : ಸಿದ್ದು ಜಾಗಕ್ಕೆ ಎಸ್ಎಂ ಕೃಷ್ಣ – ಹೈಕಮಾಂಡ್ ಹೊಸ ಆಟ

Pinterest LinkedIn Tumblr

congress_logoಆಡಳಿತಾರೂಢ ಕಾಂಗ್ರೆಸ್ ಪಕ್ಷದಲ್ಲಿ ಈಗ ನಡೆಯುತ್ತಿರುವ ವಿದ್ಯಮಾನಗಳನ್ನು ಗಮನಿಸಿದಲ್ಲಿ ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧಿಕಾರಾವಧಿ ಮೊಟಕುಗೊಳ್ಳುವ ದಿನಗಳು ಸಮೀಪಿಸುತ್ತಿರುವಂತಿದೆ.
ಬದಲಾದ ಪರಿಸ್ಥಿತಿಯಲ್ಲಿ ಉತ್ತರಾಧಿಕಾರಿ ಸ್ಥಾನಕ್ಕೆ ಪ್ರಬಲ ಪೈಪೋಟಿ ನಡೆದಿದ್ದು, ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ, ಲೋಕಸಭೆಯಲ್ಲಿ ಕಾಂಗ್ರೆಸ್ ಬಣದ ನಾಯಕ ಮಲ್ಲಿಕಾರ್ಜುವ ಖರ್ಗೆ, ಗೃಹ ಮಂತ್ರಿ ಡಾ. ಜಿ. ಪರಮೇಶ್ವರ್ ಅವರ ಹೆಸರುಗಳು ಪ್ರಮುಖವಾಗಿ ಕೇಳಿ ಬರುತ್ತಿವೆ.

ಇತ್ತೀಚಿನ ದಿನಗಳಲ್ಲಿ, ಸಿದ್ದರಾಮಯ್ಯನವರು ಪದೆ ಪದೆ ಉಳಿದ ಅವಧಿಗೆ ಕೂಡ ತಾವೇ ಮುಖ್ಯಮಂತ್ರಿ ಎಂಬುದಾಗಿ ಹೇಳುತ್ತಲಿದ್ದಾರೆ. ಹಾಗೆ ಮತ್ತೆ ಮತ್ತೆ ಅದೇ ವಿಷಯವನ್ನು ಪುನರಾವರ್ತಿಸುವ ಮೂಲಕ ತಮ್ಮ ಕುರ್ಚಿ ಈಗ ಈ ಹಿಂದಿನಂತೆ ಬಲವಾಗಿ ಉಳಿದಿಲ್ಲ ಎಂಬುದನ್ನು ಅವರೇ ಋಜುವಾತುಪಡಿಸಿದ್ದಾರೆ.
ಆಗಿಂದಾಗ್ಗೆ ಬೇಡದ ಕಾರಣಗಳಿಗೆ, ವಿವಾದಕ್ಕೆ ಗುರಿಯಾಗುತ್ತ ಬಂದಿರುವ ಸಿದ್ದರಾಮಯ್ಯ ಅವರು ಸಿಕ್ಕಿಹಾಕಿಕೊಂಡ ಇತ್ತೀಚಿನ ಸುಳಿ ಎಂದರೆ, ತಮ್ಮ ವೈದ್ಯ ಮಗ ಕೂಡ ಪಾಲುದಾರಿ ಆಗಿರುವ ಸಂಸ್ಥೆಗೆ ಸರಕಾರಿ ಬ‌ಡತನದ ಆಸ್ಪತ್ರೆಯ ಗುತ್ತಿಗೆಯನ್ನು ದಯಪಾಲಿಸಿದ್ದು.

ವೈದ್ಯ ಪುತ್ರನ ಸಂಸ್ಥೆಗೆ ಗುತ್ತಿಗೆ ನೀಡಿ ಅಧಿಕಾರ ದುರುಪಯೋಗ ಮಾಡಿಕೊಂಡಿರುವುದು ತೀರ ಇತ್ತೀಚಿನ ಪ್ರಕರಣವಾಗಿದ್ದರೂ ಕೂಡ ಸಿದ್ದರಾಮಯ್ಯನವರಿಗೆ ಸಂಬಂಧಿಸಿದಂತೆ ಈ ರೀತಿಯ ಹಗರಣಗಳ ಸರಮಾಲೆಯೆ ಅವರ ಅಧಿಕಾರವಧಿಯನ್ನು ಅಮರಿಕೊಂಡಿದೆ.
ಇನ್ನು ಇಂಥ ಪ್ರಕರಣಗಳ ಹೊರೆಯಿಂದಾಗಿ ಅವರು ಸ್ವತಃ ತಮ್ಮ ಪಕ್ಷ ಸಂಸತ್ ಸದಸ್ಯರು, ಹಿರಿಯ ಮುಖಂಡರು ಹಾಗೂ ವರಿಷ್ಠ ಮಂಡಳಿಯನ್ನು ಎದುರು ಹಾಕಿಕೊಂಡಿರುವುದು ಅವರ ರಾಜಕೀಯ ಭವಿಷ್ಯದ ಮೇಲೆ ಕರಿ ನೆರಳಿನ ಕಾರ್ಮೋಡವನ್ನು ದಟ್ಟವಾಗಿ ಕವಿಯುವಂತೆ ಮಾಡುವಲ್ಲಿ ಸಫಲವಾಗಿದೆ.
ಮೊದಲ ದಿನದಿಂದಲೇ ಠೇಂಕಾರ
ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಮೊದಲ ದಿನವೇ ಅಧಿಕಾರದ ದರ್ಪವನ್ನು ಮೆರೆದರು ಎಂಬುದು ಮೂಲ ಕಾಂಗ್ರೆಸ್ ವಾಸಿಗಳ ಮುನಿಸು. ಪೂರ್ಣ ಪ್ರಮಾಣದ ಸಚಿವ ಸಂಪುಟ ರಚನೆಗೆ ಮೊದಲೇ ಯಾರೊಂದಿಗೂ ಸಮಾಲೋಚನೆ ಕೂಡ ನಡೆಸದೆ ಹಲವಾರು ಮಹತ್ತರ ತೀರ್ಮಾನಗಳನ್ನು ಒಂಟಿಯಾಗಿ ಕೈಗೊಂಡಿರುವುದನ್ನು ಹಿರಿಯ ಕಾಂಗ್ರೆಸ್ ನಾಯಕರು ಇನ್ನು ಮರೆತಿಲ್ಲ.
ಹಂಚಿಕೆಯಾಗಿ ಹಲವಾರು ವರ್ಷಗಳಿಂದ ಚಾತಕ ಪಕ್ಷಿಗಳಂತೆ ಮೂರು ಸಾವಿರ ಜನ ಸ್ವಾಧೀನಕ್ಕಾಗಿ ಕಾಯುತ್ತ ಕುಳಿತಿರುವಾಗ ಸಿದ್ದರಾಮಯ್ಯನವರು ಅರ್ಕಾವತಿ ಬಡಾವಣೆಯ ಕೆಲ ಪ್ರದೇಶವನ್ನು ಡಿನೋಟಿಫೈ ಮಾ‌ಡಿ ಜೇನುನೊಣಗಳ ಗೂಡಿಗೆ ಕೈ ತೂರಿಸಿಬಿಟ್ಟರು.
ಇದಲ್ಲದೆ ಸುಮಾರು ಎಪ್ಪತ್ತು ಲಕ್ಷ ರೂಪಾಯಿ ಮೊತ್ತದ ದುಬಾರಿ ಹುಬ್ಲೊಟ್ ಕೈಗಡಿಯಾರ ಕಾಣಿಕೆ ಪ್ರಕರಣ, ಸ್ವಂತ ರಾಜಕೀಯ ಪ್ರಯೋಜನಕ್ಕಾಗಿ ಭ್ರಷ್ಟಾಚಾರ ವಿರೋಧಿ ವಿಭಾಗ ರಚನೆ, ಲೋಕಾಯುಕ್ತ ಸಂಸ್ಥೆ ಬಲ ಕುಗ್ಗಿಸುವುದಕ್ಕಾಗಿ ಹಲವು ಹತ್ತು ಹುನ್ನಾರಗಳು, ಪಕ್ಷದೊಳಗಿನ ಪ್ರಮುಖ ಸಮುದಾಯಗಳ ಮುಖಂಡರಿಗೆ ಕವಡೆ ಕಾಸಿನ ಕಿಮ್ಮತ್ತು, ರಾಜ್ಯದ ಹಿರಿಯ ಕಾಂಗ್ರೆಸ್ ನಾಯಕರ ಬಗ್ಗೆ ಉದಾಸೀನ ಮನೋಭಾವನೆ ರೂಢಿಸಿಕೊಳ್ಳುವ ಮೂಲಕ ಸಿದ್ದರಾಮಯ್ಯನವರು, ತಾವೇ ತಮ್ಮ ರಾಜಕೀಯ ಸಮಾಧಿಗೆ ಗುದ್ದಲಿ ಪೂಜೆ ನೆರವೇರಿಸಿಕೊಂಡರೆಂದು ನಿಷ್ಠಾವಂತ ಕಾಂಗ್ರೆಸಿಗರು ಈಗ ತೆರೆಮರೆಯಲ್ಲಿ ಮನಬಿಚ್ಚಿ ಅನಿಸಿಕೆಗಳನ್ನು ಹರಿಬಿಟ್ಟಿದ್ದಾರೆ.

Write A Comment