ಕರ್ನಾಟಕ

ಪರಿಶಿಷ್ಟ ಜಾತಿಯವಳಾದ್ದರಿಂದ ನನ್ನನ್ನು ಗುರಿಮಾಡಲಾಗಿದೆ: ಸಿಐಡಿ ಎಸ್ ಪಿ ಮಧುರ ವೀಣಾ ಆರೋಪ

Pinterest LinkedIn Tumblr

Madhura veena-sonia narang

ಬೆಂಗಳೂರು: ನಾನು ಪರಿಶಿಷ್ಟ ಜಾತಿಯವಳಾದ್ದರಿಂದ ನನ್ನ ಮೇಲೆ ಸುಖಾಸುಮ್ಮನೆ ಸುಲಿಗೆ ಆರೋಪ ಹೊರಿಸಲಾಗುತ್ತಿದೆ ಎಂದು ಸಿಐಡಿ ಎಸ್ ಪಿ ಮಧುರ ವೀಣಾ ಆರೋಪಿಸಿದ್ದಾರೆ.

ಹೊಟೆಲ್ ಉದ್ಯಮಿಗಳಿಂದ ಹಣ ಸುಲಿಗೆ ಮಾಡಿದ ಆರೋಪ ಎದುರಿಸುತ್ತಿರುವ ಸಿಐಡಿ ಎಸ್ ಪಿ ಮಧುರ ವೀಣಾ ಅವರು ತಮ್ಮ ವಿರುದ್ಧ ಆರೋಪಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಜಿ.ಪರಮೇಶ್ವರ ಅವರಿಗೆ ಪತ್ರ ಬರೆದಿದ್ದು, ಪತ್ರದಲ್ಲಿ “ನಾನು ಪರಿಶಿಷ್ಠ ಜಾತಿಯವಳಾದ್ದರಿಂದ ಸಿಐಡಿ ಡಿಜಿ ಸೋನಿಯಾ ನಾರಂಗ್ ಅವರು ನನ್ನ ಮತ್ತು ನನ್ನ ಇತರೆ ಇಬ್ಬರು ಸಹ ಅಧಿಕಾರಿಗಳನ್ನು ಗುರಿಯಾಗಿಸಿಕೊಂಡು ವೃಥಾರೋಪ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಅಲ್ಲದೆ ಪತ್ರದಲ್ಲಿ ಸೋನಿಯಾ ನಾರಂಗ್ ಅವರ ವಿರುದ್ಧ ಟೀಕಾ ಪ್ರಹಾರವನ್ನೇ ಮಾಡಿರುವ ವೀಣಾ ಮಧುರ ಅವರು, “ಸೋನಿಯಾ ನಾರಂಗ ಅವರು ಎಂದೂ ನಮ್ಮನ್ನು ಸಹ ಅಧಿಕಾರಿಗಳಂತೆ ನೋಡಿಲ್ಲ. ನಮ್ಮನ್ನು ಅವರು ಕೆಲಸದಾಳುಗಳಂತೆ ಕಾಣುತ್ತಿದ್ದರು. ಇದೀಗ ನನ್ನ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ನನ್ನ ವಿರುದ್ಧದ ದೂರಿನ ಕುರಿತು ಅವರು ಯಾವುದೇ ಸಾಕ್ಷ್ಯಾಧಾರಗಳನ್ನು ಈ ವರೆಗೂ ತೋರಿಸಿಲ್ಲ. ಸುಲಿಗೆ ಪ್ರಕರಣ ಸಂಬಂಧ ದೂರಿನ ಪ್ರತಿ ಸೇರಿದಂತೆ ಯಾವುದೇ ಸಾಕ್ಷ್ಯಾಧಾರಗಳನ್ನು ನೀಡಿಲ್ಲ ಎಂದು ಪತ್ರದಲ್ಲಿ ಆರೋಪಿಸಿದ್ದಾರೆ.

ಇನ್ನು ಮಧುರ ವೀಣಾ ಅವರ ಈ ಪತ್ರ ಪೊಲೀಸ್ ಇಲಾಖೆಯಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದ್ದು, ತಮ್ಮ ವಿರುದ್ಧದ ಆರೋಪ ತಪ್ಪಿಸಿಕೊಳ್ಳಲು ಮಧುರ ವೀಣಾ ಅವರು ಜಾತಿ ವಿಚಾರ ಮುಂದಿಟ್ಟಿದ್ದಾರೆ. ಹೀಗಾಗಿ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಅಲ್ಲದೆ ನೇರವಾಗಿ ಗೃಹ ಸಚಿವ ಪರಮೇಶ್ವರ ಅವರಿಗೆ ಪತ್ರ ಬರೆದಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದೆ.

ಇನ್ನು ಸಿಐಡಿಯ ಈ ದೂರನ್ನು ಭ್ರಷ್ಟಾಚಾರ ನಿಗ್ರಹ ದಳ ತನಿಖೆ ನಡೆಸುವ ಸಾಧ್ಯತೆ ಇದ್ದು, ಪ್ರಾಥಮಿಕ ತನಿಖೆಯ ವರದಿ ಬಂದ ಬಳಿಕ ಈ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ತಿಳಿದುಬಂದಿದೆ. ಪ್ರಕರಣ ಸಂಬಂಧ ಈಗಾಗಲೇ ಎರಡು ಪ್ರತ್ಯೇಕ ತನಿಖಾ ತಂಡಗಳನ್ನು ರಚಿಸಲಾಗಿದ್ದು, ಮಧುರ ವೀಣಾ ಅವರ ವಿರುದ್ಧದ ಸುಲಿಗೆ ಪ್ರಕರಣ ಸಂಬಂಧ ತನಿಖೆ ನಡೆಸಿ ವರದಿ ನೀಡಲಿದ್ದಾರೆ ಎಂದು ಡಿಜಿ ಮತ್ತು ಐಜಿಪಿ ಓಂ ಪ್ರಕಾಶ್ ಅವರು ಮಾಹಿತಿ ನೀಡಿದರು.

Write A Comment