
ಮಂಗಳೂರು : ಮುಂಬಯಿ ಶ್ರೀ ಮಹಾವಿಷ್ಣು ಬಂಟ ಯಕ್ಷಕಲಾವೇದಿಕೆಯವರು `ಯಕ್ಷಾಂಗಣ ಮಂಗಳೂರು’ ಇವರ ಸಹಯೋಗದೊಂದಿಗೆ ತೀವ್ರ ಅಸೌಖ್ಯದಲ್ಲಿರುವ ಪ್ರಸಿದ್ಧ ಯಕ್ಷಗಾನ ಕಲಾವಿದ ಹಾಗೂ ಪ್ರಸಂಗಕರ್ತ ಸಿದ್ಧಕಟ್ಟೆ ವಿಶ್ವನಾಥ ಶೆಟ್ಟರ ಚಿಕಿತ್ಸೆಗಾಗಿ ರೂ. 1,00,000/- (ಒಂದು ಲಕ್ಷ) ನೆರವು ನೀಡಿದ್ದಾರೆ.
ಮುಂಬಯಿ ಬಂಟರ ಸಂಘದ ಅಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ, ಬಂಟ್ಸ್ ನ್ಯಾಯಮಂಡಳಿ ಅಧ್ಯಕ್ಷ ಪದ್ಮನಾಭ ಪಯ್ಯಡೆ, ಸಾಂಸ್ಕೃತಿಕ ಕಾರ್ಯಾಧ್ಯಕ್ಷ ರವೀಂದ್ರ ಭಂಡಾರಿ, ಹೋಟೆಲ್ ಉದ್ಯಮಿ ಬಾಬು ಶೆಟ್ಟಿ ಪೆರಾರ, ಸುಧಾಕರ ಶೆಟ್ಟಿ ಎಣ್ಣೆಹೊಳೆ, ಮಾತೃಭೂಮಿ ಕೋಆಪರೇಟಿವ್ ಭ್ಯಾಂಕ್ ಮಾಜಿ ಅಧ್ಯಕ್ಷ ರತ್ನಾಕರ ಶೆಟ್ಟಿ ಮುಂಡ್ಕೂರು, ಭಾಗವತ ಪೊಲ್ಯ ಲಕ್ಷ್ಮೀ ನಾರಾಯಣ ಶೆಟ್ಟಿ, ಕಾರ್ಕಳದ ಉದ್ಯಮಿ ವಿಜಯ ಶೆಟ್ಟಿ ಅಜೆಕಾರು, ಕಲಾವಿದ ದಾಮೋದರ ಶೆಟ್ಟಿ ಇರುವೈಲ್, ಅಜೆಕಾರು ಕಲಾಭಿಮಾನಿ ಬಳಗದ ಅಜೆಕಾರು ಬಾಲಕೃಷ್ಣ ಶೆಟ್ಟಿ, ‘ಯಕ್ಷಾಂಗಣ’ ಕಾರ್ಯಾಧ್ಯಕ್ಷ ಭಾಸ್ಕರ ರೈ ಕುಕ್ಕುವಳ್ಳಿ, `ಬಂಟರ ವಾಣಿ’ ಸಂಪಾದಕ ಅಶೋಕ್ ಪಕ್ಕಳ, ಮಂಗಳೂರಿನ ನ್ಯಾಯವಾದಿ ಶ್ರೀಧರ ಶೆಟ್ಟಿ ಪುಳಿಂಚ, ಉದ್ಯಮಿಗಳಾದ ಕರುಣಾಕರ ಶೆಟ್ಟಿ ಪಣಿಯೂರು, ಅಶೋಕ ಮಾಡ ಕುದ್ರಾಡಿಗುತ್ತು ಮೊದಲಾದವರು ಸಹಾಯ ನಿಧಿಗೆ ನೆರವು ನೀಡಿದ್ದರು.
ಮುಂಬಯಿ ಅಜೆಕಾರು ಕಲಾಭಿಮಾನಿ ಬಳಗದ ಸಂಚಾಲಕ ಅಜೆಕಾರು ಬಾಲಕೃಷ್ಣ ಶೆಟ್ಟಿ ಮತ್ತು ‘ಯಕ್ಷಾಂಗಣ’ದ ಕಾರ್ಯಾಧ್ಯಕ್ಷ ಭಾಸ್ಕರ ರೈ ಕುಕ್ಕುವಳ್ಳಿ ಅವರ ನೇತೃತ್ವದಲ್ಲಿ ಬಂಟ್ವಾಳ ತಾಲೂಕು ಅಜ್ಜಿಬೆಟ್ಟು ಗ್ರಾಮದ ಬಾರ್ಜರಡ್ಡದಲ್ಲಿರುವ ಸಿದ್ಧಕಟ್ಟೆಯವರ `ಯಕ್ಷಕಲಾ’ ನಿವಾಸಕ್ಕೆ ತೆರಳಿದ ಸಂಘಟನೆಯ ಪ್ರತಿನಿಧಿಗಳು ವಿಶ್ವನಾಥ ಶೆಟ್ಟರಿಗೆ ಸಹಾಯನಿಧಿ ಹಸ್ತಾಂತರಿಸಿದರು. `ಕಲಾವಿದ ಸಿದ್ಧಕಟ್ಟೆ ಶೀಘ್ರ ಗುಣಮುಖರಾಗಿ ಹಿಂದಿನಂತೆ ರಂಗದಲ್ಲಿ ವಿಜೃಂಭಿಸುವಂತಾಗಲಿ’ ಎಂದು ಅವರು ಹಾರೈಸಿದರು.
ಈ ಸಂದರ್ಭದಲ್ಲಿ ವಿಶ್ವನಾಥ ಶೆಟ್ಟರ ಪತ್ನಿ ಜಯಂತಿ, ಪುತ್ರಿ ಅಕ್ಷತಾ ಸಿ ಶೆಟ್ಟಿ, ಸಹೋದರ ಸಿದ್ಧಕಟ್ಟೆ ಸದಾಶಿವ ಶೆಟ್ಟಿ ಹಾಗೂ ಕರುಣಾಕರ ಶೆಟ್ಟಿ ಪಣಿಯೂರು, ಅಶೋಕ ಮಾಡ, ಕೆ. ಲಕ್ಷ್ಮೀನಾರಾಯಣ ರೈ ಹರೇಕಳ, ಸುಭಾಷ್ ರೈ ಕರ್ನೂರು ಉಪಸ್ಥಿತರಿದ್ದರು.