ಕರ್ನಾಟಕ

ನೀರಿನ ಸಮಸ್ಯೆ ಸಮರ್ಥವಾಗಿ ನಿಭಾಯಿಸಲು ಸರ್ಕಾರ ಬದ್ಧ : ಶ್ರೀನಿವಾಸ್ ಪ್ರಸಾದ್

Pinterest LinkedIn Tumblr

dkcಚಿಕ್ಕಬಳ್ಳಾಪುರ,ಏ.27-ರಾಜ್ಯದ ಬರಪರಿಸ್ಥಿತಿ ಹಾಗೂ ಕುಡಿಯುವ ನೀರಿನ ಸಮಸ್ಯೆಯನ್ನು ಸಮರ್ಥವಾಗಿ ನಿಭಾಯಿಸಲು ಸರ್ಕಾರ ಬದ್ಧವಾಗಿದೆ ಎಂದು ಕಂದಾಯ ಸಚಿವ ಶ್ರೀನಿವಾಸ್ ಪ್ರಸಾದ್ ತಿಳಿಸಿದರು. ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ,ಬರ ಪರಿಸ್ಥಿತಿ ಸಂಬಂಧಿಸಿದ ವರದಿಯ ಪಿ.ಪಿ.ಟಿ. (ಪವರ್ ಪಾಯಿಂಟ್ ಪ್ರೆಸೆಂಟೇಷನ್) ವೀಕ್ಷಣೆ ಮಾಡಿ ಜಿಲ್ಲಾಧಿಕಾರಿಯವರಿಂದ ಜಿಲ್ಲೆಯ ಬರಪರಿಸ್ಥಿತಿ ಹಾಗೂ ಕುಡಿಯುವ ನೀರಿನ ಬಗ್ಗೆ ಸಮಗ್ರ ಮಾಹಿತಿ ಪಡೆದುಕೊಂಡು ಅವರು ಮಾತನಾಡಿದರು.

ಬರ ಅಧ್ಯಯನ ಕುರಿತು ಸಚಿವ ಸಂಪುಟ ಉಪಸಮಿತಿಯು ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರಿಂದ ಮಾಹಿತಿ ಪಡೆದು ವಿಸ್ತೃತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದರು. ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಮಾಹಿತಿ ನೀಡಿ, ಜಿಲ್ಲೆಯ 41 ಗ್ರಾಮಗಳಲ್ಲಿ ನೀರಿನ ತೀವ್ರ ಸಮಸ್ಯೆಯಿದ್ದು, 23 ಗ್ರಾಮಗಳಿಗೆ ಖಾಸಗಿ ಕೊಳವೆ ಬಾವಿಗಳ ಮೂಲಕ 18 ಗ್ರಾಮಗಳಿಗೆ ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಪೂರ್ವ ಮುಂಗಾರು ಮಳೆಯಾಗದಿದ್ದರೆ, 169 ಗ್ರಾಮಗಳಲ್ಲಿ ತೀವ್ರ ಕುಡಿಯುವ ನೀರಿನ ಸಮಸ್ಯೆ ಎದುರಾಗಲಿದೆ. ನೀರಿನ ಸಮಸ್ಯೆ ಎದುರಿಸಲು 10.38 ಕೋಟಿ ಹಣ ಬಿಡುಗಡೆ ಮಾಡಬೇಕಿದೆ ಎಂದರು.

2016ರ ಜನವರಿಯಿಂದ ಇಲ್ಲಿಯವರೆಗೆ ಶೇ.34.8 ವಾಡಿಕೆ ಮಳೆಯಾಗಬೇಕಾಗಿತ್ತು. ಶೇ.11.68 ಮಳೆಯಾಗಿದ್ದು, ಶೇ.66 ರಷ್ಟು ಮಳೆ ಕೊರತೆ ಉಂಟಾಗಿರುವುದರಿಂದ ರೈತರು ಜಮೀನು ಹಸನುಗೊಳಿಸಲು ಹಾಗೂ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಲು ತೀವ್ರ ಹಿನ್ನೆಡೆಯಾಗಿದೆ ಎಂದು ಸಭೆಗೆ ವಿವರ ನೀಡಿದರು. ಇಂಧನ ಸಚಿವ ಡಿ.ಕೆ.ಶಿವಕುಮಾರ್ ಮಾತನಾಡಿ, ಜನರ ನಿರಂತರ ಸಂಪರ್ಕದಲ್ಲಿರುವ ಶಾಸಕರು ನರೇಗಾ ಯೋಜನೆಯಡಿ ಇಂಗುಗುಂಡಿ, ದನದ ಕೊಟ್ಟಿಗೆ, ಒಕ್ಕಣೆ ಕಣ, ಇನ್ನು ಮುಂತಾದ ಸೌಲಭ್ಯಗಳನ್ನು ಜನ ಸಾಮಾನ್ಯರಿಗೆ ತಲುಪಿಸಲು ಪರಿಶ್ರಮಿಸಬೇಕೆಂದು ಸೂಚಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಆರ್.ರೋಷನ್ ಬೇಗ್ ಮಾತನಾ, ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಆದ್ಯತೆ ಮೇರೆಗೆ ಅಧಿಕಾರಿಗಳು ಸಮರ್ಪಕ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಸಭೆಯಲ್ಲಿ ಜಿಲ್ಲೆಯ ಅಂಕಿ-ಅಂಶಗಳ ಮಾಹಿತಿ ಹಾಗೂ ಬರ ಪರಿಸ್ಥಿತಿಯ ಮಾಹಿತಿ ಪಡೆದು ಚಿಕ್ಕಬಳ್ಳಾಪುರ ತಾಲ್ಲೂಕಿನ ರಾಮಗಾನಪರ್ತಿ, ತಂಡ್ರಮರದಹಳ್ಳಿ, ಶಿಡ್ಲಘಟ್ಟ ತಾಲ್ಲೂಕಿನ ದೊಡ್ಡದಾಸರಹಳ್ಳಿ, ಚಿಂತಾಮಣಿ ತಾಲ್ಲೂಕಿನ ನಲ್ಲಗುಟ್ಟಹಳ್ಳಿ ಗ್ರಾಮಗಳಲ್ಲಿ ಬರ ಅಧ್ಯಯನ ನಡೆಸಿ ಸಾರ್ವಜನಿಕರಿಂದ ವಾಸ್ತವ ಸ್ಥಿತಿ-ಗತಿಗಳ ಬಗ್ಗೆ ಮಾಹಿತಿ ಪಡೆದರು. ಪ್ರಾದೇಶಿಕ ಆಯುಕ್ತರಾದ ಎಂ.ವಿ. ಜಯಂತಿ ಭಾ.ಆ.ಸೇ., ಶಾಸಕ ಡಾ.ಕೆ.ಸುಧಾಕರ್, ಎಸ್.ಎನ್. ಸುಬ್ಬಾರೆಡ್ಡಿ, ಹಾಗೂ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿ-ಸಿಬ್ಬಂದಿಗಳು ಹಾಜರಿದ್ದರು.

Write A Comment