ಬೆಂಗಳೂರು: ಬಿರು ಬೇಸಿಗೆಯಿಂದ ತತ್ತರಿಸಿರುವ ಕರ್ನಾಟಕದಲ್ಲಿ ಹನಿ ನೀರಿಗೂ ಹಾಹಾಕಾರ ಶುರುವಾಗಿದೆ. ಕುಡಿಯವ ನೀರಿಗಾಗಿ ಕಲಬುರಗಿ ಜನ ಐದಾರು ಮೈಲಿ ನಡೆಯಬೇಕಾದಂತಹ ಪರಿಸ್ಥಿತಿಯಲ್ಲಿರುವಾಗ ಸ್ಯಾಂಡಲ್ ವುಡ್ ರಾಂಕಿಂಗ್ ಸ್ಟಾರ್ ಯಶ್ ಕಲಬುರಗಿ ಹಾಗೂ ವಿಜಯಪುರದ ಜಿಲ್ಲೆಯ 50 ಹಳ್ಳಿಗಳಿಗೆ ನೀರು ಪೂರೈಕೆ ಮಾಡಲು ಮುಂದಾಗಿದ್ದಾರೆ.
ಕರ್ನಾಟಕದಲ್ಲಿ ನೀರಿನ ಕೊರತೆ ಎದುರಿಸುತ್ತಿರುವ ಜಿಲ್ಲೆಗಳ ಪೈಕಿ ಕಲಬುರಗಿ, ವಿಜಯಪುರ ಪ್ರಮುಖವಾಗಿದ್ದು, ಆ ಭಾಗದ 50 ಹಳ್ಳಿಗಳಿಗೆ ಯಶ್ ದಿನ ಬಿಟ್ಟು ದಿನ ನೀರು ಪೂರೈಕೆ ಮಾಡುವ ಮೂಲಕ ಸಮಾಜ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ.
ಯಶೋಮಾರ್ಗ ಫೌಂಡೇಷನ್ ಮೂಲಕ ಈ ಮಹತ್ಕಾರ್ಯಕ್ಕೆ ಯಶ್ ಮುಂದಾಗಿದ್ದಾರೆ. ಸದ್ಯದಲ್ಲಿ ನಾನು ಏನೇ ಆಗಿದ್ದರು ಅದಕ್ಕೆಲ್ಲಾ ಈ ನಮ್ಮ ಕರ್ನಾಟಕ ಜನರೇ ಕಾರಣ. ಅವರಿಗಾಗಿ ನಾನಿದ್ದೇನೆ. ಅವರಿಂದ ಪಡೆದದ್ದನ್ನು ಅವರಿಗೆ ನೀಡುತ್ತಿದ್ದೇನೆ ಎಂದು ಯಶ್ ಹೇಳಿದ್ದಾರೆ.