ಕನ್ನಡ ವಾರ್ತೆಗಳು

ಉಳ್ಳಾಲ ದಾಳಿ (ಹಲ್ಲೆ) ಪ್ರಕರಣ : ಓರ್ವ ಯುವಕ ಸೆರೆ – ಇನ್ನಷ್ಟು ಆರೋಪಿಗಳಿಗಾಗಿ ಶೋಧ

Pinterest LinkedIn Tumblr

Commisinor_Police_Pres_2

ಮಂಗಳೂರು, ಎಪ್ರಿಲ್.27 : ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಬ್ರಾಹಿಂ ನಫ್ಸಾನ್ ಎಂಬವರ ಮೇಲೆ ಏಪ್ರಿಲ್ 25ರಂದು ನಡೆದ ದಾಳಿಗೆ ಸಂಬಂಧಿಸಿದ ಓರ್ವ ಆರೋಪಿಯನ್ನು ಬಂಧಿಸಿಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಅಯುಕ್ತ ಎಂ. ಚಂದ್ರಶೇಖರ್ ತಿಳಿಸಿದ್ದಾರೆ.

ಬುಧವಾರ ತಮ್ಮ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಪ್ರಕರಣಕ್ಕೆ ಸಂಬಂಧಪಟ್ಟಂತೆ ವೃತ್ತಿಯಲ್ಲಿ ಎಲೆಕ್ಟ್ರಿಷಿಯನ್ ಆಗಿರುವ ಕುಂಪಲ ನಿವಾಸಿ ಶಿವರಾಜ್ ಅಲಿಯಾಸ್ ಶಿವ (19) ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಲಾಗಿದೆ. ಪ್ರಕರಣದಲ್ಲಿ ಇನ್ನೂ ನಾಲ್ಕೈದು ಮಂದಿ ಭಾಗಿಯಾಗಿದ್ದಾರೆ. ಏಪ್ರಿಲ್ 25ರಂದು ಬೆಳಿಗ್ಗೆ ಬಸ್ತಿಪಡ್ಪುನಲ್ಲಿ ನಡೆದ ಇಬ್ರಾಹಿಂ ನಫ್ಸಾನ್ ಕೊಲೆ ಯತ್ನ ಹಾಗೂ ಅದೇ ದಿನ ರಾತ್ರಿ ತೊಕ್ಕೊಟ್ಟಿನಲ್ಲಿ ನಾಲ್ವರ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸಿಪಿ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚನೆ ಮಾಡಲಾಗಿದೆ ಎಂದು ಹೇಳಿದರು.

Commisinor_Police_Pres_4

ಎಸಿಪಿ ಕಲ್ಯಾಣ್ ಶೆಟ್ಟಿ, ಕೊಣಾಜೆ ಮತ್ತು ಪಣಂಬೂರು ಠಾಣೆ ಹಾಗೂ ಸಿಸಿಬಿ ಇನ್ಸ್‌ಪೆಕ್ಟರ್‌ಗಳ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ಆರೋಪಿಗಳ ಬಗ್ಗೆ ಮಾಹಿತಿ ಲಭಿಸಿದ್ದು, ಅವರನ್ನು ಬಂಧಿಸಲು ಕ್ರಮ ಕೈಗೊಳ್ಳಲಾಗಿದೆ. ಈ ನಡುವೆ 10 ಜನ ಸಂಶಯಾಸ್ಪದ ವ್ಯಕ್ತಿಗಳ ವಿಚಾರಣೆಯೂ ನಡೆಯುತ್ತಿದೆ. ಎ. 26ರಂದು ಸಂಜೆ ಕಲ್ಲಾಪುವಿನಲ್ಲಿ ನಡೆದ ಹಲ್ಲೆ ಪ್ರಕರಣದ ಬಗ್ಗೆಯೂ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದರು.

Commisinor_Police_Pres_3 Commisinor_Police_Pres_5

ಸೋಮವಾರ ಬೆಳಗ್ಗಿನ ವೇಳೆ ಕೋಟೆಪುರ ನಿವಾಸಿ ಮುಹಮ್ಮದ್ ಎಂಬವರ ಪುತ್ರ ಇಬ್ರಾಹೀಂ ನಫ್ಸಾನ್ (26) ಮೀನಿನ ವ್ಯಾಪಾರಕ್ಕೆಂದು ದಕ್ಕೆಗೆ ಬೈಕ್‌ನಲ್ಲಿ ತೆರಳುತ್ತಿದ್ದಾಗ ಅವರು ಬಸ್ತಿಪಡ್ಪು ತಲುಪುತ್ತಿದ್ದಂತೆ ಆರು ಮಂದಿ ಯುವಕರಿದ್ದ ತಂಡ ಅವರನ್ನು ಅಡ್ಡಗಟ್ಟಿ ಮಾರಕಾಯುಧಗಳಿಂದ ಹಲ್ಲೆ ನಡೆಸಿ ಗಸ್ತು ನಿರತ ಪೊಲೀಸರು ಸ್ಥಳಕ್ಕಾಗಮಿಸಿದಾಗ ಆರು ಮಂದಿ ಆರೋಪಿಗಳು ಮಾರಕಾಯುಧಗಳನ್ನು ಬಿಟ್ಟು ಪರಾರಿಯಾಗಿದ್ದರು.

ದಾಳಿಯಿಂದ ಬ್ರಾಹೀಂ ನಫ್ಸಾನ್ ಕೈ, ಮುಖ ಮತ್ತು ಬೆನ್ನಿಗೆ ಗಂಭೀರ ಪ್ರಮಾಣದ ಗಾಯಗಳಾಗಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಇಬ್ರಾಹೀಂ ನಫ್ಸಾನ್‌ರನ್ನು ತೊಕ್ಕೊಟ್ಟಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಘಟನೆಗೆ ಸಂಬಂಧಿಸಿದಂತೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇಬ್ರಾಹೀಂ ನಫ್ಸಾನ್ ಯಾವೂದೇ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿರದೇ ಆಮಯಾಕರಾಗಿದ್ದರು ಎಂದು ತಿಳಿಸಿದರು.

commissione_meet_1 commissione_meet_2 commissione_meet_3

ಈ ಘಟನೆ ನಡೆದ ದಿನ ರಾತ್ರಿ ಉಳ್ಳಾಲದಲ್ಲಿ ಮತ್ತೆ ದುಷ್ಕರ್ಮಿಗಳು ಅಟ್ಟಹಾಸ ಮೆರೆದಿದ್ದಾರೆ. ಸೋಮವಾರ ತಡರಾತ್ರಿ ವೇಳೆ ಕ್ಯಾಟರಿಂಗ್ ಕೆಲಸ ಮುಗಿಸಿ ಮನೆಗೆ ಬೈಕಿನಲ್ಲಿ ಹಿಂತಿರುಗುತ್ತಿದ್ದ ಮೂರು ಮಂದಿಯ ಮೇಲೆ ತಲವಾರು ದಾಳಿ ನಡೆಸಿದ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಈ ದಾಳಿಯಲ್ಲಿ ಓರ್ವ ಗಂಭೀರ ಗಾಯಗೊಂಡು, ಇಬ್ಬರು ಅಲ್ಪಸ್ವಲ್ಪ ಗಾಯಗೊಂಡಿದ್ದು, ಗಾಯಾಳುಗಳು ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪಿಲಾರು ನಿವಾಸಿ ಸಫ್ವಾನ್ (20) ಗಂಭೀರವಾಗಿ ಗಾಯಗೊಂಡವರು. ಇವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇವರ ಜತೆಗಿದ್ದ ಅದೇ ಊರಿನವರೇ ಆದ ನಿಝಾಮ್(19), ಸಲೀಂ(24) ಸ್ವಲ್ಪ ಗಾಯಗೊಂಡು ತೊಕ್ಕೊಟ್ಟು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮದಕ ಸಮೀಪ ಮದುವೆ ಸಮಾರಂಭದಲ್ಲಿ ಕ್ಯಾಟರಿಂಗ್ ಕೆಲಸದಲ್ಲಿ ಪಾಲ್ಗೊಂಡಿದ್ದ ಸಫ್ವಾನ್, ನಿಝಾಮ್ ಮತ್ತು ಸಲೀಂ ಅವರು ಕ್ಯಾಟರಿಂಗ್ ವಾಹನವನ್ನು ತೊಕ್ಕೊಟ್ಟು ಟಿ.ಸಿ.ರೋಡಿನಲ್ಲಿ ನಿಲ್ಲಿಸಲು ತಡರಾತ್ರಿ ವೇಳೆ ಆಗಮಿಸಿದ್ದರು. ಅಲ್ಲಿ ವಾಹನ ನಿಲ್ಲಿಸಿ ಬೈಕಿನಲ್ಲಿ ಮೂರು ಮಂದಿಯೂ ಜತೆಯಾಗಿ ತೆರಳುವ ತೊಕ್ಕೊಟ್ಟು ಒಳಪೇಟೆಯ ಓವರ್ ಬ್ರಿಡ್ಜ್ ಸಮೀಪ ಅಡಗಿಕುಳಿತ ಸುಮಾರು ಐದು ಮಂದಿ ದುಷ್ಕರ್ಮಿಗಳ ತಂಡ ಚಲಿಸುತ್ತಿದ್ದ ಬೈಕಿನತ್ತ ತಲವಾರು ಬೀಸಿ ಹತ್ಯೆಗೆ ಯತ್ನಿಸಿದ್ದ ಬಗ್ಗೆ ದೂರು ದಾಖಲಾಗಿತ್ತು.

ಈ ವೇಳೆ ಬೈಕ್ ಚಲಾಯಿಸುತ್ತಿದ್ದ ನಿಝಾಮ್ ಹಾಗೂ ಹಿಂಬದಿ ಕುಳಿತಿದ್ದ ಸಲೀಂ ಇಬ್ಬರೂ ದಾಳಿಯಿಂದ ತಪ್ಪಿಸಿಕೊಂಡರೆ ನಡುವೆ ಕುಳಿತಿದ್ದ ಸಫ್ವಾನ್ ಮೇಲೆ ತಂಡ ತಲವಾರಿನಿಂದ ಹೊಟ್ಟೆಭಾಗಕ್ಕೆ ಏಟಾಗಿದ್ದು, ಆದರೂ ತಿವಿದ ಹೊಟ್ಟೆಯ ಭಾಗವನ್ನು ಕೈಯಲ್ಲೇ ಹಿಡಿದುಕೊಂಡ ಸಫ್ವಾನ್ ಒಂದು ಕಿ.ಮೀ. ದೂರದ ಕಾಪಿಕಾಡು ವರೆಗೂ ಓಡಿ ತಪ್ಪಿಸಿಕೊಂಡು, ಅಲ್ಲಿಂದ ಗೆಳೆಯರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದರು. ತಡರಾತ್ರಿಯಾದರೂ ಗೆಳೆಯನ ಕರೆಗೆ ಸ್ಪಂಧಿಸಿದ ಸಮದ್ ಮತ್ತು ನಝ್ರತ್ ಎಂಬವರು ಕೂಡಲೇ ಇಬ್ಬರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಘಟನೆ ನಡೆದ ಸ್ಥಳದಲ್ಲಿ ಇರುವ ಬ್ಯಾಂಕಿನಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿಯಲ್ಲಿ ದುಷ್ಕರ್ಮಿಗಳ ಚಿತ್ರ ಸೆರೆಯಾಗಿದೆ., ಬಿಳಿ ಬಣ್ಣದ ಆಕ್ಟಿವಾ ಸ್ಕೂಟರ್ ಹಾಗೂ ಕಪ್ಪು ಬಣ್ಣದ ಬೈಕಿನಲ್ಲಿ ಬಂದಿರುವ ದುಷ್ಕರ್ಮಿಗಳು ತಲವಾರಿನ ಮೂಲಕ ಕೃತ್ಯ ಎಸಗಿದ್ದು, ಆರೋಪಿಗಳೆಲ್ಲರೂ ತೊಕ್ಕೊಟ್ಟು ಕೃಷ್ಣನಗರ ಹಾಗೂ ಗಣೇಶನಗರ ನಿವಾಸಿಗಳೆಂದು ಮಾಹಿತಿ ಲಭ್ಯವಾಗಿದೆ. ಈ ಎರಡೂ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳನ್ನು ಶೀಘ್ರದಲ್ಲೆ ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ ಕಮಿಷನರ್, ಬಂಧಿತ ಆರೋಪಿ ಎರಡನೇ ದಾಳಿ ಪ್ರಕರಣದಲ್ಲೂ ಭಾಗಿಯಾಗಿದ್ದಾನೆಯೇ ಎಂಬ ಬಗ್ಗೆ ವಿಚಾರಣೆ ನಡೆಸುವುದಾಗಿ ತಿಳಿಸಿದರು.

ಉಳ್ಳಾಲ : 7 ದಿನಗಳವರೆಗೆ 144 ಸೆಕ್ಷನ್ ಜಾರಿ :

ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎಪ್ರಿಲ್ 26ರ ಸಂಜೆ 6 ಗಂಟೆಯಿಂದ 144 ಸೆಕ್ಷನ್ (ನಿಷೇಧಾಜ್ಞೆ) ಜಾರಿಗೊಳಿಸಲಾಗಿದ್ದು, ಐದಕ್ಕಿಂತ ಹೆಚ್ಚು ಜನರು ಗುಂಪು ಸೇರುವುದು, ಮೆರವಣಿಗೆ- ಸಭೆ ನಡೆಸುವುದು, ಶಸ್ತ್ರಾಸ್ತ್ರಗಳನ್ನು ಒಯ್ಯುವುದು, ಸ್ಫೋಟಕ ವಸ್ತುಗಳನ್ನು ಸಿಡಿಸುವುದು, ಪ್ರತಿಕೃತಿಗಳ ಪ್ರದರ್ಶನ, ಬಹಿರಂಗ ಘೋಷಣೆ, ಸಂಜ್ಞೆ ಮಾಡುವುದು, ಸಂಗೀತ ನುಡಿಸುಉದು, ಸಂಕೇತಗಳ ಭಿತ್ತಿ ಪತ್ರ ಅಥವಾ ಇತರ ಯಾವುದೇ ವಸ್ತುಗಳ ಪ್ರದರ್ಶನ ಹಾಗೂ ಸಾಮಾಜಿಕ ಭದ್ರತೆಗೆ ಬಾಧಕವಾಗುವ ಯಾವುದೇ ರೀತಿಯ ಕೃತ್ಯಗಳನ್ನು ನಿಷೇಧಿಸಲಾಗಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದರು.

ಬಿಗಿ ಪೊಲೀಸ್ ಬಂದೋಬಸ್ತ್ :

ಉಳ್ಳಾಲ ವ್ಯಾಪ್ತಿಯಲ್ಲಿ ಬಿಗಿ ಬಂದೋಬಸ್ತ್ ಕರ್ತವ್ಯಕ್ಕೆ 10 ಕೆಎಸ್‌ಆರ್‌ಪಿ ತುಕಡಿಗಳನ್ನು ನಿಯೋಜಿಸಲಾಗಿದೆ. ಹೆಚ್ಚುವರಿಯಾಗಿ 5 ಪೊಲೀಸ್ ಉಪಾಧೀಕ್ಷಕರು, 8 ಪೊಲೀಸ್ ನಿರೀಕ್ಷಕರು, 6 ಪೊಲೀಸ್ ಉಪ ನಿರೀಕ್ಷಕರು, 10 ಸಹಾಯಕ ಪೊಲೀಸ್ ಉಪ ನಿರೀಕ್ಷಕರು ಹಾಗೂ 260 ಪೊಲೀಸ್ ಸಿಬ್ಬಂದಿಗಳು ಸೇರಿದಂತೆ ಒಟ್ಟು 600 ಮಂದಿಯನ್ನು ನಿಯೋಜಿಸಲಾಗಿದೆ. ಹೊರ ಜಿಲ್ಲೆಯಿಂದ ಹೆಚ್ಚುವರಿ ಪೋಲೀಸರನ್ನು ನಿಯೋಜಿಸಲಾಗಿದೆ ಎಂದು ಹೇಳಿದರು.

ಉಳ್ಳಾಲದ ಸೂಕ್ಷ್ಮ ಪ್ರದೇಶಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಲು ರೇಂಜ್ ಲೆವೆಲ್‌ನಲ್ಲಿ ಯೋಜನೆ ಸಿದ್ಧುಪಡಿಸಿ ಟೆಂಡರ್ ಕೂಡಾ ಕರೆಯಲಾಗಿದೆ ಎಂದು ಹೇಳಿದ ಅವರು, ಉಳ್ಳಾಲ ಸ್ಟೇಷನ್‌ನಲ್ಲಿ ಇನ್ಸ್‌ಪೆಕ್ಟರ್ ಮಾತ್ರವಲ್ಲದೆ ನಗರದ ವಿವಿಧ ಕಡೆಗಳಲ್ಲಿ ಇರುವ ಸಿಬ್ಬಂದಿಗಳ ಕೊರತೆಯನ್ನು ನೀಗಿಸಲು ಗೃಹ ಇಲಾಖೆಗೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ. ಪ್ರಸ್ತುತ ಉಳ್ಳಾಲ ಠಾಣೆಯಲ್ಲಿ ಪಣಂಬೂರು ಇನ್ಸ್‌ಪೆಕ್ಟರ್‌ರವರನ್ನು ಇನ್‌ಚಾರ್ಜ್ ಆಗಿ ನೇಮಕ ಮಾಡಲಾಗಿದೆ. ಕಾನೂನು ಬಾಹಿರ ಕೃತ್ಯ ಎಸಗುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಅವರು ಹೇಳಿದರು.

ನರೇಶ್ ಶೆಣೈ ಜಾಮೀನು ಅರ್ಜಿಗೆ ವಿರೋಧ : ಕಮಿಷನರ್

ಬಾಳಿಗಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನರೇಶ್ ಶೆಣೈ ಜಾಮೀನು ಅರ್ಜಿ ಹಾಕಿದ್ದಾರೆ. ಅದನ್ನು ನಾವು ನ್ಯಾಯಾಲಯದಲ್ಲಿ ವಿರೋಧಿಸಿದ್ದೇವೆ. ಈಗಾಗಲೇ ಶ್ರೀಕಾಂತ್, ನರೇಶ್ ಶೆಣೈ ಬಂಧನಕ್ಕೆ ಎಲ್ಲ ಪ್ರಯತ್ನ ನಡೆದಿದೆ ಎಂದು ಪೊಲೀಸ್ ಕಮಿಷನರ್ ಹೇಳಿದರು

ಪತ್ರಿಕಾಗೋಷ್ಠಿಯಲ್ಲಿ ಡಿಸಿಪಿಗಳಾದ ಕೆ.ಎಮ್ ಶಾಂತರಾಜು ( ಕಾನೂನು ಮತ್ತು ಸುವವ್ಯಸ್ಥೆ) ಹಾಗೂ ಡಾ. ಸಂಜೀವ ಎಮ್. ಪಾಟೀಲ್ ( ಅಪರಾಧ ಮತ್ತು ಸಂಚಾರಿ ವಿಭಾಗ) ಉಪಸ್ಥಿತರಿದ್ದರು.

 

Write A Comment