ಕರ್ನಾಟಕ

ಒಂದೇ ವೇದಿಕೆಯಲ್ಲಿ ದೇವೇಗೌಡ ಮತ್ತು ಎಸ್.ಎಂ.ಕೃಷ್ಣ

Pinterest LinkedIn Tumblr

mkಬೆಂಗಳೂರು, ಏ.26- ರಾಜ್ಯದ ಪ್ರಮುಖ ರಾಜಕೀಯ ಧೃವಗಳಾಗಿರುವ ಮಾಜಿ ಪ್ರಧಾನಿ ದೇವೇಗೌಡ ಮತ್ತು ಮಾಜಿ ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ಇಂದು ಮತ್ತೊಮ್ಮೆ ಕೆ.ಆರ್.ನಗರದಲ್ಲಿ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳುವ ಮೂಲಕ ರಾಜಕೀಯ ಸಂಚಲನಕ್ಕೆ ಕಾರಣರಾಗಿದ್ದಾರೆ. ರಾಜ್ಯದಲ್ಲಿ ದೇವೇಗೌಡರು ಮುಖ್ಯಮಂತ್ರಿಯಾಗಿ, ಪ್ರಧಾನಮಂತ್ರಿಯಾಗಿ ದೇಶದಲ್ಲೇ ತಮ್ಮ ಛಾಪು ಮೂಡಿಸಿದವರು. ಅದೇ ರೀತಿ ಎಸ್.ಎಂ.ಕೃಷ್ಣ ಕೂಡ ಮುಖ್ಯಮಂತ್ರಿಯಾಗಿ ಬೆಂಗಳೂರಿಗೆ ಐಟಿ-ಬಿಟಿ ರಾಜಧಾನಿ ಎಂಬ ಹೆಸರು ತಂದಕೊಟ್ಟರು.

ಕೇಂದ್ರ ವಿದೇಶಾಂಗ ಸಚಿವರಾಗಿ 76ಕ್ಕೂ ಹೆಚ್ಚು ದೇಶಗಳಲ್ಲಿ ಸಂಚರಿಸಿ ಅಂತಾರಾಷ್ಟ್ರೀಯ ಗಮನ ಸೆಳೆದವರು. ಆದರೆ ಈ ಇಬ್ಬರು ಮಹಾನ್ ನಾಯಕ 25ಕ್ಕಿಂತಲೂ ಹೆಚ್ಚು ವರ್ಷಗಳ ಕಾಲ ರಾಜ್ಯ ರಾಜಕಾರಣದಲ್ಲಿ ಎದುರಾಳಿಗಳೆಂದೇ ಗುರುತಿಸಿಕೊಂಡಿದ್ದಾರೆ. ಇಂದು ಮೈಸೂರು ಜಿಲ್ಲೆಯ ಕೆ.ಆರ್.ನಗರದ ರೇಡಿಯೋ ಮೈದಾನದಲ್ಲಿ ನಡೆದ ಎಚ್.ಡಿ.ದೇವೇಗೌಡ ಸಮುದಾಯ ಭವನ ಉದ್ಘಾಟನಾ ಸಮಾರಂಭದಲ್ಲಿ ಎಸ್.ಎಂ.ಕೃಷ್ಣ ಮತ್ತು ದೇವೇಗೌಡರು ಒಂದೇ ವೇದಿಕೆಯಲ್ಲಿ ಸೇರುವ ಮೂಲಕ ಅಚ್ಚರಿಗೆ ಕಾರಣರಾದರು.

ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಡಳಿತದ ಬಗ್ಗೆ ಪದೇ ಪದೇ ಅಸಮಾಧಾನ ವ್ಯಕ್ತಪಡಿಸುವ ಮೂಲಕ ಎಸ್.ಎಂ.ಕೃಷ್ಣ ಅವರು ಹೆಚ್ಚು ಚರ್ಚೆಗೆ ಗ್ರಾಸವಾಗುತ್ತಿದ್ದಾರೆ. ಕಳೆದ ವರ್ಷ ಜೂನ್ 30 ರಂದು ಒಕ್ಕಲಿಗರ ಸಂಘ ನಗರದ ಕುವೆಂಪು ಕಲಾಕ್ಷೇತ್ರದಲ್ಲಿ ಏರ್ಪಡಿಸಿದ್ದ ಮಾಜಿ ಸಚಿವ ಕೆ.ವಿ.ಶಂಕರೇಗೌಡ ಅವರ ಜನ್ಮಶತಮಾನೋತ್ಸವ ಕಾರ್ಯಕ್ರಮದಲ್ಲಿ ಈ ಇಬ್ಬರು ನಾಯಕರು ಭಾಗವಹಿಸಿ ವೇದಿಕೆ ಹಂಚಿಕೊಂಡಿದ್ದರು. ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ 1999ರಲ್ಲಿ ಇಬ್ಬರೂ ನಾಯಕರು ಪರಸ್ಪರ ಭೇಟಿಯಾಗಿದ್ದರು. ಆನಂತರ 16 ವರ್ಷಗಳ ಕಾಲ ಇಬ್ಬರು ನಾಯಕರು ದೂರ ಉಳಿದಿದ್ದರು.

ಈಗ ಕೆ.ಆರ್.ನಗರ ತಾಲೂಕು ಒಕ್ಕಲಿಗರ ಸಂಘ ಏರ್ಪಡಿಸಿದ್ದ ಸಮುದಾಯ ಭವನ ಉದ್ಘಾಟನಾ ಸಮಾರಂಭದಲ್ಲಿ ಮತ್ತೊಮ್ಮೆ ಇಬ್ಬರು ನಾಯಕರು ಒಗ್ಗೂಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್, ಮಾಜಿ ಸಚಿವರಾದ ಚೆಲುವರಾಯಸ್ವಾಮಿ, ಜಿ.ಟಿ.ದೇವೇಗೌಡ, ಶಾಸಕರಾದ ವಾಸು ಮತ್ತಿತರರ ಘಟಾನುಘಟಿಗಳು ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳುವ ಮೂಲಕ ಸಂಚಲನ ಮೂಡಿಸಿದ್ದಾರೆ. ರಾಜ್ಯ ರಾಜಕಾರಣದಲ್ಲಿ ಪಕ್ಷಭೇದ ಮರೆತು ಎಲ್ಲಾ ನಾಯಕರು ಒಗ್ಗಟ್ಟು ಪ್ರದರ್ಶಿಸಿದ್ದು, ಐತಿಹಾಸಿಕವೆಂದೇ ಬಣ್ಣಿಸಲಾಗುತ್ತಿದೆ. ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರು ಗಣ್ಯ ರಾಜಕೀಯ ನಾಯಕರ ಧ್ರುವೀಕರಣದಲ್ಲಿ ಸಾನಿಧ್ಯ ವಹಿಸಿದ್ದರು.

Write A Comment