ಮನೋರಂಜನೆ

ಗಾಂಧಿನಗರದ ತ್ರಿಭುವನ್‌ ಚಿತ್ರಮಂದಿರ ಬಾಗಿಲು ಹಾಕಲಿದೆ

Pinterest LinkedIn Tumblr

gaಗಾಂಧಿನಗರದ ಚಿತ್ರಮಂದಿರಗಳು ಒಂದೊಂದೇ ಬಾಗಿಲು ಹಾಕುತ್ತಿವೆ! -ಹೌದು, ಚಿತ್ರಮಂದಿರಗಳು ಒಂದೊಂದಾಗಿಯೇ ಬಾಗಿಲು ಹಾಕುತ್ತಿರುವುದು ಹೊಸ ಬೆಳವಣಿಗೆಯೇನೂ ಅಲ್ಲ. ವರ್ಷಗಳ ಹಿಂದಷ್ಟೇ ಕೆಜಿ ರಸ್ತೆಯಲ್ಲಿದ್ದ ಸಾಗರ್‌ ಚಿತ್ರಮಂದಿರ ತನ್ನ ಪ್ರದರ್ಶನ ನಿಲ್ಲಿಸಿತ್ತು. ಅದಾದ ಕೆಲ ಬಳಿಕ ತ್ರಿವೇಣಿ ಚಿತ್ರಮಂದಿರ ಕೂಡ ತನ್ನ ಪ್ರದರ್ಶನವನ್ನು ನಿಲ್ಲಿಸಿತ್ತು. ಆದರೆ, ಈಗ ಅವುಗಳ ಸಾಲಿಗೆ ತ್ರಿಭುವನ್‌ ಚಿತ್ರಮಂದಿರ ಕೂಡ ಕೊನೇ ಆಟ ಪ್ರದರ್ಶಿಸಲು ದಿನ ಎಣಿಸುತ್ತಿದೆ. ಇದು ಅಚ್ಚರಿಯಾದರೂ ಸತ್ಯ.

ಈ ಹಿಂದೆಯೇ, ತ್ರಿಭುವನ್‌ ಚಿತ್ರಮಂದಿರವನ್ನು ಮುಚ್ಚಲಾಗುತ್ತದೆ ಎಂಬ ಸುದ್ದಿ ಹರಡಿತ್ತು. ಆದರೂ, ಅಲ್ಲಿ ಒಂದಷ್ಟು ಕನ್ನಡದ ಚಿತ್ರಗಳು ಪ್ರದರ್ಶನಗೊಂಡಿದ್ದವು.ಅಷ್ಟೇ ಅಲ್ಲ, ಶತದಿನ ಕೂಡ ಆಚರಿಸಿದ್ದವು. ಆಗ ತ್ರಿಭುವನ್‌ ಚಿತ್ರಮಂದಿರ ಮುಚ್ಚುತ್ತದೆ ಎಂಬ ಮಾತುಗಳಿಗೆ ಬ್ರೇಕ್‌ ಬಿದ್ದಿತ್ತು. ಆದರೆ, ಈಗ ಆ ಮಾತಿಗೆ ಒಂದಷ್ಟು ತೂಕ ಬಂದಿದೆ. ಒಂದು ಮೂಲದ ಪ್ರಕಾರ ಬರುವ ಗುರುವಾರ ರಾತ್ರಿಯ ಪ್ರದರ್ಶನದ ನಂತರ ತ್ರಿಭುವನ್‌ ಚಿತ್ರಮಂದಿರ ಸ್ಥಗಿತಗೊಳ್ಳಲಿದೆ ಎನ್ನಲಾಗುತ್ತಿದೆ. ತನ್ನ ಕೊನೇ ಆಟ ಪ್ರದರ್ಶಿಸಲಿರುವ ಚಿತ್ರಮಂದಿರದಲ್ಲಿ ಈಗ ಸದ್ಯಕ್ಕೆ ಹಿಂದಿ ಚಿತ್ರವೊಂದು ಪ್ರದರ್ಶನ ಕಾಣುತ್ತಿದೆ. ಇನ್ನು, ತ್ರಿಭುವನ್‌ಗೆ ಅಂಟಿಕೊಂಡಿರುವ ಕೈಲಾಶ್‌ ಚಿತ್ರಮಂದಿರದಲ್ಲಿ “ಲಾಸ್ಟ್‌ಬಸ್‌’ ಚಿತ್ರ ಪ್ರದರ್ಶನಗೊಳ್ಳುತ್ತಿದೆ. ಅದೇನೆ ಇರಲಿ, ತ್ರಿಭುವನ್‌ ತನ್ನ ಕೊನೆಯ ಆಟದ ನಂತರ ಮತ್ತೆಂದೂ ಅಲ್ಲಿ ಕನ್ನಡ ಪ್ರೇಕ್ಷಕ ಕಾಲಿಡುವುದಿಲ್ಲ.

ತ್ರಿಭುವನ್‌ ಚಿತ್ರಮಂದಿರ, ಕನ್ನಡ ಸೇರಿದಂತೆ, ತೆಲುಗು, ಹಿಂದಿ ಹಾಗು ಇಂಗ್ಲೀಷ್‌ ಚಿತ್ರಗಳ ಪ್ರದರ್ಶನವನ್ನು ಮಾಡಿತ್ತು.
ಪ್ರತಿ ಶುಕ್ರವಾರ ಬಂತೆಂದರೆ, ತ್ರಿಭುವನ್‌ ಚಿತ್ರಮಂದಿರ ಸಿಂಗಾರಗೊಳ್ಳುತ್ತಿತ್ತು. ಇನ್ನು ಮುಂದೆ ತ್ರಿಭುವನ್‌ ಬರೀ ನೆನಪು ಮಾತ್ರ ಎಂಬ ಮಾತುಗಳು ಕೇಳಿಬರತೊಡಗಿವೆ. ಈ ಹಿಂದೆ ಕಪಾಲಿ ಚಿತ್ರಮಂದಿರ ಕೂಡ ತನ್ನ ಆಟವನ್ನು ನಿಲ್ಲಿಸುತ್ತೆ ಎಂಬ ಮಾತುಗಳು ದಟ್ಟವಾಗಿ ಹಬ್ಬಿದ್ದವು. ಆದರೆ, ಅದಿನ್ನೂ ಚಿತ್ರ ಪ್ರದರ್ಶನ ಮಾಡುತ್ತಲೇ ಇದೆ. ಅದಕ್ಕೂ ಮುನ್ನವೇ ತ್ರಿಭುವನ್‌ ತನ್ನ ಆಟ ನಿಲ್ಲಿಸಲಿದೆ ಎಂಬ ಮಾತಂತೂ ಈಗ ಗಾಂಧಿನಗರದ ಗಲ್ಲಿಗಲ್ಲಿಯಲ್ಲಿ ಹರಿದಾಡುತ್ತಿರುವುದು ಸತ್ಯ. ಬರುವ ಗುರುವಾರ ರಾತ್ರಿ ತ್ರಿಭುವನ್‌ ತನ್ನ ಕೊನೇ ಆಟ ಆಡಲಿದೆ.
-ಉದಯವಾಣಿ

Write A Comment