ಕರ್ನಾಟಕ

ರಾಜ್ಯದಲ್ಲಿ ಏರುತ್ತಿರುವ ಬಿಸಿಲಿನ ತಾಪಕ್ಕೆ ವೃದ್ಧರೂ ಸೇರಿದಂತೆ ನಾಲ್ಕೈದು ಮಂದಿ ಸಾವು … !

Pinterest LinkedIn Tumblr

stateಬೆಂಗಳೂರು, ಏ.23-ರಾಜ್ಯದಲ್ಲಿ ಏರುತ್ತಿರುವ ಬಿಸಿಲಿನ ತಾಪಕ್ಕೆ ವೃದ್ಧರೂ ಸೇರಿದಂತೆ ನಾಲ್ಕೈದು ಮಂದಿ ಅಸ್ವಸ್ಥರಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಕಳೆದ ಒಂದೆರಡು ದಿನಗಳ ಹಿಂದೆಯೂ ಬಿಸಿಲಿನ ಝಳ ಸಹಿಸಲಾಗದೆ ವೃದ್ಧರು ಅಸುನೀಗಿದ್ದರು. ಉತ್ತರ ಕರ್ನಾಟಕದ ಹಾವೇರಿ, ಗುಲ್ಬರ್ಗಾ, ಬಳ್ಳಾರಿ ಸೇರಿದಂತೆ ಕೆಲವೆಡೆ ಬಿರು ಬಿಸಿಲಿನಿಂದ ಅಸ್ವಸ್ಥಗೊಂಡು ಸಾವನ್ನಪ್ಪಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಕರ್ತವ್ಯ ನಿರತರೂ ಸೇರಿದಂತೆ ಮನೆಯಿಂದ ಹೊರಹೋದವರು ಬಿಸಿಲಿನ ತಾಪದಿಂದ ಬಳಲಿ ಸಾವನ್ನಪ್ಪುತ್ತಿದ್ದಾರೆ. ನಿನ್ನೆ ಕರ್ತವ್ಯ ನಿರತ ಪೇದೆಯೊಬ್ಬರು ಬಿಸಿಲಿನ ತಾಪ ತಾಳಲಾರದೆ ಕುಸಿದು ಬಿದ್ದು ಅಸ್ವಸ್ಥಗೊಂಡಿದ್ದರು.ಇಂದು ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದ್ದಾರೆ.

ಪೇದೆ ಬಲಿ: ಬಿಸಿಲಿನ ತಾಪಕ್ಕೆ ಕಲಬುರಗಿ ನಗರದ ಜಗತ್ ಬಡಾವಣೆ ನಿವಾಸಿ ನಾಗಪ್ಪ ದೋತ್ರೆ (51) ಮೃತಪಟ್ಟ ಟ್ರಾಫಿಕ್ ಪೇದೆ. ಇವರು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನಗರಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಬಂದೋಬಸ್ತ್ ವ್ಯವಸ್ಥೆಗಾಗಿ ನಿನ್ನೆ ಸಂಜೆ ಜಿಜಿಎಚ್ ಸರ್ಕಲ್ ಬಳಿ ಪೂರ್ವಭಾವಿ ಸಿದ್ಧತೆಯಲ್ಲಿ ತೊಡಗಿದ್ದಾಗ ಬಿಸಿಲಿನ ತಾಪಕ್ಕೆ ದಣಿದು ಕುಸಿದು ಬಿದ್ದಿದ್ದರು. ಈ ವೇಳೆ ಕಡಿಮೆ ರಕ್ತದೊತ್ತಡದಿಂದ ಅಸ್ವಸ್ಥರಾಗಿದ್ದ ಇವರನ್ನು ಕೂಡಲೇ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗಿನ ಜಾವ ಸಾವನ್ನಪ್ಪಿದ್ದಾರೆ.

ಹಾವೇರಿ: ಜಿಲ್ಲೆಯ ಹಿರೇಕೆರೂರು ಪಟ್ಟಣದ ನಿವಾಸಿ ನಜೀರ್ ಅಹಮದ್ ಹಳಿಯಾಳ (70) ಬಿಸಿಲಿನ ತಾಪಕ್ಕೆ ಮೃತರಾಗಿದ್ದಾರೆ. ನಿನ್ನೆ ಮನೆಯಿಂದ ಕೆಲಸದ ನಿಮಿತ್ತ ಪಟ್ಟಣಕ್ಕೆ ತೆರಳಿದ್ದ ಅವರು, ಮನೆಗೆ ಹಿಂತಿರುಗಿದಾಗ ಸಾಕಷ್ಟು ನಿತ್ರಾಣರಾಗಿದ್ದರು. ಬಿಸಿಲಿನ ಝಳದಿಂದ ಅಸ್ವಸ್ಥರಾಗಿ ಉಸಿರಾಟದ ತೊಂದರೆ ಎದುರಿಸಿದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಬಿಸಿಲಿನಿಂದ ಉಂಟಾಗಿದ್ದ ಆರೋಗ್ಯದ ಏರುಪೇರು ಸರಿಯಾಗದೆ ಮೃತಪಟ್ಟಿದ್ದಾರೆ.

ಮಗು ಸಾವು: ಬಳ್ಳಾರಿಯ ಚಾಗನೂರು ಗ್ರಾಮದ ಒಂದೂವರೆ ವರ್ಷದ ಮಗು ಸೋನಿಕಾ ಮೃತಪಟ್ಟಿದ್ದಾಳೆ. ಹೃದಯಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಮಗು, ಆಂಧ್ರದ ಅನಂತಪುರ ಬಳಿಯ ಉರವಕೊಂಡಕ್ಕೆ ಮದುವೆ ಸಮಾರಂಭಕ್ಕಾಗಿ ಹೋಗಿ ಬರುವಾಗ ಬಿಸಿಲಿನ ಧಗೆಗೆ ಉಸಿರಾಟದ ತೊಂದರೆ ಉಂಟಾಗಿದೆ. ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಸೋನಿಕಾ ಸಾವನ್ನಪ್ಪಿದ್ದಾಳೆ.

Write A Comment