ಕರ್ನಾಟಕ

ಕೆರೆ ಅಂಗಳದಲ್ಲಿ 5 ಎಕರೆ 20 ಗುಂಟೆ ಜಾಗ ಒತ್ತುವರಿ : ಇಸ್ಕಾನ್ ದೇವಸ್ಥಾನಕ್ಕೆ ರಾಜ್ಯ ಸರ್ಕಾರ ನೋಟಿಸ್

Pinterest LinkedIn Tumblr

isಬೆಂಗಳೂರು, ಏ.22-ಕಾಚರಕನಹಳ್ಳಿ ಕೆರೆ ಅಂಗಳದಲ್ಲಿ 5 ಎಕರೆ 20 ಗುಂಟೆ ಜಾಗ ಒತ್ತುವರಿ ಮಾಡಿಕೊಂಡು ನಿರ್ಮಿಸಲಾಗಿರುವ ಇಸ್ಕಾನ್ ದೇವಸ್ಥಾನಕ್ಕೆ ರಾಜ್ಯ ಸರ್ಕಾರ ನೋಟಿಸ್ ಜಾರಿ ಮಾಡಿದೆ. ಕೆರೆ ಒತ್ತುವರಿ ಅಧ್ಯಯನ ಸದನ ಸಮಿತಿ ಮುಂದಿನ ಸಭೆಯಲ್ಲಿ ಈ ಒತ್ತುವರಿಯ ಕುರಿತು ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಸಮಿತಿಯ ಅಧ್ಯಕ್ಷ ಕೆ.ಬಿ.ಕೋಳಿವಾಡ ತಿಳಿಸಿದ್ದಾರೆ. ಕೋಳಿವಾಡ ಸಮಿತಿ ಇಂದು ನಗರದ ನಾಲ್ಕು ಪ್ರಮುಖ ಕೆರೆಗಳಿಗೆ ಭೇಟಿ ನೀಡಿ ಒತ್ತುವರಿ ಜಾಗ, ತೆರವು ಜಾಗವನ್ನು ಪರಿಶೀಲಿಸಿತು. ನಗರದ ಸ್ಯಾಂಕಿಟ್ಯಾಂಕ್, ಆವಲಹಳ್ಳಿ ಸಿಂಗನಾಯಕನಹಳ್ಳಿ ಕೆರೆ, ಹಮಾನಿಕೆರೆ ಮತ್ತು ಕಾಚರಕನಹಳ್ಳಿ ಕೆರೆ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಯಳಂದೂರು ಕೆರೆಗೆ ಭೇಟಿ ನೀಡುವ ಸಾಧ್ಯತೆ ಇತ್ತಾದರೂ ಅಲ್ಲಿ ತ್ಯಾಜ್ಯ ನೀರು ಸಂರಕ್ಷಣಾ ಘಟಕಕ್ಕೆ ನೀಡಬೇಕಾಗಿದ್ದ ಭೂಮಿಯನ್ನು ಖಾಸಗಿ ಸಂಸ್ಥೆಗಳ ಐಟಿ ಪಾರ್ಕ್‌ಗೆ ನೀಡಿರುವುದು ಬೆಳಕಿಗೆ ಬಂದಿದ್ದು, ಇದರ ಕುರಿತು ಪ್ರವಾಸ ಆರಂಭಕ್ಕೂ ಮುನ್ನ ಸಮಿತಿಯ ಅಧ್ಯಕ್ಷ ಕೆ.ಬಿ.ಕೋಳಿವಾಡ ಅಧಿಕಾರಿಗಳನ್ನು ಪ್ರಾಥಮಿಕ ವಿಚಾರಣೆಗೆ ಒಳಪಡಿಸಿದರು. ಈ ಸಂದರ್ಭದಲ್ಲಿ ಗೊಂದಲಗಳ ಉತ್ತರಗಳು ಬಂದಾಗ ಸಿಡಿಮಿಡಿಗೊಂಡ ಕೋಳಿವಾಡ ಅವರು, ಕೂಡಲೇ ಬೆಳ್ಳಂದೂರು ಕೆರೆಯ ಜಾಗವನ್ನು ಕೊಳಚೆನೀರು ಸಂಸ್ಕರಣಾ ಘಟಕಕ್ಕೆ ನೀಡದೆ ಖಾಸಗಿ ಐಟಿ ಪಾರ್ಕ್‌ಗೆ ನೀಡಿರುವ ಕುರಿತು ಸಮಗ್ರ ವಿಚಾರಣೆ ನಡೆಸಿ ವರದಿ ನೀಡುವಂತೆ ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯಕಾರ್ಯದರ್ಶಿ ಮಹೇಂದ್ರ ಜೈನ್ ಅವರಿಗೆ ಸ್ಥಳದಲ್ಲಿ ಆದೇಶ ನೀಡಿದರು.

ವರದಿ ಬರುವವರೆಗೂ ಬೆಳ್ಳಂದೂರು ಕೆರೆ ವೀಕ್ಷಣೆಯನ್ನು ಕೈ ಬಿಡುವುದಾಗಿ ಕೋಳಿವಾಡ ಹೇಳಿದರು.

ಸ್ಯಾಂಕಿಕೆರೆಗೆ ಭೇಟಿ:

ನಗರದ ಹೃದಯ ಭಾಗದಲ್ಲಿರುವ ಸ್ಯಾಂಕಿಕೆರೆ ಒಟ್ಟು 46.19 ಎಕರೆ ವಿಸ್ತೀರ್ಣ ಹೊಂದಿದ್ದು, ಅದರಲ್ಲಿ ಸುಮಾರು 4 ಎಕರೆ ಒತ್ತುವರಿಯಾಗಿದೆ. 37 ಕುಂಟೆಯಲ್ಲಿ ಅರಣ್ಯ ಇಲಾಖೆ ರಸ್ತೆ ನಿರ್ಮಿಸಿದೆ. 1.04 ಎಕರೆಯಲ್ಲಿ ಖಾಸಗಿ ವ್ಯಕ್ತಿಗಳ ಸ್ವಾಧೀನದಲ್ಲಿದ್ದು, ತಮ್ಮ ಭೂಮಿ ಎಂದು ಪ್ರತಿಪಾದಿಸುತ್ತಿದ್ದಾರೆ. ಇದು ಕೆರೆಯ ಜಾಗ ಎಂದು ತಕರಾರು ನಡೆಯುತ್ತಿದ್ದು, ನ್ಯಾಯಾಲಯದ ವಿಚಾರಣೆ ಬಾಕಿ ಇದೆ. 1.4 ಎಕರೆಯಲ್ಲಿ ಬಿಬಿಎಂಪಿ ಈಜು ಕೊಳ ನಿರ್ಮಿಸಿದೆ. 16 ಕುಂಟೆಯಲ್ಲಿ ಚಕ್ರಪತಿ ಶಿವಾಜಿ ಮಹಾರಾಜ್ ಅವರ ಪ್ರತಿಮೆ ನಿರ್ಮಾಣವಾಗಿದೆ. ಇನ್ನು 42.2 ಎಕರೆ ಜಾಗದಲ್ಲಿ ಕೆರೆಯಿದ್ದು, ಅದರಲ್ಲಿ ನೀರು ತುಂಬಿದೆ ಎಂದು ವಿವರಿಸಿದರು.

ಇಸ್ಕಾನ್‌ಗೆ ನೋಟಿಸ್:

ಒಟ್ಟು 57.26 ಎಕರೆ ವಿಸ್ತೀರ್ಣದಲ್ಲಿದ್ದ ಕಾಚರಕನಹಳ್ಳಿ ಕೆರೆ ಅತ್ಯಂತ ವಿವಾದಿತ ಜಾಗವಾಗಿದ್ದು, ಇಲ್ಲಿ ಹಲವಾರು ಮಂದಿ ಖಾಸಗಿ ವ್ಯಕ್ತಿಗಳು ಒತ್ತುವರಿ ಮಾಡಿಕೊಂಡಿದ್ದಾರೆ. ಅದರಲ್ಲೂ ಇಸ್ಕಾನ್ ದೇವಸ್ಥಾನ 5.20 ಎಕರೆಯನ್ನು ಒತ್ತುವರಿಮಾಡಿ ಕೊಂಡಿದ್ದು, ಮೂರ್ನಾಗಲ್ಕು ದೇವಸ್ಥಾನಗಳನ್ನು ನಿರ್ಮಿಸಿದೆ, ಕಲ್ಯಾಣಮಂಟಪವನ್ನ ನಿರ್ಮಿಸಿ ವಾಣಿಜ್ಯ ಉದ್ದೇಶಗಳಿಗೆ ಬಳಕೆ ಮಾಡಿಕೊಳ್ಳುತ್ತಿದೆ. ಈ ಕುರಿತು ತಹಸೀಲ್ದಾರ್ ಅವರು ಇಸ್ಕಾನ್ ಆಡಳಿತ ಮಂಡಳಿಗೆ ನೋಟಿಸ್ ನೀಡಿದ್ದಾರೆ. ಅವರಿಂದ ಇನ್ನೂ ಉತ್ತರ ಬಂದಿಲ್ಲ. ಮುಂದಿನ ಸಭೆಯಲ್ಲಿ ಈ ಒತ್ತುವರಿಯ ಬಗ್ಗೆ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಕೋಳಿವಾಡ ಹೇಳಿದರು.

ಕಾಚರಕನಹಳ್ಳಿ ಕೆರೆಯಲ್ಲಿ ಒಟ್ಟು 30ಜನ 33.18 ಎಕರೆಯನ್ನು ಒತ್ತುವರಿ ಮಾಡಿಕೊಂಡಿದ್ದು, ಎಲ್ಲರಿಗೂ ನೋಟಿಸ್ ನೀಡಲಾಗಿದೆ. 21 ಮಂದಿ ಪ್ರತ್ಯುತ್ತರ ನೀಡಿದ್ದಾರೆ. ಈ ಕೆರೆಯಲ್ಲಿ ಬಿಡಿಎ 15.26 ಎಕರೆಯಲ್ಲಿ ರಸ್ತೆ ನಿರ್ಮಿಸಿದೆ. 1.17 ಎಕರೆಯಲ್ಲಿ ನಾಲೆಯಿದೆ. 3.35 ಎಕರೆಯಲ್ಲಿ ಇನ್ನೊಂದು ರಸ್ತೆ ಇದೆ. 1.22 ಮತ್ತು 1.2ಎಕರೆಯಲ್ಲಿ ಎರಡು ಪ್ರತ್ಯೇಕ ಕೊಳಚೆ ಪ್ರದೇಶ ಇದೆ. 1.15 ಎಕರೆಯಲ್ಲಿ ಚಂದ್ರಿಕಾ ಸೋಪ್ ಪ್ಯಾಕ್ಟರಿ ಇದೆ. 17 ಕುಂಟೆಯಲ್ಲಿ ಶ್ರೀನಿವಾಸ್‌ಗೌಡ ಎಂಬುವರ ಪೆಟ್ರೋಲ್ ಬಂಕ್ ಇದೆ. ಉಳಿದಂತೆ ವಿವಿಧ ವ್ಯಕ್ತಿಗಳು ಒಟ್ಟು 33.18 ಎಕರೆಯನ್ನು ಒತ್ತು ವರಿ ಮಾಡಿಕೊಂಡಿದ್ದಾರೆ ಎಂದು ಅವರು ವಿವರಿಸಿದರು.

ಆವಲಹಳ್ಳಿ-ಸಿಂಗನಾಕಯನಹಳ್ಳಿ ಕೆರೆ ಒಟ್ಟು 13.11 ಎಕರೆ ಪ್ರದೇಶದಲ್ಲಿದೆ. ಇಲ್ಲಿ 36 ಕುಂಟೆ ಒತ್ತುವರಿಯಾಗಿದ್ದು, ಬಹುತೇಕ ತೆರವುಗೊಳಿಸಲಾಗಿದೆ. ರಮೇಶ್ ಎಂಬುವರು ವಿಶ್ವವಿದ್ಯಾಪೀಠ ಶಾಲೆಗಾಗಿ 16ಕುಂಟೆ ಜಮೀನನ್ನು ಒತ್ತುವರಿ ಮಾಡಿಕೊಂಡಿದ್ದು, ಅಧಿಕಾರಿಗಳು ಅದನ್ನು ತೆರವುಗೊಳಿಸಿದ್ದಾರೆ. ಸಿಂಗನಾಯಕನಹಳ್ಳಿ-ಹಮಾನಿಕೆರೆ 121.36 ಎಕರೆಯಲ್ಲಿದ್ದು, 38 ಮಂದಿ 33.14 ಎಕರೆಯನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಬಹುತೇಕ ಇದು ಕೃಷಿ ಭೂಮಿಯಾಗಿದ್ದು, 20 ಎಕರೆ ಭೂಮಿಯನ್ನು ತೆರವುಗೊಳಿಸಲಾಗಿದೆ ಎಂದು ಕೋಳಿವಾಡ ತಿಳಿಸಿದರು.

ಬೆಳ್ಳಂದೂರು ಕೆರೆಯ ಕರ್ಮಕಾಂಡ:

ಬೆಳ್ಳಂದೂರು ಕೆರೆಯಲ್ಲಿ ತ್ಯಾಜ್ಯಸಂಸ್ಕರಣಾ ಘಟಕ ಸ್ಥಾಪಿಸಲು 2004ರಲ್ಲಿ ಬಿಡಬ್ಲ್ಯೂಎಸ್‌ಎಸ್‌ಬಿ ಜಮೀನು ನೀಡುವಂತೆ ಮನವಿ ಸಲ್ಲಿಸಿತ್ತು. ಆದರೆ, ತ್ಯಾಜ್ಯಸಂಸ್ಕರಣಾ ಘಟಕಕ್ಕೆ ಸ್ಥಳೀಯ ಅಧಿಕಾರಿಗಳು ಜಮೀನು ನೀಡಿಲ್ಲ. ಕೊನೆಗೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಬೇರೊಂದು ಜಾಗವನ್ನು ಸ್ವಾಧೀನಪಡಿಸಿಕೊಂಡು ಬಿಡಬ್ಲ್ಯೂಎಸ್‌ಎಸ್‌ಬಿ ತ್ಯಾಜ್ಯಸಂಸ್ಕರಣಾ ಘಟಕವನ್ನು ಸ್ಥಾಪಿಸುತ್ತಿದೆ. ವಿಚಿತ್ರ ಎಂದರೆ 2007ರಲ್ಲಿ ಇದೇ ಜಾಗವನ್ನು ನೀಡುವಂತೆ ಖಾಸಗಿ ಸಂಸ್ಥೆಗಳು ಮನವಿ ಸಲ್ಲಿಸಿದ್ದವು. ಕೆಐಎಡಿಬಿ ಜಾಗವನ್ನು ಸ್ವಾಧೀನಪಡಿಸಿಕೊಂಡು ಐಟಿ ಕಂಪೆನಿಗಳ ಪಾರ್ಕ್‌ಗೆ ಮಂಜೂರು ಮಾಡಿದೆ. ಇಲ್ಲಿ ಕಟ್ಟಡ ನಿರ್ಮಾಣವಾಗಿದ್ದು, ಕಂಪೆನಿಗಳು ಕಾರ್ಯಾರಂಭವನ್ನೂ ಮಾಡಿವೆ.

ಪ್ರಮುಖವಾಗಿ ಕೆರೆಯ ಒತ್ತುವರಿಗಿಂತಲೂ ಈ ಜಾಗದ ಪರಿಶೀಲನೆಗಾಗಿಯೇ ಕೋಳಿವಾಡ ಸಮಿತಿ ಭೇಟಿ ನೀಡುವ ಉದ್ದೇಶ ಹೊಂದಿತ್ತು. ಆದರೆ, ಕೋಳಿವಾಡ ಅವರು ಪೂರ್ವಭಾವಿ ಸಭೆಯಲ್ಲಿ ಪ್ರಾಥಮಿಕ ವಿಚಾರಣೆ ಮಾಡಿದಾಗ ಕೆಐಎಡಿಬಿ ಅಧಿಕಾರಿಗಳಿಂದ ಅಸ್ಪಷ್ಟ ಉತ್ತರ ಬಂತು. ಸರ್ಕಾರಿ ಸಂಸ್ಥೆಗಿಂತಲೂ ಖಾಸಗಿ ಸಂಸ್ಥೆಗೆ ಆದ್ಯತೆ ಮೇರೆಗೆ ಜಾಗ ಮಂಜೂರು ಮಾಡಿದ ಬಗ್ಗೆ ಸಮಿತಿಯ ಸದಸ್ಯರಾದ ಎನ್.ಎ.ಹ್ಯಾರಿಸ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಕೂಡಲೇ ಅಧ್ಯಯನ ನಡೆಸಿ ವರದಿ ನೀಡುವಂತೆ ನಗರಾಭಿವೃದ್ಧಿ ಇಲಾಖೆಯ ಪ್ರಧಾನಕಾರ್ಯದರ್ಶಿ ಅವರಿಗೆ ಕೋಳಿವಾಡ ಸೂಚನೆ ನೀಡಿದರು.

ಸಮಿತಿಯ ವರದಿ ಬಂದ ನಂತರ ಈ ಜಾಗಕ್ಕೆ ಭೇಟಿ ನೀಡಿ ಪರಿಶೀಲಿಸುತ್ತೇವೆ ಎಂದು ಅವರು ಸ್ಪಷ್ಟಪಡಿಸಿದರು. ಬೆಳ್ಳಂದೂರು ಕೆರೆ ಒಟ್ಟು 919 ಎಕರೆ ಪ್ರದೇಶದಲ್ಲಿದ್ದು, 23.35 ಎಕರೆ ಒತ್ತುವರಿಯಾಗಿದೆ. ಇದರಲ್ಲಿ ಬಹಳಷ್ಟು ಖಾಸಗಿ ವ್ಯಕ್ತಿಗಳಿದ್ದಾರೆ ಎಂದು ಹೇಳಿದರು. ಸಮಿತಿಯ ಸದಸ್ಯರಾದ ಗೋಪಾಲಯ್ಯ, ಎನ್.ಎ.ಹ್ಯಾರಿಸ್, ಸುರೇಶ್‌ಕುಮಾರ್, ಬೆಂಗಳೂರು ನಗರ ಜಿಲ್ಲಾಧಿಕಾರಿ ವಿ.ಶಂಕರ್ ಮತ್ತಿತರ ಅಧಿಕಾರಿಗಳು ಪರಿಶೀಲನೆಯಲ್ಲಿ ಹಾಜರಿದ್ದರು.

Write A Comment