ಕರ್ನಾಟಕ

ದಲಿತ ಸಿಎಂ ಕೂಗು : ಸೋನಿಯಾ ಜತೆ ಕೆ.ಎಚ್. ಮುನಿಯಪ್ಪ ಮೋಟಮ್ಮ ಮಾತುಕತೆ

Pinterest LinkedIn Tumblr

Delhiಬೆಂಗಳೂರು, ಏ. ೨೧- ದಲಿತ ಸಮುದಾಯದವರು ರಾಜ್ಯದ ಮುಖ್ಯಮಂತ್ರಿ ಆಗಬೇಕು ಎಂಬ ಕೂಗು ಎದ್ದಿರುವಾಗಲೇ ಇದೇ ಸಮುದಾಯಕ್ಕೆ ಸೇರಿದ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ, ಕೇಂದ್ರದ ಮಾಜಿ ಸಚಿವ ಕೆ.ಎಚ್. ಮುನಿಯಪ್ಪ ದೆಹಲಿಯಲ್ಲಿ ಇಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿರುವ ವಿದ್ಯಮಾನ ವರದಿಯಾಗಿದೆ.
ಕೆಪಿಸಿಸಿ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿರುವ ಕೆ.ಎಚ್. ಮುನಿಯಪ್ಪ ಅವರು ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ದಲಿತ ಸಿ.ಎಂ. ವಿಚಾರ, ಕೆಪಿಸಿಸಿಗೆ ಹೊಸ ಅಧ್ಯಕ್ಷರ ನೇಮಕ ಮುಂತಾದ ವಿಚಾರಗಳ ಬಗ್ಗೆ ಸುದೀರ್ಘವಾಗಿ ಚರ್ಚೆ ನಡೆಸಿದರು.
ದೆಹಲಿಯ ಜನಪತ್ ರಸ್ತೆಯಲ್ಲಿರುವ ಸೋನಿಯಾ ಗಾಂಧಿ ಅವರ ನಿವಾಸಕ್ಕೆ ಇಂದು ಬೆಳಗ್ಗೆ ತೆರಳಿದ್ದ ಮುನಿಯಪ್ಪ ಅವರು ರಾಜ್ಯದಲ್ಲಿನ ರಾಜಕೀಯ ವಿದ್ಯಮಾನಗಳ ಬಗ್ಗೆ “ಮೇಡಂ” ಅವರ ಗಮನಕ್ಕೆ ತಂದಿದ್ದಾರೆ.
ಇತ್ತೀಚೆಗೆ ದಲಿತ ನಾಯಕರೊಬ್ಬರು ರಾಜ್ಯದ ಮುಖ್ಯಮಂತ್ರಿ ಆಗಬೇಕು ಎಂಬ ಕೂಗು ಪ್ರಬಲವಾಗಿ ಕೇಳಿ ಬರುತ್ತಿರುವಾಗಲೆ ಈ ಭೇಟಿ ದಲಿತ ಸಮುದಾಯಗಳಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದೆ.
ಸೋನಿಯಾ ಗಾಂಧಿ ಅವರ ಕುಟುಂಬಕ್ಕೆ ಆಪ್ತರೆನಿಸಿರುವ ಕೆಲವೇ ನಾಯಕರಲ್ಲಿ ಮುನಿಯಪ್ಪ ಅವರು ಒಬ್ಬರಾಗಿದ್ದಾರೆ. ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷರಾಗಬೇಕೆಂಬ ಬಯಕೆಯನ್ನು ಅವರು ವ್ಯಕ್ತಪಡಿಸಿದ್ದರು. ಪ್ರಸ್ತುತ ಕೆಪಿಸಿಸಿ ಅಧ್ಯಕ್ಷರಾಗಿರುವ ಡಾ. ಜಿ. ಪರಮೇಶ್ವರ್ ಅವರ ಅಧಿಕಾರಾವಧಿ ಈಗಾಗಲೇ ಮುಗಿದಿದ್ದು, ಹೊಸ ಅಧ್ಯಕ್ಷರ ನೇಮಕ ವಿಚಾರ ಸದ್ಯಕ್ಕೆ ನೆನೆಗುದಿಗೆ ಬಿದ್ದಿದೆ.
ಹೊಸ ಅಧ್ಯಕ್ಷರನ್ನು ನೇಮಕ ಮಾಡುವ ಸಂದರ್ಭದಲ್ಲಿ ತಮಗೊಂದು ಅವಕಾಶ ನೀಡಬೇಕು ಎಂಬುದಾಗಿಯೂ ಮುನಿಯಪ್ಪ ಅವರು ಸೋನಿಯಾ ಅವರ ಮನವೊಲಿಕೆಗೆ ಪ್ರಯತ್ನಿಸಿದ್ದಾರೆಂದು ತಿಳಿದು ಬಂದಿದೆ.
ಇತ್ತೀಚೆಗಷ್ಟೆ ಕಾರ್ಯಕ್ರಮವೊಂದರಲ್ಲಿ ಗೃಹ ಸಚಿವ ಡಾ. ಜಿ. ಪರಮೇಶ್ವರ್ ದಲಿತರು ರಾಜ್ಯದ ಮುಖ್ಯಮಂತ್ರಿ ಆಗಬೇಕು ಎಂಬ ವಾದವನ್ನು ಮುಂದಿಟ್ಟಿದ್ದರು. ಅದೀಗ ಚರ್ಚೆಯ ವಿಷಯವಾಗಿದೆ.
ಸೋನಿಯಾ ಗಾಂಧಿ ಭೇಟಿ ಬಳಿಕ ಮಾತನಾಡಿದ ಕೆ.ಹೆಚ್ ಮುನಿಯಪ್ಪ ಅವರು, ನಾನು 7 ಭಾರಿ ಸತತ ಸಂಸದನಾಗಿದ್ದು, ನನಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡುವ ಕುರಿತು ಹಿರಿಯನಾಯಕರಲ್ಲೂ ಸಹ ಮತವಿದೆ. ಹೀಗಾಗಿ ತನಗೆ ಅಧ್ಯಕ್ಷ ಸ್ಥಾನ ನೀಡುವಂತೆ ಮನವಿ ಮಾಡಿದ್ದೇನೆ.ಇದಕ್ಕೆ ಸೋನಿಯಾ ಗಾಂಧಿ ಅವರು ಎಲ್ಲರ ಜೊತೆ ಚರ್ಚೆ ನಡೆಸುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.
ಅಲ್ಲದೆ ನನಗೆ ಅಧ್ಯಕ್ಷ ಸ್ಥಾನ ನೀಡಿದರೆ ಮುಂದಿನ 2018ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಗೆಲುವು ತಂದುಕೊಟ್ಟು ಮತ್ತೆ ಪಕ್ಷ ಅಧಿಕಾರಕ್ಕೆ ತರಲು ಯತ್ನಿಸುವೆ. ಈ ಕುರಿತು ಪಕ್ಷ ಸಂಘಟಿಸುವಂತೆ ಸೋನಿಯಾ ಗಾಂಧಿ ಅವರು ಕಿವಿಮಾತು ಹೇಳಿದ್ದಾರೆಂದು ಮುನಿಯಪ್ಪ ಅವರು ಸ್ಪಷ್ಟೀಕರಿಸಿದರು.
ಮೋಟಮ್ಮ ಭೇಟಿ
ವಿಧಾನಪರಿಷತ್ ಸದಸ್ಯೆ, ಮಾಜಿ ಸಚಿವೆ ಮೋಟಮ್ಮ ಅವರು ಇಂದು ಸೋನಿಯಾಗಾಂಧಿ ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿ ಮಾತುಕತೆ ನಡೆಸಿದರು.
ರಾಜ್ಯ ಸಚಿವ ಸಂಪುಟ ಪುನರ್ ರಚನೆ ವೇಳೆ ತಮ್ಮನ್ನು ಪರಿಗಣಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸೂಚಿಸಬೇಕು. ನಾನು ಕೂಡಾ ಪಕ್ಷದ ಬೆಳವಣಿಗೆಗೆ ಅಪಾರವಾಗಿ ಶ್ರಮಿಸಿದ್ದೇನೆ. ಪಕ್ಷಕ್ಕೆ ಚಿಕ್ಕ ಆಧಾರ ಸ್ತಂಭದಂತಿದ್ದೇನೆ ಎಂದು ಸೋನಿಯಾ ಅವರ ಗಮನ ಸೆಳೆದರು
ಇದಕ್ಕೆ ಪ್ರತಿಕ್ರಿಯಿಸಿದ ಸೋನಿಯಾ ಅವರು, ಸಿದ್ದರಾಮಯ್ಯನವರು ಸಂಪುಟ ಪುನರ್ ರಚನೆ ಬಗ್ಗೆ ತಮ್ಮೊಂದಿಗೆ ಇನ್ನೂ ಚರ್ಚೆ ಮಾಡಿಲ್ಲ ಎಂದು ಹೇಳಿರುವುದಾಗಿ ಮೂಲಗಳು ತಿಳಿಸಿವೆ.
ರಾಜ್ಯದಲ್ಲಿ ಸಂಘಟಿಸಲು ಉದ್ದೇಶಿಸಿರುವ ಸ್ತ್ರೀಶಕ್ತಿ ಸಂಘಗಳ ಸಮಾವೇಶದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವಂತೆ ಮೋಟಮ್ಮ ಇದೇ ಸಂದರ್ಭದಲ್ಲಿ ಸೋನಿಯಾ ಅವರನ್ನು ಆಹ್ವಾನಿಸಿದರು.

Write A Comment