ಕನ್ನಡ ವಾರ್ತೆಗಳು

ಶಕ್ತಿನಗರದಲ್ಲಿ 30 ಕೋಟಿ ರೂ. ವೆಚ್ಚದಲ್ಲಿ ಕೊಂಕಣಿ ಮ್ಯೂಸಿಯಂ ಸ್ಥಾಪನೆ :ಶಿಲನ್ಯಾಸ ನೆರವೇರಿಸಿದ ಸಿ.ಎಂ

Pinterest LinkedIn Tumblr

CM_Konkani_Musium_1

ಮಂಗಳೂರು, ಎಪ್ರಿಲ್.21: ಶಕ್ತಿನಗರದ ಮಾಂಡ್ ಸೊಭಾಣ್ ವತಿಯಿಂದ ಸುಮಾರು 30 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ಕೊಂಕಣಿ ಮ್ಯೂಸಿಯಂಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಶಂಕು ಸ್ಥಾಪನೆ ನೆರವೇರಿಸಿದರು.

ಸ್ವಾಗತಿಸಿ, ಪ್ರಸ್ತಾವನೆಗೈದ ಮಾಂಡ್ ಸೊಭಾಣ್ ಗುರಿಕಾರ ಎರಿಕ್ ಒಝೇರಿಯೊ ಅವರು, ಗುಜರಾತ್‌ನಿಂದ ತ್ರಿವೇಂಡ್ರಮ್‌ವರೆಗಿನ ಕೊಂಕಣಿ ಸಮುದಾಯಗಳ ವಿಭಿನ್ನ ಜಾತಿ, ಸಮುದಾಯ, ಉಪ ಭಾಷೆಗಳು, ಸಾಂಸ್ಕೃತಿಕ ವೈವಿಧ್ಯವನ್ನು ಪ್ರತಿಬಿಂಬಿಸುವ ಹಾಗೂ ಸಂಶೋಧನಾ ಕೇಂದ್ರವಾಗಿ ಈ ಮ್ಯೂಸಿಯಂ ರಚನೆಯಾಗಲಿದೆ ಎಂದು ತಿಳಿಸಿದರು.

ಶಕ್ತಿನಗರದ 1 ಎಕರೆ ಜಾಗದಲ್ಲಿ ಮ್ಯೂಸಿಯಂ ನಿರ್ಮಾಣವಾಗಲಿದ್ದು, ಇದಕ್ಕಾಗಿ ರಾಜ್ಯ ಸರಕಾರವು 2016-17 ನೇ ಬಜೆಟ್‌ನಲ್ಲಿ 2.5 ಕೋಟಿ ರೂ.ಗಳನ್ನು ಮಂಜೂರು ಮಾಡಿದೆ. ಮುಂದಿನ ಬಜೆಟ್‌ನಲ್ಲಿ ಮತ್ತೆ 2.5 ಕೋಟಿ ರೂ. ನೀಡುವುದಾಗಿ ಭರವಸೆ ನೀಡಿದೆ. ಕೇಂದ್ರ ಸರಕಾರದಲ್ಲಿಯೂ ಮ್ಯೂಸಿಯಂ ರಚನೆಗೆ ಅನುದಾನ ನೀಡಲು ಅವಕಾಶವಿದ್ದು, ನೆರವು ಕೋರಲಾಗುವುದು. ಗೋವಾ, ತಮಿಳುನಾಡು ಸೇರಿದಂತೆ ಕೊಂಕಣಿ ಸಮುದಾಯ ಹೆಚ್ಚಾಗಿರುವ ಇತರ ರಾಜ್ಯಗಳಿಂದಲೂ ಅನುದಾನಕ್ಕೆ ಪ್ರಯತ್ನಿಸಲಾಗುವುದು. ಅಂತಾರಾಷ್ಟ್ರೀಯ ಹಾಗೂ ಪ್ರವಾಸೋದ್ಯಮ ತಾಣವಾಗಿ ಈ ಮ್ಯೂಸಿಯಂನ್ನು ಪರಿವರ್ತಿಸುವ ಉದ್ದೇಶ ಹೊಂದಿರುವುದರಿಂದ ಯುನೆಸ್ಕೋದ ನೆರವನ್ನು ಕೂಡಾ ಕೋರಲಾಗುವುದು ಎಂದು ಎರಿಕ್ ಒಝೇರಿಯೊ ವಿವರ ನೀಡಿದರು.

CM_Konkani_Musium_2 CM_Konkani_Musium_3 CM_Konkani_Musium_4 CM_Konkani_Musium_5 CM_Konkani_Musium_6 CM_Konkani_Musium_7 CM_Konkani_Musium_8 CM_Konkani_Musium_9 CM_Konkani_Musium_10 CM_Konkani_Musium_11 CM_Konkani_Musium_12 CM_Konkani_Musium_13

ಶಿಲ್ಲಾಂಗ್‌ನಲ್ಲಿರುವ ಈಶಾನ್ಯ ರಾಜ್ಯಗಳ ಬೃಹತ್ ರಾಷ್ಟ್ರೀಯ ಮ್ಯೂಸಿಯಂನ ಪ್ರೇರಣೆಯ ಮೇರೆಗೆ ರಚಿಸಲಾಗುತ್ತಿರುವ ಈ ಮ್ಯೂಸಿಯಂನಲ್ಲಿ ಡಿಜಿಟಲ್ ಡಾಕ್ಯುಮೆಂಟೇಶನ್, ಹಬ್ಬ, ಆಚಾರ ವಿಚಾರ ಸೇರಿದಂತೆ ಕೊಂಕಣಿ ಭಾಷಿಗರ ಸಮಸ್ತ ಜೀವನ ಶೈಲಿಯನ್ನು ಮ್ಯೂಸಿಯಂನಲ್ಲಿ ಅನಾವರಣಗೊಳಿಸಲಾಗುವುದು. ಸುಮಾರು 3 ವರ್ಷಗಳ ಅವಧಿಯೊಳಗೆ ಪೂರ್ಣಗೊಳಿಸುವ ನಿರೀಕ್ಷೆ ಇದೆ. ಮ್ಯೂಸಿಯಂಗಾಗಿ ಈಗಾಗಲೇ ಕೊಂಕಣಿ ಸಮುದಾಯ 37 ಮಂದಿ ದಾನಿಗಳು 4 ಕೋಟಿ ರೂ.ಗಳ ಸಹಾಯವನ್ನು ನೀಡಿದ್ದಾರೆ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಸಂಸದ ಆಸ್ಕರ್ ಫೆರ್ನಾಂಡಿಸ್, ಸಚಿವರಾದ ಬಿ.ರಮಾನಾಥ್ ರೈ, ಯು.ಟಿ.ಖಾದರ್, ಅಭಯಚಂದ್ರ ಜೈನ್, ಶಾಸಕರಾದ ಜೆ.ಆರ್.ಲೋಬೋ, ಐವನ್ ಡಿಸೋಜ ಮುಂತಾದವರು ಅತಿಥಿಗಳಾಗಿ ಪಾಲ್ಗೊಂಡಿದ್ದರು.

ಅಧ್ಯಕ್ಷ ಲುವಿ ಜೆ.ಪಿಂಟೋ, ಸಂಘಟಕ ಸ್ಟ್ಯಾನಿ ಆಲ್ವಾರಿಸ್, ಕಾರ್ಯದರ್ಶಿ ಕಿಶೋರ್ ಫೆರ್ನಾಂಡಿಸ್, ಕೋಶಾಧಿಕಾರಿ ಕ್ಲಾರಾ ಡಿಕುನ್ಹಾ ಉಪಸ್ಥಿತರಿದ್ದರು.

Updated News:

ಕರ್ನಾಟಕ ನಿರ್ಮಾಣದಲ್ಲಿ ಕೊಂಕಣಿ ಭಾಷಿಗರ ಕೊಡುಗೆ ಅನನ್ಯವಾಗಿದ್ದು, ರಾಜ್ಯದಲ್ಲಿ ಕೊಂಕಣಿಗರು ಕನ್ನಡಿಗರ ಜತೆ ಬೆರೆತು ಹೋಗಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅಭಿಪ್ರಾಯಿಸಿದರು. ಶಕ್ತಿನಗರದ ಕಲಾಂಗಣ್‌ನಲ್ಲಿ ಮಾಂಡ್ ಸೊಭಾಣ್ ಸಂಸ್ಥೆ ನೇತೃತ್ವದಲ್ಲಿ ನಿರ್ಮಾಣವಾಗಲಿರುವ 30 ಕೋಟಿ ರೂ. ವೆಚ್ಚದ ಕೊಂಕಣಿ ಮ್ಯೂಸಿಯಂ (ವಸ್ತು ಸಂಗ್ರಹಾಲಯ)ಗೆ ಶಂಕುಸ್ಥಾಪನಾ ಫಲಕ ಅನಾವರಣಗೊಳಿಸಿ ಮಾತನಾಡಿದರು.

ಮ್ಯೂಸಿಯಂಗಾಗಿ ಈಗಾಗಲೇ 2.5 ಕೋಟಿ ರೂ.ಗಳನ್ನು ನೀಡಿದ್ದು, ಮತ್ತೆ ಮುಂದಿನ ವರ್ಷ ಹಣ ನೀಡುವ ಬಗ್ಗೆ ಪರಿಗಣಿಸಲಾಗುವುದು. ಈಗಾಗಲೇ ಪ್ರೊಟೆಸ್ಟೆಂಟ್ ಕ್ಸಿಶ್ಚಿಯನ್ನರ ಸಂಸ್ಥೆಗೆ ಕಿಟೆಲ್‌ರವರ ಗ್ರಂಥಗಳ ಸಂಗ್ರಹ, ಕನ್ನಡ ಸಂಶೋಧನೆಗಾಗಿ 2.5 ಕೋಟಿ ರೂ. ನೀಡಲಾಗಿದೆ. ಕೊಂಕಣಿ ಭಾಷೆ ಸಹೋದರ ಭಾಷೆಯಾಗಿರುವುದರಿಂದ ಅದರ ಅಭಿವೃದ್ದಿಗೆ ಅಗತ್ಯವಾದ ಎಲ್ಲಾ ನೆರವು, ಸಹಕಾರವನ್ನು ಸರಕಾರ ನೀಡಲಿದೆ ಎಂದು ಹೇಳಿದರು.

ಕರಾವಳಿ ಪ್ರದೇಶದ ಕೊಂಕಣಿಗರು ರಾಜ್ಯದ ಅಭಿವೃದ್ದಿಯಲ್ಲರೂ ಕೆಲಸ ನಿರ್ವಹಿಸುತ್ತಿದ್ದು, ಕೊಂಕಣಿ ಸಮುದಾಯದ ಸಂಸ್ಕೃತಿಯನ್ನು ಕಾಪಾಡುವಲ್ಲಿ ಮಾಂಡ್ ಸೊಭಾಣ್ ಉತ್ತಮ ಕಾರ್ಯ ನಿರ್ವಹಿಸುತ್ತಿದೆ. ನೂತನವಾಗಿ ನಿರ್ಮಾಣವಾಗಲಿರುವ ಮ್ಯೂಸಿಯಂನಲ್ಲಿ ಕೊಂಕಣಿಗರ ವೈವಿದ್ಯತೆಯನ್ನು ಸಂಗ್ರಹಿಸುವುದು, ಅದನ್ನು ಜನರಿಗೆ ಮುಟ್ಟಿಸುವುದು ಹಾಗೂ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಆಗಲಿ ಎಂದು ಶುಭ ಹಾರೈಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಕೊಂಕಣಿ ಮ್ಯೂಸಿಯಂ ನಿರ್ದೇಶಕರ ಹಾಗೂ ಸದಸ್ಯರ ಹೆಸರಿನ ಫಲಕ ಅನಾವರಣಗೊಳಿಸಿದರು. ಈ ಸಂದರ್ಭ ಕಂಒಕಣಿ ಮ್ಯೂಸಿಯಂ ದಾನಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಮಾಂಡ್ ಸೊಭಾಣ್ ಅಧ್ಯಕ್ಷ ಲುವಿ ಪಿಂಟೋ ಸ್ವಾಗತಿಸಿದರು. ದಾನಿ ಹಾಗೂ ಸಮುದಾಯದ ಮುಖಂಡರಾದ ರೊನಾಲ್ಡ್ ಕುಲಾಸೊ ಪ್ರಾಸ್ತಾವಿಕವಾಗಿ ಮಾತನಾಡಿದರು.

ವೇದಿಕೆಯಲ್ಲಿ ಕೇಂದ್ರದ ಮಾಜಿ ಸಚಿವ ಆಸ್ಕರ್ ಫೆರ್ನಾಂಡಿಸ್, ಪತ್ನಿ ಬ್ಲೋಸಂ ಫೆರ್ನಾಂಡಿಸ್, ಸಚಿವರಾದ ಅಭಯಚಂದ್ರ ಜೈನ್, ಯು.ಟಿ.ಖಾದರ್, ಶಾಸಕರಾದ ಜೆ.ಆರ್. ಲೋಬೋ, ಐವನ್ ಡಿಸೋಜಾ, ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ರಾಯ್ ಕ್ಯಾಸ್ತಲಿನೊ, ಶಾಸಕಿ ಶಕುಂತಳಾ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಮಾಂಡ್ ಸೊಭಾಣ್ ಗುರಿಕಾರ ಎರಿಕ್ ಒಝೇರಿಯೊ ವಂದಿಸಿದರು. ವಿಕ್ಟರ್ ಮಥಾಯಸ್ ಕಾರ್ಯಕ್ರಮ ನಿರೂಪಿಸಿದರು

ಪಿಯುಸಿ, ಸ್ನಾತಕೋತ್ತರ ಪದವಿಯಲ್ಲಿ ಕೊಂಕಣಿ ಕಲಿಕೆಗೆ ಕ್ರಮ :

ಈಗಾಗಲೇ ಕೊಂಕಣಿ ಭಾಷೆಯಲ್ಲಿ 10ನೆ ತರಗತಿವರೆಗೆ ಹಾಗೂ ಪದವಿ ತರಗತಿಗಳಲ್ಲಿ ಐಚ್ಛಿಕ ಭಾಷೆಯಾಗಿ ಕಲಿಸಲಾಗುತ್ತಿದೆ. ಪಿಯುಸಿ ಹಾಗೂ ಸ್ನಾತಕೋತ್ತರ ಪದವಿಯಲ್ಲೂ ಮುಂದಿನ ವರ್ಷದಿಂದ ಕೊಂಕಣಿ ಭಾಷೆಯನ್ನು ಅಳವಡಿಸುವ ಕುರಿತು ಪರಿಶೀಲಿಸಿ ತೀರ್ಮಾನಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ತಿಳಿಸಿದರು.

Write A Comment