ಕರ್ನಾಟಕ

ಪೊಲೀಸರ ಜತೆ ಪರಮೇಶ್ವರ್ ಚರ್ಚೆ :ಎಸಿಬಿ ವಿವಾದ

Pinterest LinkedIn Tumblr

parameshಬೆಂಗಳೂರು, ಏ. ೨೧- ದುಬಾರಿ ವಾಚ್ ಪ್ರಕರಣ ಸೇರಿದಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ವಿರುದ್ಧ ಭ್ರಷ್ಟಾಚಾರ ನಿಗ್ರಹದಳ (ಎಸಿಬಿ)ಕ್ಕೆ ಬಂದಿರುವ ದೂರುಗಳ ಹಿನ್ನೆಲೆಯಲ್ಲಿ ಮುಂದೆ ಕೈಗೊಳ್ಳಬೇಕಾದ ಕ್ರಮ, ಅದರ ಸಾಧಕ ಬಾಧಕಗಳ ಬಗ್ಗೆ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರಿಂದು ಉನ್ನತ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
ವಿಕಾಸಸೌಧದ ತಮ್ಮ ಕಛೇರಿಯಲ್ಲಿ ನಡೆದ ಈ ಸಭೆಯಲ್ಲಿ ಮುಖ್ಯಮಂತ್ರಿ ವಿರುದ್ಧ ದಾಖಲಾಗಿರುವ ದೂರುಗಳ ಬಗ್ಗೆ ತನಿಖೆ ಕೈಗೊಂಡಲ್ಲಿ ಆಗಬಹುದಾದ ಸಾಧಕ ಬಾಧಕಗಳ ಬಗ್ಗೆ ಚರ್ಚೆ ನಡೆಸಿದರು.
ಕಾರ್ಮಿಕ ಭವಿಷ್ಯ ನಿಧಿ ಹಣವನ್ನು ಹಿಂತೆಗೆದುಕೊಳ್ಳುವ ಸಂಬಂಧ ಕೇಂದ್ರ ಸರ್ಕಾರ ಹೇರಿದ್ದ ನಿರ್ಬಂಧಗಳನ್ನು ವಿರೋಧಿಸಿ ಗಾರ್ಮೆಂಟ್ಸ್ ಕಾರ್ಮಿಕರು ನಗರದಲ್ಲಿ ನಡೆಸಿದ ಪ್ರತಿಭಟನೆ ಸಂದರ್ಭದಲ್ಲಿ ಆದಂತಹ ಭದ್ರತಾ ವೈಫಲ್ಯಗಳಿಗೆ ಕಾರಣಗಳೇನು ಎಂಬ ಬಗ್ಗೆಯೂ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
ಪ್ರತಿಭಟನೆ ನಿರತ ಮಹಿಳಾ ಕಾರ್ಮಿಕರ ಮೇಲೆ ಪೊಲೀಸರು ಲಾಠಿ ಪ್ರಹಾರ, ಭದ್ರತಾ ವೈಫಲ್ಯಗಳ ಬಗ್ಗೆ ಹೈಕೋರ್ಟ್ ಸರ್ಕಾರಕ್ಕೆ ಛೀಮಾರಿ ಹಾಕಿರುವ ಹಿನ್ನೆಲೆಯಲ್ಲಿ ಡಾ. ಜಿ. ಪರಮೇಶ್ವರ್ ಸರ್ಕಾರದ ಕ್ರಮಗಳನ್ನು ಹೇಗೆ ಸಮರ್ಥನೆ ಮಾಡಿಕೊಳ್ಳಬೇಕು ಎಂಬ ಬಗ್ಗೆ ಚರ್ಚೆ ನಡೆಸಿದರು.
ಇನ್ನು ಮುಂದೆ ಇಂತಹ ವೈಫಲ್ಯಗಳು ಮರು ಕಳುಹಿಸದಂತೆ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಅವರು ತಾಕೀತು ಮಾಡಿದರು.
ಈ ಸಂದರ್ಭದಲ್ಲಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಲತಾಕೃಷ್ಣರಾವ್, ಗೃಹ ಸಚಿವರ ಸಲಹೆಗಾರ ಕೆಂಪಯ್ಯ, ಪೊಲೀಸ್ ಮಹಾನಿರ್ದೇಶಕ ಓಂಪ್ರಕಾಶ್, ಬೆಂಗಳೂರು ನಗರ ಪೊಲೀಸ್ ಆಯುಕ್ತ ಮೇಘರಿಕ್ ಮತ್ತಿತರರು ಪಾಲ್ಗೊಂಡಿದ್ದರು.

Write A Comment