ಕರ್ನಾಟಕ

ಖರ್ಗೆ ನಾಯಕತ್ವಕ್ಕೆ ವಿಶ್ವನಾಥ್ ಪರಾಕು

Pinterest LinkedIn Tumblr

Khargeಬೆಂಗಳೂರು, ಏ. ೨೧- ರಾಜ್ಯದಲ್ಲಿ ದಲಿತ ಮುಖ್ಯಮಂತ್ರಿ ಆಗಲೇಬೇಕು. ಇದರಲ್ಲಿ ಎರಡು ಮಾತಿಲ್ಲ ಎಂದು ಮಾಜಿ ಸಚಿವ, ಕಾಂಗ್ರೆಸ್‌ನ ಹಿರಿಯ ನಾಯಕ ಹೆಚ್. ವಿಶ್ವನಾಥ್ ಹೇಳಿದರು.
ಕಾಂಗ್ರೆಸ್ ಪಕ್ಷಕ್ಕೆ ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರೆ ವೋಟ್ ಬ್ಯಾಂಕ್. ಹೀಗಿರುವಾಗ ಹಿರಿಯ ನಾಯಕರು ಒಟ್ಟಾಗಿ ಕುಳಿತು ಚರ್ಚೆ ಮಾಡಿ ದಲಿತರನ್ನು ಮುಖ್ಯಮಂತ್ರಿ ಮಾಡುವ ಬಗ್ಗೆ ತೀರ್ಮಾನ ಕೈಗೊಳ್ಳಬೇಕು ಎಂದು ಅವರು ಹೇಳಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ ಶಾಸಕರ ಭವನದಲ್ಲಿಂದು ಆಯೋಜಿಸಿದ್ದ ಮಾಜಿ ಸಚಿವ ಬಿ. ಬಸವಲಿಂಗಪ್ಪನವರ ಜನ್ಮದಿನದ ಅಂಗವಾಗಿ “ದಲಿತ ರಾಜಕಾರಣ ದಲಿತ ಹೋರಾಟದ ಮುಂದಿನ ಹೆಜ್ಜೆಗಳು” ಒಂದು ದುಂಡುಮೇಜಿನ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಹೆಚ್. ವಿಶ್ವನಾಥ್, ಸಿದ್ದರಾಮಯ್ಯ ಸರ್ಕಾರ ಪರಿಶಿಷ್ಟ ಜಾತಿ ವರ್ಗದವರಿಗೆ ಒಳ್ಳೆಯ ಕೆಲಸ ಮಾಡಿಲ್ಲ ಎಂದು ನಾನು ಹೇಳುತ್ತಿಲ್ಲ. ಆದರೆ ದಲಿತ ಮುಖ್ಯಮಂತ್ರಿ ಆಗಬೇಕು ಎಂಬುದು ಎಲ್ಲರ ಆಶಯವಾಗಿದೆ ಎಂದರು.
ಈ ಹಿಂದೆ ದಲಿತರಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಸೂಕ್ತವಾದವರು ಇರಲಿಲ್ಲ ಎಂಬ ಮಾತುಗಳು ಇದ್ದವು. ಈಗ ಮಲ್ಲಿಕಾರ್ಜುನ ಖರ್ಗೆಯಂತಹ ಧೀಮಂತ ನಾಯಕರು, ಡಾ. ಜಿ. ಪರಮೇಶ್ವರ್‌ ರವರಂತಹವರು ಇದ್ದಾರೆ. ಅದರಲ್ಲೂ ಮಲ್ಲಿಕಾರ್ಜುನ ಖರ್ಗೆಯವರು 9 ಬಾರಿ ಶಾಸಕರಾಗಿ, ಹಲವು ಬಾರಿ ಸಚಿವರಾಗಿ ವಿವಿಧ ಇಲಾಖೆಗಳನ್ನು ಸಮರ್ಥವಾಗಿ ನಿಭಾಯಿಸಿದವರು. ಅವರಿಗೆ ಮುಖ್ಯಮಂತ್ರಿಯಾಗುವ ಎಲ್ಲ ಅರ್ಹತೆ, ಶಕ್ತಿ ಇದೆ ಎಂದು ಹೇಳಿದರು.
ಕಾಂಗ್ರೆಸ್ ಸರ್ಕಾರ ಪರಿಶಿಷ್ಟ ಜಾತಿ, ವರ್ಗದವರಿಗೆ ರೂಪಿಸಿರುವ ವಿಶೇಷ ಯೋಜನೆಯ ಅನುದಾನ ಹಂಚಿಕೆಯಲ್ಲಿ ರಸ್ತೆ, ಕಾಮಗಾರಿ, ಮತ್ತಿತರ ಕಾಮಗಾರಿಗಳಿಗೆ ಆದ್ಯತೆ ನೀಡಲಾಗಿದೆ. ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡಬೇಕು. ಪ್ರತಿ ಜಿಲ್ಲೆಯಲ್ಲೂ ಪರಿಶಿಷ್ಟ ಜಾತಿ, ವರ್ಗದವರಿಗೆ ಸುಮಾರು 100 ಎಕರೆ ಪ್ರದೇಶದಲ್ಲಿ ಒಂದು ಹೈಟೆಕ್ ಹಾಸ್ಟೆಲ್ ನಿರ್ಮಾಣ ಮಾಡಬೇಕು. ಇದರತ್ತ ಸರ್ಕಾರ ಗಮನಹರಿಸಬೇಕು ಎಂದರು.
ದಿಗ್ವಿಜಯ ಸಿಂಗ್ ವಿಫಲ
ರಾಜ್ಯ ಕಾಂಗ್ರೆಸ್‌ನ ಉಸ್ತುವಾರಿ ಹೊತ್ತಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯಸಿಂಗ್ ಅವರು ಹೈಕಮಾಂಡ್ ತಮಗೆ ವಹಿಸಿದ್ದ ಜವಾಬ್ದಾರಿಯನ್ನು ನಿಭಾಯಿಸಲು ವಿಫಲರಾಗಿದ್ದಾರೆ. ಇದನ್ನು ನಾವು ಪಕ್ಷದ ವರಿಷ್ಠರ ಗಮನಕ್ಕೆ ತಂದಿದ್ದೇವೆ. ಯಾರ ವಿರುದ್ಧವೂ ದೂರಾಗಲೀ, ಆರೋಪವಾಗಲೀ ಮಾಡಿಲ್ಲ ಎಂದರು.
ದಿಗ್ವಿಜಯಸಿಂಗ್‌ರವರು ಮಧ್ಯ ಪ್ರದೇಶದ ಮಹಾರಾಜರು. ನಾನು ಸಾಮಾನ್ಯ ಮನುಷ್ಯ. ಹಾಗಾಗಿ ಅವರು ನನ್ನ ಬಗ್ಗೆ ಮಾಡಿರುವ ಟೀಕೆಗಳ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ ಎಂದರು.
ಶಿಕ್ಷಣ ಆದ್ಯತೆಯಾಗಬೇಕು
ಇದಕ್ಕೂ ಮೊದಲು ದುಂಡುಮೇಜಿನ ಸಭೆಯಲ್ಲಿ ಮಾತನಾಡಿದ ಮಾಜಿ ಸಚಿವ ಹೆಚ್. ವಿಶ್ವನಾಥ್, ದಲಿತರು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಅಕ್ಷರಸ್ಥರಾದರೆ ಎಲ್ಲ ಶಕ್ತಿಗಳು ತಾನೇ ತಾನಾಗಿ ಸಿಗುತ್ತವೆ. ಅಸ್ಪೃಶ್ಯತೆ ಮತ್ತಿತರ ವಿಚಾರಗಳನ್ನು ಮೀರಿ ದಲಿತರು ಬೆಳೆದಿದ್ದಾರೆ ಎಂದರು.
ದಲಿತ ಸಂಘರ್ಷ ಸಮಿತಿಯ ಹೋರಾಟ ಬದಲಾಗಬೇಕು. ಶಿಕ್ಷಣ ಆದ್ಯತೆಯ ಕೂಗು ಮೊಳಗಬೇಕಾಗಿದೆ. ಒಡೆದು ಹೋಗಿರುವ ದಲಿತ ಸಂಘರ್ಷ ಸಮಿತಿ ಮತ್ತೆ ಒಟ್ಟಾಗಿ ಹಿಂದಿನ ದಲಿತ ಸಂಘರ್ಷ ಸಮಿತಿಯಂತೆ ಶಕ್ತಿಯುತವಾಗಬೇಕು ಎಂದರು.
ಪಿಪಿಸಿಎಲ್ ಕಾಯ್ದೆ ಅನುಷ್ಠಾನವಾಗಲಿ
ದಲಿತರ ಜಮೀನು ಮಾರುವುದನ್ನು ನಿರ್ಬಂಧಿಸಲು ಪಿಪಿಸಿಎಲ್ ಕಾಯ್ದೆಯನ್ನು ಜಾರಿ ಮಾಡಲಾಗಿತ್ತು. ಆದರೆ ಬೆಂಗಳೂರಿನ ಸುತ್ತಮುತ್ತ ಸುಮಾರು 5-6 ಸಾವಿರ ಎಕರೆ ದಲಿತರ ಜಮೀನು ಬಲಾಢ್ಯರ ಪಾಲಾಗಿದೆ. ದಲಿತರ ಜಮೀನನ್ನು ವಾಪಸ್ ಕೊಡಿಸಿದರೆ 6 ಸಾವಿರ ದಲಿತರ ಕುಟುಂಬಗಳು ಕುಬೇರರಾಗುತ್ತಾರೆ. ಆದರೆ ಕಂದಾಯ ಮಂತ್ರಿಗಳು ಈ ಬಗ್ಗೆ ಮೊಗಂ ಆಗಿದ್ದಾರೆ. ದಲಿತ ಮುಖಂಡರು ಖಾಜಿ ನ್ಯಾಯ ನಡೆಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Write A Comment