ಕರ್ನಾಟಕ

ದಕ್ಷಿಣ ಭಾರತದಲ್ಲೇ ಮೊದಲ ಬಾರಿಗೆ ಅಗ್ನಿ ಶಾಮಕ ದಳದಲ್ಲಿ ವಿಪತ್ತು ಪಡೆ ರಚನೆ

Pinterest LinkedIn Tumblr

agniದಕ್ಷಿಣ ಭಾರತದಲ್ಲೇ ಇದೇ ಮೊದಲ ಬಾರಿಗೆ ರಾಜ್ಯ ಸರ್ಕಾರದಿಂದ ಅಗ್ನಿ ಶಾಮಕ ದಳದಲ್ಲಿ ವಿಪತ್ತು ಪಡೆ ರಚನೆ ಮಾಡಲಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಇಂದಿಲ್ಲಿ ತಿಳಿಸಿದರು. ಅಗ್ನಿ ಶಾಮಕ ಹಾಗೂ ಗೃಹ ರಕ್ಷಕ ದಳದ ಸಿಬ್ಬಂದಿಗೆ ಮುಖ್ಯಮಂತ್ರಿಗಳ ಚಿನ್ನ ಹಾಗೂ ಬೆಳ್ಳಿ ಪದಕ ವಿತರಣೆ ಸಮಾರಂಭದಲ್ಲಿ ಅವರು ಮಾತನಾಡಿದರು. ರಾಜ್ಯ ಸರ್ಕಾರ ವಿಪತ್ತು ಪಡೆಯ ಎ ಕಂಪೆನಿಯ 3 ಘಟಕಗಳನ್ನು ರಾಜ್ಯದಲ್ಲಿ ಸ್ಥಾಪಿಸಿದೆ. ಈ ಘಟಕಗಳಿಗೆ ಸಿಬ್ಬಂದಿ, ಅನುದಾನ ಹಾಗೂ ಜಮೀನು ಒದಗಿಸಲಾಗಿದೆ.

ನಗರ ಸೇರಿದಂತೆ ಇನ್ನಿತೆರೆಡೆ ಸಂಭವಿಸುವ ಅಗ್ನಿ ಅನಾಹುತದ ವೇಳೆ ಆಗುವ ಹೆಚ್ಚಿನ ತೊಂದರೆ ತಪ್ಪಿಸಲು ಪರಿಹಾರ ಕಂಡುಕೊಳ್ಳಲು ಅತ್ಯಾಧುನಿಕ ಸಲಕರಣೆಯೊಂದಿಗೆ ಅಗ್ನಿಶಾಮಕ ಸಿಬ್ಬಂದಿ ಸಿದ್ಧರಿರುತ್ತಾರೆ.
ನಗರದ ಬಹುಮಹಡಿ ಕಟ್ಟಡಗಳಲ್ಲಿ ಬೆಂಕಿ ಅವಘಡದ ವೇಳೆ ಪರಿಹಾರ ಕಾರ್ಯ ಕೈಗೊಳ್ಳಲು 54 ಮೀಟರ್ ಉದ್ದದ ಏರಿಯಲ್ ಏಣಿ, ಅತ್ಯಾಧುನಿಕ ಅಗ್ನಿ ನಂದಿಸುವ ಉಪಕರಣ ಅಳವಡಿಸಿಕೊಂಡು ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸಲು ಸಿಬ್ಬಂದಿ ಇದ್ದಾರೆ ಎಂದು ಹೇಳಿದರು.

ರಾಜ್ಯದಲ್ಲಿ 197 ಹೊಸ ಠಾಣೆ ಸ್ಥಾಪಿಸಲಾಗಿದ್ದು, 16 ಹೊಸ ಠಾಣೆಗೆ ಮಂಜೂರಾತಿ ನೀಡಲಾಗಿದೆ. 26 ಅಗ್ನಿ ಶಾಮಕ ಠಾಣೆಗಳಿಗೆ ಕಟ್ಟಡ ನಿರ್ಮಾಣ. 132 ಸಿಬ್ಬಂದಿಗೆ ವಸತಿ ಸಂಕೀರ್ಣ ನಿರ್ಮಿಸಲಾಗುತ್ತಿದೆ.
ಪ್ರತಿ ಜಿಲ್ಲೆಯಲ್ಲಿ ಅಗ್ನಿ ಶಾಮಕ ದಳ ರಚನೆಗೆ ಕೇಂದ್ರದ ಮಾರ್ಗಸೂಚಿ ಇದೆ. ಆದರೆ, ನಮ್ಮಲ್ಲಿ ಇರುವ ಒಟ್ಟು 176 ತಾಲ್ಲೂಕುಗಳಲ್ಲಿ 166ರಲ್ಲಿ ಅಗ್ನಿ ಶಾಮಕ ದಳ ರಚಿಸಿ ಇತರೆ ರಾಜ್ಯಗಳಿಗೆ ಮಾದರಿಯಾಗಿದ್ದೇವೆ ಎಂದರು.

ಅಗ್ನಿ ಶಾಮಕ ಘಟಕಗಳ ಸಿಬ್ಬಂದಿಗೆ ಕಾಲಕಾಲಕ್ಕೆ ತರಬೇತಿ ನೀಡಿ ಮಾದರಿಯನ್ನಾಗಿ ಮಾಡಲಾಗಿದೆ. ಕಳೆದ ವರ್ಷ 18,308 ಅಗ್ನಿಶಾಮಕ ಠಾಣೆಗಳಿಂದ ಒಟ್ಟು 1720 ಕರೆ ಸ್ವೀಕರಿಸಿ ಪರಿಹಾರ ಕಾರ್ಯಕ್ಕೆ ಮುಂದಡಿ ಇಡಲಾಗಿದೆ. ಇದರಲ್ಲಿ ರಾಜ್ಯದಲ್ಲಿ ಅಗ್ನಿ ದುರಂತದಲ್ಲಿ 830 ಕೋಟಿ ನಷ್ಟ ಉಂಟಾಗಿದ್ದು, 608 ಕೋಟಿ ಆಸ್ತಿ ರಕ್ಷಣೆ ಮಾಡಲಾಗಿದೆ. ಇದರೊಂದಿಗೆ 298 ಮಂದಿ ಪ್ರಾಣ ರಕ್ಷಣೆ ಮಾಡಿ ಅಗ್ನಿ ಶಾಮಕ ದಳದ ಕೆಲಸವನ್ನು ಸುಸೂತ್ರವಾಗಿ ನಿರ್ವಹಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಡಿಜಿಪಿ ಓಂಪ್ರಕಾಶ್, ಹಿರಿಯ ಪೊಲೀಸ್ ಅಧಿಕಾರಿಗಳಾದ ಕಿಶೋರ್ ಚಂದ್ರ, ಎಂ.ಎನ್.ರೆಡ್ಡಿ, ಮತ್ತಿತರರ ಅಧಿಕಾರಿಗಳು ಉಪಸ್ಥಿತರಿದ್ದರು.

Write A Comment