ಕರ್ನಾಟಕ

40ರೂ. ಕೊಡಿ, 40 ನಿಮಿಷದಲ್ಲಿ ನಾಯಂಡಹಳ್ಳಿಯಿಂದ ಬೈಯಪ್ಪನಹಳ್ಳಿ ತಲುಪಿ ..!

Pinterest LinkedIn Tumblr

metro“ಇದುವರೆಗೂ ನಾಯಂಡಹಳ್ಳಿಯಿಂದ ಬಸ್ ಇಲ್ಲವೇ ಸ್ವಂತ ವಾಹನದ ಮೂಲಕ ಕೇವಲ 18 ಕಿ.ಮೀ. ದೂರದಲ್ಲಿರುವ ಬೈಯಪ್ಪನಹಳ್ಳಿ ತಲುಪಬೇಕಾದರೆ ಮೂರ‍್ನಾಲ್ಕು ತಾಸು ಬೇಕಾಗಿತ್ತು. ಬೈಯಪ್ಪನಹಳ್ಳಿ ತಲುಪಬೇಕಾದ ಪ್ರಯಾಣಿಕರು ನಗರದ ವಾಹನ ದಟ್ಟಣೆ, ಬಿಸಿಲಿನ ಝಳ, ಧೂಳು ಮಯ ರಸ್ತೆಯಿಂದಾಗಿ ಸಾಕಪ್ಪ ಈ ವನವಾಸ ಎಂದು ಗೊಣಗಿಕೊಳ್ಳುತ್ತಿದ್ದದ್ದು ಸಾಮಾನ್ಯವಾಗಿತ್ತು.”
ನಾಯಂಡಹಳ್ಳಿಯಿಂದ ಬೈಯಪ್ಪನಹಳ್ಳಿ ತಲುಪಲು 40ನಿಮಿಷ ಸಾಕು! ನಾಯಂಡಹಳ್ಳಿ ಯಿಂದ ಬೈಯಪ್ಪನಹಳ್ಳಿಗೆ ತಲುಪಲು ಕೇವಲ 40 ನಿಮಿಷ ಸಾಕು. ಇದಕ್ಕೆ ನೀವು 40ರೂ.ಗಳ ಟಿಕೆಟ್ ಪಡೆದರೆ ಸಾಕು…!

ಅರೇ…. ಇದೇನು ಮಾಯಾ ಜಾಲವೇ…? ನಗರದ ವಾಹನ ದಟ್ಟಣೆ ನಡುವೆ ಕೇವಲ 40 ನಿಮಿಷದಲ್ಲಿ 18 ಕಿ.ಮೀ. ದೂರದ ಬೈಯಪ್ಪನಹಳ್ಳಿ ತಲುಪಲು ಸಾಧ್ಯವೇ ಎಂದು ಪ್ರಯಾಣಿಕರು ಆಶ್ಚರ್ಯ ಪಡಬಹುದು.
ಕೇವಲ 15 ದಿನಗಳು ಕಳೆದರೆ ಸಾಕು. ದಕ್ಷಿಣ ಭಾರತದ ಮೊಟ್ಟ ಮೊದಲ ಮೆಟ್ರೋ ಸುರಂಗ ಮಾರ್ಗ ತಿಂಗಳಾಂತ್ಯಕ್ಕೆ ಸಂಚಾರಕ್ಕೆ ಮುಕ್ತಗೊಳ್ಳುತ್ತಿದ್ದು, ಪ್ರಯಾಣಿಕರ ಈ ಕನಸು ಸಾಕಾರಗೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ.

ಹೌದು. ನಾಯಂಡಹಳ್ಳಿಯಿಂದ ಬೈಯಪ್ಪನಹಳ್ಳಿವರೆಗಿನ ಮೆಟ್ರೋ ಸಂಚಾರಕ್ಕೆ ಇದ್ದ ಎಲ್ಲ ಅಡೆತಡೆಗಳು ನಿವಾರಣೆಗೊಂಡಿದ್ದು, ತಿಂಗಳಾಂತ್ಯಕ್ಕೆ ಸುರಂಗ ಮಾರ್ಗದ ಮೂಲಕ ಮೆಟ್ರೋ ರೈಲು ಸಂಚರಿಸಲು ಗ್ರೀನ್‌ಸಿಗ್ನಲ್ ದೊರೆತಿದೆ. 18 ಕಿ.ಮೀ. ದೂರದ ಬೈಯಪ್ಪನಹಳ್ಳಿಗೆ ನಾಯಂಡಹಳ್ಳಿಯಿಂದ ಸುರಂಗ ಮಾರ್ಗದಲ್ಲಿ ಮೆಟ್ರೋ ರೈಲು ಸಂಚಾರಕ್ಕೆ ಎಲ್ಲ ಪೂರ್ವಾನುಮತಿ ದೊರೆತಿದೆ. ಈಗಾಗಲೇ ರೈಲ್ವೆ ಸುರಕ್ಷತಾ ಆಯುಕ್ತರು ಸುರಂಗ ಮಾರ್ಗದ ಮೆಟ್ರೋ ಸಂಚಾರಕ್ಕೆ ಯಸ್ ಎಂದಿದ್ದಾರೆ. ಇದುವರೆಗೂ ನಾಯಂಡಹಳ್ಳಿಯಿಂದ ಬಸ್ ಇಲ್ಲವೇ ಸ್ವಂತ ವಾಹನದ ಮೂಲಕ ಕೇವಲ 18 ಕಿ.ಮೀ. ದೂರದಲ್ಲಿರುವ ಬೈಯಪ್ಪನಹಳ್ಳಿ ತಲುಪಬೇಕಾದರೆ ಮೂರ‍್ನಾಲ್ಕು ತಾಸು ಬೇಕಾಗಿತ್ತು.

ಬೈಯಪ್ಪನಹಳ್ಳಿ ತಲುಪಬೇಕಾದ ಪ್ರಯಾಣಿಕರು ನಗರದ ವಾಹನ ದಟ್ಟಣೆ, ಬಿಸಿಲಿನ ಝಳ, ಧೂಳು ಮಯ ರಸ್ತೆಯಿಂದಾಗಿ ಸಾಕಪ್ಪ ಈ ವನವಾಸ ಎಂದು ಗೊಣಗಿಕೊಳ್ಳುತ್ತಿದ್ದದ್ದು ಸಾಮಾನ್ಯವಾಗಿತ್ತು.
ಹೀಗಾಗಿ ನಾಯಂಡಹಳ್ಳಿಯಿಂದ ಬೈಯಪ್ಪನಹಳ್ಳಿವರೆಗಿನ ಮೆಟ್ರೋ ರೈಲು ಸಂಚಾರ ಆರಂಭವಾದರೆ ಸಾಕು ಎಂದು ಪ್ರಯಾಣಿಕರು ಕನಸು ಕಾಣುತ್ತಿದ್ದರು.
ಬೆಂಗಳೂರು ವಾಹನ ದಟ್ಟಣೆಯಿಂದ ತತ್ತರಿಸಿ ಹೋಗಿ ಮೆಟ್ರೋ ರೈಲು ಸಂಚಾರದ ಕನಸು ಕಾಣುತ್ತಿದ್ದ ಪ್ರಯಾಣಿಕರ ಕನಸು ನನಸಾಗಲು ಬೇಕಿರುವುದು ಕೇವಲ 15 ದಿನಗಳು ಮಾತ್ರ.

ಬೃಹತ್ ನಿಲ್ದಾಣ:

ಮೆಜೆಸ್ಟಿಕ್ ಮಾರ್ಗವಾಗಿ ಬೈಯಪ್ಪನಹಳ್ಳಿ ತಲುಪುವ ರೈಲು ಮಾರ್ಗಕ್ಕೆ ಇದ್ದ ಎಲ್ಲ ಅಡೆತಡೆಗಳು ಪೂರ್ಣಗೊಂಡಿದೆ. ಹೀಗಾಗಿ ಇನ್ನು 15 ದಿನಗಳಲ್ಲಿ ಈ ಮಾರ್ಗದಲ್ಲಿ ರೈಲು ಸಂಚಾರ ಆರಂಭಗೊಳ್ಳಲಿದೆ.
ಮೆಜೆಸ್ಟಿಕ್‌ನಲ್ಲಿ ನಿರ್ಮಿಸಲಾಗು ತ್ತಿರುವ ಮೆಟ್ರೋ ನಿಲ್ದಾಣ 6 ಫುಟ್‌ಬಾಲ್ ಸ್ಟೇಡಿಯಂಗಳ ವಿಸ್ತೀರ್ಣದಷ್ಟು ವಿಸ್ತಾರವಾಗಿದ್ದು, ಈ ನಿಲ್ದಾಣದ ಕಾಮಗಾರಿ ಪೂರ್ಣಗೊಂಡ ನಂತರ ಈ ನಿಲ್ದಾಣ ಬೆಂಗಳೂರಿಗೆ ಮುಕುಟಪ್ರಾಯವಾಗುವ ಸಾಧ್ಯತೆಗಳಿವೆ. ಈಗಾಗಲೇ ಮೆಜೆಸ್ಟಿಕ್-ಸಂಪಿಗೆ ರಸ್ತೆ ನಡುವಿನ ಸುರಂಗ ಕೊರೆಯುವ ಮಾರ್ಗ ಪೂರ್ಣಗೊಂಡಿದ್ದು, ಸಮರೋಪಾದಿಯಲ್ಲಿ ಕಾಮಗಾರಿಗಳು ಆರಂಭಗೊಂಡಿವೆ.

ಅದೇ ರೀತಿ ವಿಕ್ಟೋರಿಯಾ ಆಸ್ಪತ್ರೆಯಿಂದ ಕನಕಪುರ ರಸ್ತೆ ಸಮೀಪದವರೆಗಿನ ಸುರಂಗ ಮಾರ್ಗ ಕಾರ್ಯ ಬಹುತೇಕ ಪೂರ್ಣಗೊಂಡಿದ್ದು, ಸದ್ಯದಲ್ಲೇ ಪ್ರಾಯೋಗಿಕ ರೈಲು ಸಂಚಾರ ಆರಂಭಗೊಳ್ಳುವ ನಿರೀಕ್ಷೆ ಇದೆ.
ಒಟ್ಟಾರೆ ಈ ಎಲ್ಲಾ ಕಾಮಗಾರಿಗಳು ವರ್ಷಾಂತ್ಯದೊಳಗೆ ಪೂರ್ಣಗೊಳ್ಳುವ ಸಾಧ್ಯತೆ ಇದ್ದು, ಬೆಂಗಳೂರಿನ ವಾಹನ ದಟ್ಟಣೆಯಿಂದ ತತ್ತರಿಸಿ ಹೋಗಿರುವ ಪ್ರಯಾಣಿಕರು ನೆಮ್ಮದಿಯ ನಿಟ್ಟುಸಿರು ಬಿಡುವ ದಿನಗಳು ಸಮೀಪಿಸುತ್ತಿದೆ.

ಪೀಕ್ ಅವರ್‌ಗಳಲ್ಲಿ ವಾಹನ ದಟ್ಟಣೆ ತಗ್ಗಲಿದೆ

ನಾಲ್ಕು ದಿಕ್ಕುಗಳಲ್ಲೂ ನಮ್ಮ ಮೆಟ್ರೋ ರೈಲು ಸಂಚಾರ ಆರಂಭಗೊಂಡರೆ ನಗರದ ಬಹುಪಾಲು ವಾಹನಗಳು ರಸ್ತೆಗಿಳಿಯುವುದಿಲ್ಲ. ಹೀಗಾಗಿ ಮೆಟ್ರೋ ಸಂಪೂರ್ಣ ಆರಂಭಗೊಂಡರೆ ವಾಹನ ದಟ್ಟಣೆ ತಂತಾನೆ ತಗ್ಗಲಿದೆ. ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ಸಂಚರಿಸಬೇಕಾದ ಪ್ರಯಾಣಿಕರು ತಮ್ಮ ವಾಹನಗಳನ್ನು ಮೆಟ್ರೋ ನಿಲ್ದಾಣಗಳ ಸಮೀಪ ಪಾರ್ಕ್ ಮಾಡಿ ಹವಾನಿಯಂತ್ರಿತ ಮೆಟ್ರೋ ರೈಲಿನಲ್ಲಿ ತಮಗೆ ಬೇಕಾದ ಸ್ಥಳಗಳಿಗೆ ನಿಗದಿತ ಸಮಯಕ್ಕೆ ತಲುಪಬಹುದಾಗಿದೆ. ಹೀಗಾಗಿ ಪೀಕ್ ಅವರ್‌ಗಳಲ್ಲಿ ರಸ್ತೆಯಲ್ಲಿ ಸಾಲುಗಟ್ಟಿ ನಿಲ್ಲುವ ವಾಹನ ದಟ್ಟಣೆ ತಗ್ಗುವ ಸಾಧ್ಯತೆಗಳಿವೆ.

ಪಾರ್ಕಿಂಗ್ ಅವಶ್ಯಕತೆ

ಆದರೆ, ತಮ್ಮ ಸ್ವಂತ ವಾಹನಗಳಲ್ಲಿ ಮೆಟ್ರೋ ರೈಲು ನಿಲ್ದಾಣಕ್ಕೆ ಬರುವ ಪ್ರಯಾಣಿಕರು ತಮ್ಮ ವಾಹನಗಳನ್ನು ಪಾರ್ಕ್ ಮಾಡಲು ಸೂಕ್ತವಾದ ಪಾರ್ಕಿಂಗ್ ವ್ಯವಸ್ಥೆ ಇಲ್ಲದೇ ಪರದಾಡುತ್ತಿದ್ದಾರೆ. ಸದ್ಯ ಪರಿಸ್ಥಿತಿಯನ್ನು ಹೇಗೋ ನಿಭಾಯಿಸಬಹುದು. ಆದರೆ, ಮೆಟ್ರೋ ರೈಲು ಪೂರ್ಣ ಪ್ರಮಾಣದಲ್ಲಿ ಸಂಚಾರ ಆರಂಭಿಸಿದರೆ ಮೆಟ್ರೋ ನಿಲ್ದಾಣಗಳ ಸಮೀಪ ವಾಹನ ನಿಲುಗಡೆಗೆ ಅವಕಾಶ ಸಿಗದೆ ಪರದಾಡುವ ಸನ್ನಿವೇಶ ಎದುರಾಗಲಿದೆ. ಹೀಗಾಗಿ ಮೆಟ್ರೋ ಅಧಿಕಾರಿಗಳು ಶರವೇಗದಲ್ಲಿ ಮೆಟ್ರೋ ಕಾಮಗಾರಿ ನಡೆಸುತ್ತಿರುವ ಮಾದರಿಯಲ್ಲೇ ನಿಲ್ದಾಣಗಳ ಸಮೀಪ ಬೃಹತ್ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸುವತ್ತಲೂ ಗಮನ ಹರಿಸಬೇಕಾದ ಅವಶ್ಯಕತೆ ಇದೆ.

Write A Comment