ರಾಷ್ಟ್ರೀಯ

‘ಒಕ್ಕಣ್ಣಿನ ರಾಜ’: ಹೇಳಿಕೆ ಸಮರ್ಥಿಸಿಕೊಂಡ ರಘುರಾಂ ರಾಜನ್‌

Pinterest LinkedIn Tumblr

rajanwebಪುಣೆ (ಪಿಟಿಐ): ‘ಕುರುಡರ ರಾಜ್ಯದಲ್ಲಿ ಒಕ್ಕಣ್ಣಿನವನೇ ರಾಜ’ ಎಂದು ಭಾರತದ ಅರ್ಥ ವ್ಯವಸ್ಥೆಯನ್ನು ಬಣ್ಣಿಸಿದ್ದ ರಘುರಾಂ ರಾಜನ್‌, ದೇಶವು ಸುಸ್ಥಿರ ಆರ್ಥಿಕ ಪ್ರಗತಿ ದಾಖಲಿಸಲು ಇನ್ನೂ ಸಾಕಷ್ಟು ದೂರ ಕ್ರಮಿಸಬೇಕಿದೆ, ಈ ವಿಶಾಲ ಅರ್ಥದಲ್ಲಿ ನಾನು ಈ ನಾಣ್ಣುಡಿ ಬಳಸಿದ್ದೆ, ಸಂದರ್ಭಕ್ಕೆ ತಕ್ಕಂತೆ ಹೇಳಿಕೆಯನ್ನು ಅರ್ಥ ಮಾಡಿಕೊಳ್ಳಬೇಕು’ ಎಂದು ಹೇಳಿದ್ದಾರೆ.

ತಮ್ಮ ಹೇಳಿಕೆ ಕುರಿತು ಎದ್ದಿರುವ ವಿವಾದದ ಕುರಿತು ಪ್ರತಿಕ್ರಿಯಿಸಿರುವ ಅವರು, ‘ರಿಸರ್ವ್‌ ಬ್ಯಾಂಕಿನ ಗವರ್ನರ್‌ ಆಗಿದ್ದುಕೊಂಡು ನಾನು ಪ್ರಾಯೋಗಿಕವಾಗಿ ಚಿಂತಿಸಬೇಕೇ ಹೊರತು, ಭ್ರಮೆಯಿಂದ ಭಾರತವು ಅತ್ಯಂತ ವೇಗವಾಗಿ ಬೆಳೆಯುತ್ತಿರುವ ವಿಶಾಲ ಅರ್ಥವ್ಯವಸ್ಥೆ ಎಂದೆಲ್ಲಾ ಹೇಳುವುದು ಸರಿಯಲ್ಲ. ‘‘ಕುರುಡರ ರಾಜ್ಯದಲ್ಲಿ ಒಕ್ಕಣ್ಣಿನವನೇ ರಾಜ’ ಎಂಬ ನಾಣ್ಣುಡಿ ಬಳಸಿದ್ದು ಈ ಅರ್ಥದಲ್ಲೇ ಎಂದರು.

ಈ ಲೋಕೋಕ್ತಿ ಬಳಕೆಯಿಂದ ದೃಷ್ಟಿಹೀನರಿಗೆ ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಇರಲಿ ಎಂದೂ ಅವರು ಹೇಳಿದರು.

ವಾಸ್ತವದಲ್ಲಿ ‘ಬ್ರಿಕ್ಸ್‌’ ದೇಶಗಳಲ್ಲೇ ಭಾರತೀಯರ ತಲಾ ಆದಾಯ ಅತ್ಯಂತ ಕಡಿಮೆ ಇದೆ. ಪ್ರತಿಯೊಬ್ಬ ಭಾರತೀಯನಿಗೂ ಯೋಗ್ಯ ಜೀವನಮಟ್ಟ ಕಲ್ಪಿಸಬೇಕಾದರೇ, ಈಗಿರುವ ಆರ್ಥಿಕ ಪ್ರಗತಿ ಸರಾಸರಿಯನ್ನು ಇನ್ನೂ 20 ವರ್ಷಗಳ ಕಾಲ ಕಾಯ್ದುಕೊಳ್ಳಬೇಕಿದೆ. ಅಂದರೆ, ಆರ್ಥಿಕ ಸುಧಾರಣಾ ಪಥದಲ್ಲಿ ನಾವು ಇನ್ನೂ ಸಾಕಷ್ಟು ದೂರ ಕ್ರಮಿಸಬೇಕಿದೆ. ಈಗಲೇ ಭಾರತ ಆರ್ಥಿಕವಾಗಿ ಮುಂದಿದೆ ಎಂದು ಘೋಷಿಸಿಕೊಳ್ಳುವುದು ಸರಿಯಲ್ಲ’ ಎಂದು ಅವರು ಇಲ್ಲಿ ನಡೆದ ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಬ್ಯಾಂಕ್‌ ಮ್ಯಾನೇಜ್‌ಮೆಂಟ್‌ನ ಘಟಿಕೋತ್ಸವದಲ್ಲಿ ಹೇಳಿದರು.

Write A Comment