ಕರ್ನಾಟಕ

ಮೌಲ್ಯಮಾಪನ ಸರಾಗ

Pinterest LinkedIn Tumblr

mouಬೆಂಗಳೂರು, ಏ. ೨೦- ಅಂತೂ ಇಂತೂ ಪಿಯು ಉಪನ್ಯಾಸಕರು ಇಂದಿನಿಂದ ಮೌಲ್ಯಮಾಪನಕ್ಕೆ ಹಾಜರಾಗುವ ಮೂಲಕ ಸರ್ಕಾರ, ಪೋಷಕರು ಮತ್ತು ವಿದ್ಯಾರ್ಥಿಗಳಲ್ಲಿ ಎದುರಾಗಿದ್ದ ಆತಂಕ ಕಾರ್ಮೋಡದಂತೆ ಕರಗಿ ಹೋಗಿದೆ.
ವೇತನ ಹೆಚ್ಚಳ ಸೇರಿದಂತೆ ನಾನಾ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಕಳೆದ ೧೮ ದಿನಗಳಿಂದ ಪ್ರತಿಭಟನೆ ನಡೆಸುವ ಮೂಲಕ ಅಕ್ಷರಶಃ ಸರ್ಕಾರದೊಂದಿಗೆ ಸಂಘರ್ಷಕ್ಕೆ ಇಳಿದಿದ್ದ ಉಪನ್ಯಾಸಕರ ಬೇಡಿಕೆಗೆ ಸರ್ಕಾರ ಮಣಿಯದ ಹಿನ್ನೆಲೆಯಲ್ಲಿ “ನಾ ಕೊಡೆ ನೀ ಬಿಡೆ” ಎನ್ನುವ ಸ್ಥಿತಿ ಉಂಟಾಗಿತ್ತು.
ಕೊನೆಗೂ ಉಪನ್ಯಾಸಕರು ಮತ್ತು ಸರ್ಕಾರದ ನಡುವಿನ ಹಗ್ಗಜಗ್ಗಾಟ ಅಂತ್ಯಗೊಂಡಿದ್ದು,ಇಂದಿನಿಂದ ರಾಜ್ಯದ ೪೬ ಮೌಲ್ಯಮಾಪನ ಕೇಂದ್ರಗಳಲ್ಲಿ ಮೌಲ್ಯಮಾಪನಕ್ಕೆ ಖಾಸಗಿ, ಅನುದಾನಿತ ಮತ್ತು ಸರ್ಕಾರಿ ಉಪನ್ಯಾಸಕರೂ ಸೇರಿದಂತೆ ೨೦,೫೦೦ ಮಂದಿ ಉಪನ್ಯಾಸಕರು ಮೌಲ್ಯಮಾಪನ ಕರ್ತವ್ಯಕ್ಕೆ ಹಾಜರಾಗಿದ್ದಾರೆ.

* ಇಂದಿನಿಂದ ಪಿಯು ಮೌಲ್ಯಮಾಪನ ಆರಂಭ
* ರಾಜ್ಯದ ೪೬ ಕೇಂದ್ರಗಳಲ್ಲಿ ೨೦೫೦೦ ಉಪನ್ಯಾಸಕರು ಕರ್ತವ್ಯಕ್ಕೆ ಹಾಜರು
* ಸರ್ಕಾರ,ಪೋಷಕರು, ವಿದ್ಯಾರ್ಥಿಗಳ ಆತಂಕ ದೂರ
* ಮೇ.೨ರ ಒಳಗೆ ಫಲಿತಾಂಶ ಸಿದ್ದ
* ದಿನಕ್ಕೆ ೨೪ ಪತ್ರಿಕಗಳನ್ನಷೇ ನೀಡಿ ಸರ್ಕಾರಕ್ಕೆ ಉಪನ್ಯಾಸಕರ ಸಂಘ ಮನವಿ
* ತಪ್ಪುಗಳಾಗದಂತೆ, ಎಚ್ಚರಿಕೆಯಿಂದ ಮೌಲ್ಯಮಾಪನ ಮಾಡಲು ಕರೆ
* ಎಸ್‌ಎಸ್‌ಎಲ್‌ಸಿ ಮೌಲ್ಯಮಾಪನವೂ ಆರಂಭ

ಉಪನ್ಯಾಸಕರ ಬೇಡಿಕೆಗೆ ಸರ್ಕಾರ ಬಗ್ಗದೆ ತನ್ನ ನಿಲುವನ್ನು ಮುಂದುವರಿಸಿದ್ದರಿಂದ ಉಪನ್ಯಾಸಕರೂ ಕೂಡ ಬೇಡಿಕೆ ಈಡೇರುವ ತನಕ ಪ್ರತಿಭಟನಾ ಸ್ಥಳದಿಂದ ವಾಪಸ್ ಕದಲುವುದಿಲ್ಲ ಎಂದು ಬಿಗಿ ಪಟ್ಟು ಹಿಡಿದ್ದರು. ಇದರಿಂದಾಗಿ ಸಕಾಲದಲ್ಲಿ ಮೌಲ್ಯಮಾಪನ ಆರಂಭವಾಗೆ ವಿದ್ಯಾರ್ಥಿಗಳು ಮತ್ತು ಅವರ ಪೋಷಕರಲ್ಲಿ ಆತಂಕ ಹೆಚ್ಚಾಗಿತ್ತು. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ಉಪನ್ಯಾಸಕರ ಸಂಘ ಪ್ರತಿಭಟನೆ ಅಂತ್ಯಗೊಳಿಸಿ ಮೌಲ್ಯಮಾಪನದಲ್ಲಿ ಭಾಗಿಯಾಲು ನಿನ್ನೆಯೇ ನಿರ್ಧರಿಸಿತ್ತು,ಅದರಂತೆ ಇಂದು ಬೆಳಿಗ್ಗೆ ರಾಜ್ಯದ ಎಲ್ಲಾ ಮೌಲ್ಯಮಾಪನ ಕೇಂದ್ರಗಳಲ್ಲಿ ಉಪನ್ಯಾಸಕರು ಭಾಗಿಯಾಗಿ ತಮ್ಮ ಕೆಲಸ ಆರಂಭಿಸಿದ್ದಾರೆ.
ಉಪನ್ಯಾಸಕರು ಮೌಲ್ಯಮಾಪನದಲ್ಲಿ ಭಾಗಿಯಾಗಿರುವುದನ್ನು ಉಪನ್ಯಾಸಕರ ಸಂಘದ ಅಧ್ಯಕ್ಷ ತಿಮ್ಮಯ್ಯ ಪುರ್ಲೆ ಸ್ಪಷ್ಟ ಪಡಿಸಿದ್ದು, ಸರ್ಕಾರ ೬೦೦ ರೂಪಾಯಿಗಳ ಇನ್ಕ್ರಿಮೆಂಟ್‌ಗಾಗಿ ನಾವು ಕಳೆದ ೧೮ ದಿನಗಳಿಂದ ಪ್ರತಿಭಟನೆ ನಡೆಸಿದ್ದುದು ಸರಿಯಲ್ಲ ಎನ್ನುವುದು ಈಗ ಮನವರಿಕೆಯಾಗಿದೆ.ಅಲ್ಲದೆ ಸರ್ಕಾರ ಕೊಡುವ ಭಿಕ್ಷೆಯೂ ನಮಗೆ ಬೇಕಾಗಿಲ್ಲ.ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ಜೊತೆಗೆ ಉಪನ್ಯಾಸಕರ ವೃತ್ತಿ ಗೌರವವನ್ನು ಎತ್ತಿ ಹಿಡಿಯುವ ಸಲುವಾಗಿ ಮೌಲ್ಯಮಾಪನದಲ್ಲಿ ಭಾಗಿಯಾಗಿದ್ದೇವೆ ಎಂದು ಹೇಳಿದ್ದಾರೆ.
ಎಂಟತ್ತು ದಿನಗಳಲ್ಲಿ ಮೌಲ್ಯಮಾಪನ ಕಾರ್ಯ ಮುಗಿಸುತ್ತೇವೆ.ಮೇ.೨ ರ ಒಳಗೆ ಫಲಿತಾಂಶವೂ ಸಿದ್ದವಾಗಲಿದೆ. ಮೇ.೪ ಮತ್ತು ೫ ರಂದು ಸಿಇಟಿ ಪರೀಕ್ಷೆ ಇರುವುದರಿಂದ ಮೇ.೧೦ರ ತನಕ ಫಲಿತಾಂಶ ಪ್ರಕಟಿಸುವ ಅಗತ್ಯವೂ ಇಲ್ಲ. ಆದರೂ ನಾವು ಮೇ.೨ರ ಒಳಗೆ ಎಲ್ಲಾ ಕೆಲಸ ಮುಗಿಸಿಕೊಡಲಿದ್ದೇವೆ,ಮೌಲ್ಯಮಾಪನ ಮುಗಿದ ಬಳಿಕ ನಮ್ಮ ಮುಂದಿನ ನಡೆಯ ಬಗ್ಗೆ ತಿಳಿಸುತ್ತೇವೆ ಎಂದು ತಿಮ್ಮಯ್ಯ ಪುರ್ಲೆ ಹೇಳಿದ್ದಾರೆ.
ಉಪನ್ಯಾಸಕರಿಗೆ ಮನವಿ
ಉಪನ್ಯಾಸಕರು ಆತುರದಿಂದ ಮೌಲ್ಯಮಾಪನ ಮಾಡಬೇಡಿ, ತಾಳ್ಮೆಯಿಂದ ತಪ್ಪುಗಳಿಗೆ ಅವಕಾಶ ಮಾಡಿಕೊಡದೆ ಜೊತೆಗೆ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಮೌಲ್ಯಮಾಪನ ಮಾಡಿ ಎಂದು ಉಪನ್ಯಾಸಕರಿಗೆ ತಿಮ್ಮಯ್ಯ ಪುರ್ಲೆ ಮನವಿ ಮಾಡಿಕೊಂಡಿದ್ದಾರೆ.
ಪ್ರತಿಯೊಬ್ಬ ಉಪನ್ಯಾಸಕರಿಗೆ ದಿನಕ್ಕೆ ೨೪ ಪತ್ರಿಕೆಗಳನ್ನಷ್ಟೇ ನೀಡಿ ಅದಕ್ಕಿಂತ ಹೆಚ್ಚಿನ ಪತ್ರಿಕೆಗಳನ್ನು ನೀಡಬೇಡಿ. ಇದರಿಂದ ಉಪನ್ಯಾಸಕರಿಗೆ ಮೌಲ್ಯಮಾಪನ ಮಾಡುವುದು ಕಷ್ಟಕರವಾಗಲಿದೆ,ಆತುರದಿಂದ ಮೌಲ್ಯಮಾಪನ ಮಾಡಿಸಲು ಮುಂದಾದರೆ ತಪ್ಪುಗಳಾಗಬಹುದು ಅದಕ್ಕೆ ಅವಕಾಶ ಮಾಡಿಕೊಡುವುದು ಬೇಡ ಎಂದು ಅವರು ಪಿಯು ಮಂಡಳಿಗೆ ಮನವಿ ಮಾಡಿದ್ದಾರೆ.
ಈ ನಡುವೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಮೌಲ್ಯಮಾಪನವೂ ಆರಂಭವಾಗಿದೆ.

Write A Comment