ಕರ್ನಾಟಕ

ಮುಖ್ಯಮಂತ್ರಿ ಯ ಬದಲಾವಣೆ ಇಲ್ಲ : ಕೆ.ಜೆ.ಜಾರ್ಜ್

Pinterest LinkedIn Tumblr

geಬೆಂಗಳೂರು, ಏ.18-ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬದಲಾವಣೆ ಆಗುವುದಿಲ್ಲ ಎಂದು ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಇಂದಿಲ್ಲಿ ತಿಳಿಸಿದ್ದಾರೆ.

ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಬದಲಾವಣೆ ಮಾಡುವಂತೆ ಎಐಸಿಸಿ ಅಧ್ಯಕ್ಷರಾದ ಸೋನಿಯಾಗಾಂಧಿ, ಉಪಾಧ್ಯಕ್ಷರಾದ ರಾಹುಲ್‌ಗಾಂಧಿ, ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್‌ಸಿಂಗ್ ಅವರೂ ಕೂಡ ಹೇಳಿಲ್ಲ.

ಬದಲಾವಣೆ ಮಾಡುವಂತಹ ಸಂದರ್ಭಗಳೂ ಕೂಡ ಬಂದಿಲ್ಲ. ತಮ್ಮ ತಮ್ಮ ಕ್ಷೇತ್ರದಲ್ಲಿ ಕೆಲಸಗಳು ಆಗದಿದ್ದಾಗ ಸಹಜವಾಗಿ ಶಾಸಕರು ಅಸಮಾಧಾನಗೊಳ್ಳುತ್ತಾರೆ. ಹೈಕಮಾಂಡ್ ವಾಚ್ ಬಗ್ಗೆಯೂ ವರದಿ ಕೇಳಿಲ್ಲ. ಲ್ಯಾಬ್ ಪ್ರಕರಣದಲ್ಲೂ ವರದಿ ಕೇಳಿಲ್ಲ. ಇವಕ್ಕೆ ಸಂಬಂಧಿಸಿದ ವರದಿಗಳು ಕಪೋಲಕಲ್ಪಿತ ಎಂದರು. ಬರ ನಿರ್ವಹಣೆ ಬಗ್ಗೆ ಮುಖ್ಯಮಂತ್ರಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷರಾಗಿ ಯಡಿಯೂರಪ್ಪ ನೇಮಕಗೊಂಡಿರುವುದರಿಂದಲೂ ಏನೂ ಆಗುವುದಿಲ್ಲ. ಅವರು ಹಿಂದೆ ಏನೇನು ಮಾಡಿದರು ಎಂಬುದು ನಮಗೂ ಗೊತ್ತಿದೆ. ಜನರಿಗೂ ಅರಿವಿದೆ ಎಂದು ಹೇಳಿದರು.

ಎರಡು ವಾರದಲ್ಲಿ ಮೆಟ್ರೋ: ನಾಯಂಡಹಳ್ಳಿ-ಬೈಯ್ಯಪ್ಪನಹಳ್ಳಿ ನಡುವಿನ ಮೆಟ್ರೋ ರೈಲು 10 ರಿಂದ 15 ದಿನದಲ್ಲಿ ಪ್ರಾರಂಭವಾಗಲಿದೆ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು. ವಿಕ್ಟೋರಿಯಾ ಆಸ್ಪತ್ರೆ ಮತ್ತು ಕನಕಪುರ ರಸ್ತೆ ನಡುವಿನ ಮೆಟ್ರೋ ರೈಲು ಶೀಘ್ರವೇ ಪ್ರಾರಂಭವಾಗಲಿದೆ. ಬ್ರಿಗೇಡ್ ರಸ್ತೆಯ ನೆಲಮಾಳಿಗೆಯಲ್ಲಿ ಪಾರ್ಕಿಂಗ್ ನಿರ್ಮಾಣ ಮಾಡುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ. ಬಸವೇಶ್ವರ ನಗರ ಮತ್ತು ಹೆಬ್ಬಾಳದಲ್ಲಿ ಮೇಲ್ಸೇತುವೆ ಕಾಮಗಾರಿಯನ್ನು ಶೀಘ್ರದಲ್ಲೇ ಕೈಗೊಳ್ಳಲಾಗುವುದು ಎಂದು ಜಾರ್ಜ್ ಹೇಳಿದರು.

Write A Comment