ಕರ್ನಾಟಕ

ಮೀನು ಬೇಟೆಗೆ ನದಿಗಳಲ್ಲಿ ಡೈನಮೈಟ್‌ ಸ್ಫೋಟ

Pinterest LinkedIn Tumblr

fishಬೆಂಗಳೂರು: ಸಾಮಾನ್ಯವಾಗಿ ಕಲ್ಲು ಗಣಿಗಾರಿಕೆಗೆ ಬಳಸಲ್ಪಡುವ ಡೈನಮೈಟ್‌ಗಳನ್ನು ನದಿಗಳಲ್ಲಿ ಸ್ಫೋಟಿಸಿ ಮೀನು ಹಿಡಿಯುವ ದಂಧೆ ವಿಪರೀತವಾಗಿದ್ದು, ಇದರಿಂದ ರಾಜ್ಯದ ಪ್ರಮುಖ ನದಿಗಳಲ್ಲಿನ 12ಕ್ಕೂ ಹೆಚ್ಚು ಸ್ಥಳೀಯ ಮೀನು ಪ್ರಭೇದಗಳು ನಶಿಸಿಹೋಗುವ ಆತಂಕ ಎದುರಿಸುತ್ತಿವೆ.

ಲಿಬಿಯೋ ಕಾಂಟಿಯಸ್‌, ಕರ್ನಾಟಕ ಗೆಂಡೆ, ಸೊಪ್ಪು ಹರಗಿ, ಕೊಲ್ಚ ಮೀನು ಸೇರಿದಂತೆ 12ಕ್ಕೂ ಹೆಚ್ಚು ಸ್ಥಳೀಯ ಪ್ರಭೇದಗಳ ಸಂಖ್ಯೆ ಕಾವೇರಿ, ಕೃಷ್ಣಾ, ಗೋದಾವರಿ, ತುಂಗಾ ನದಿಗಳಲ್ಲಿ ಗಣನೀಯ ಪ್ರಮಾಣದಲ್ಲಿ ಕುಸಿದಿದೆ. ಇದಕ್ಕೆ ಡೈನಮೈಟ್‌ಗಳ ಸ್ಫೋಟ ಕಾರಣ ಎನ್ನಲಾಗಿದೆ. ಇದೇ ರೀತಿ ಡೈನಮೈಟ್‌ಗಳ ಬಳಕೆ ಮುಂದುವರಿದರೆ, ಆ ಪ್ರಭೇದಗಳು ನಶಿಸಿಹೋಗುವ ಹೋಗುವ ಸಾಧ್ಯತೆ ಇದೆ ಎಂದು ಹೆಸರಘಟ್ಟದ ಕೇಂದ್ರೀಯ ಒಳನಾಡು ಮೀನುಗಾರಿಕೆ ಸಂಶೋಧನಾ ಸಂಸ್ಥೆ (ಸಿಐಎಫ್ಆರ್‌ಐ) ಆತಂಕ ವ್ಯಕ್ತಪಡಿಸಿದೆ.

ರಾಜ್ಯದ ನದಿಪಾತ್ರಗಳಲ್ಲಿ ಅಧ್ಯಯನ ನಡೆಸಿರುವ ಸಂಶೋಧನಾ ಸಂಸ್ಥೆ ವಿಜ್ಞಾನಿಗಳು, ಅಲ್ಪಾವಧಿ ಹಾಗೂ ಕಡಿಮೆ ಶ್ರಮದಲ್ಲಿ ಹೆಚ್ಚು ಮೀನುಗಳನ್ನು ಹಿಡಿಯಲು ಈ ಡೈನಮೈಟ್‌ಗಳನ್ನು ಬಳಸಲಾಗುತ್ತಿದೆ. ಆದರೆ, ಇದು ಇತ್ತೀಚಿನ ದಿನಗಳಲ್ಲಿ ವಿಪರೀತವಾಗಿದೆ. ಪರಿಣಾಮ ಸ್ಥಳೀಯ ಮೀನು ತಳಿಗಳು ಆತಂಕದ ಸ್ಥಿತಿಯಲ್ಲಿವೆ ಎಂದು ಹೇಳಿದೆ.
ಮೀನುಗಳಿಗೆ ನದಿಗಳೇ ಮೂಲ ಆಶ್ರಯ ತಾಣ. ಕೆರೆ-ಕೊಳ್ಳ, ಹಳ್ಳಗಳಲ್ಲಿ ಮೀನುಗಳಿರುತ್ತವೆಯಾದರೂ, ಸ್ಥಳೀಯ ಮೀನು ಪ್ರಭೇದಗಳು ಹುಟ್ಟುವುದು ನದಿಗಳಲ್ಲೇ. ಕಲ್ಲುಬಂಡೆಗಳನ್ನು ಒಡೆಯಲು ಬಳಸುವ ಅತ್ಯಧಿಕ ಡೆಸಿಬಲ್‌ನ ಡೈನಮೈಟ್‌ಗಳನ್ನು ಸ್ಫೋಟಿಸುವುದರಿಂದ ಆ ಮೀನುಗಳ ಸಂತತಿಗೆ ಕಂಟಕವಾಗಿ ಪರಿಣಮಿಸುತ್ತಿದೆ.

ಅಲ್ಪಾವಧಿಯಲ್ಲೇ ರಾಜ್ಯದ ನದಿಗಳಲ್ಲಿ ಸ್ಥಳೀಯ ಪ್ರಭೇದಗಳ ಸಂಖ್ಯೆ ಇಳಿಮುಖವಾಗಿರುವುದು ಸಂಶೋಧನಾ ಸಂಸ್ಥೆಯ ಅಧ್ಯಯನದಿಂದ ಕಂಡುಬಂದಿದೆ. ಈ ಸಂಬಂಧ ರಾಜ್ಯ ಮೀನುಗಾರಿಕೆ ಇಲಾಖೆ ಗಮನಕ್ಕೂ ತರಲಾಗಿದೆ ಎಂದು
ಸಂಸ್ಥೆಯ ಪ್ರಧಾನ ವಿಜ್ಞಾನಿ ಡಿ.ಎಸ್‌. ಕೃಷ್ಣರಾವ್‌ “ಉದಯವಾಣಿ’ಗೆ ತಿಳಿಸಿದ್ದಾರೆ.

ಮೀನುಗಾರಿಕೆ ಇಲಾಖೆ ಕೂಡ ನದಿಪಾತ್ರಗಳನ್ನು ಸಂರಕ್ಷಿತ ಪ್ರದೇಶವೆಂದು ಘೋಷಿಸಿದೆ. ಉದಾಹರಣೆಗೆ
ಶಿವನಸಮುದ್ರದಿಂದ ಮೇಕೆದಾಟುವರೆಗೆ ಸಂರಕ್ಷಿತ ಪ್ರದೇಶ ಎಂದು ಘೋಷಿಸಿ, ಸಿಬ್ಬಂದಿಯನ್ನು ನಿಯೋಜಿಸಿ ಸುರಕ್ಷತೆಗೆ ಕ್ರಮ ಕೈಗೊಳ್ಳಲಾಗಿದೆ. ಅಲ್ಲದೆ, ಅರಣ್ಯ ಇಲಾಖೆಯೂ ಸುರಕ್ಷತೆಗೆ ಕೈಜೋಡಿಸಿದೆ.

ಆದರೂ ಡೈನಮೈಟ್‌ಗಳ ಸದ್ದು ನದಿಪಾತ್ರಗಳಲ್ಲಿ ಕೇಳಿಬರುತ್ತಲೇ ಇದೆ. ಸಾಮಾನ್ಯವಾಗಿ ಬೆಳಿಗ್ಗೆ 7ರಿಂದ 10ರವರೆಗೆ ಹೆಚ್ಚು ನಡೆಯುತ್ತಿದೆ ಎಂದೂ ಅವರು ಹೇಳಿದ್ದಾರೆ.

ಬೇಸಿಗೆಯಲ್ಲೇ ಸ್ಫೋಟ: ಬೇಸಿಗೆಯಲ್ಲಿ ನದಿಗಳಲ್ಲಿ ನೀರಿನ ಹರಿವು ಕಡಿಮೆ ಇರುತ್ತದೆ. ಈ ಸಮಯದಲ್ಲಿ ಮೀನುಗಳು ನದಿಯಲ್ಲಿನ ಆಳವಾದ ಗುಂಡಿಗಳನ್ನು ಬಿಟ್ಟು ಕದಲುವುದಿಲ್ಲ. ಈ ಸಂದರ್ಭದಲ್ಲಿ ಸ್ಫೋಟಿಸಿದರೆ, ಹೆಚ್ಚು ಮೀನುಗಳು ಬಲೆಗೆ ಬೀಳುತ್ತವೆ ಎಂದು ಮೀನುಗಾರರು ಬೇಸಿಗೆಯಲ್ಲೇ ಹೆಚ್ಚು ಡೈನಮೈಟ್‌ಗಳನ್ನು ಸ್ಫೋಟಿಸುತ್ತಾರೆ.

ಅಧಿಕ ಡೆಸಿಬಲ್‌ ಇರುವ ಡೈನಮೈಟ್‌ ಸ್ಫೋಟಗೊಳ್ಳುವುದರಿಂದ ದೊಡ್ಡ ಮೀನು, ಮರಿ, ಮೊಟ್ಟೆ ಸೇರಿದಂತೆ ಎಲ್ಲ ಹಂತದ ಮೀನುಗಳು ಹೆಚ್ಚಿನ ಪ್ರಮಾಣದಲ್ಲಿ ಬಲೆಗೆ ಬೀಳುತ್ತವೆ. ಈ ಪೈಕಿ ಕೆಲವು ಪ್ರಜ್ಞಾಹೀನ ಆಗುತ್ತವೆ. ಇನ್ನು ಕೆಲವು
ಸತ್ತುಹೋಗುತ್ತವೆ ಎಂದೂ ಅವರು ತಿಳಿಸುತ್ತಾರೆ.

ಸ್ಥಳೀಯ ಮೀನು ಸಂತತಿ ಕ್ಷೀಣಿಸಲು ಡೈನಮೈಟ್‌ ಸ್ಫೋಟ ಪ್ರಮುಖ ಕಾರಣವಾದರೆ, ನದಿಗಳಿಗೆ ಮಣ್ಣು ಸೇರುತ್ತಿರುವುದು ಇನ್ನೊಂದು ಕಾರಣ. ಏಕೆಂದರೆ ನದಿಪಾತ್ರಗಳ ಸುತ್ತ ಅರಣ್ಯಪ್ರದೇಶ ಕಡಿಮೆಯಾಗಿದೆ. ಇದರಿಂದ ಮಣ್ಣಿನ ಸವಕಳಿ ಉಂಟಾಗಿ, ಆ ಮಣ್ಣು ನದಿ ಸೇರುತ್ತಿದೆ. ನದಿಗಳಲ್ಲಿ ನೀರಿನ ಹರಿವು ಇಳಿಮುಖ ಆಗುತ್ತಿರುವುದರಿಂದ
ಮೀನುಗಳು ತಮಿಳುನಾಡು ಮತ್ತಿತರ ಹತ್ತಿರದ ಸುರಕ್ಷಿತ ಸ್ಥಳಗಳಿಗೆ ವಲಸೆ ಹೋಗುತ್ತಿವೆ ಎಂದೂ
ಕೃಷ್ಣರಾವ್‌ ಹೇಳುತ್ತಾರೆ.

-ಉದಯವಾಣಿ

Write A Comment