ಕರ್ನಾಟಕ

ಪಿಯು ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಹಿರಿಯ ಐಎಎಸ್ ಅಧಿಕಾರಿ ಶಾಮೀಲಾಗಿರುವ ಶಂಕೆ ..!

Pinterest LinkedIn Tumblr

pucಬೆಂಗಳೂರು: ರಾಜ್ಯ ಸರ್ಕಾರಕ್ಕೆ ತೀವ್ರ ಮುಜುಗರ ಉಂಟು ಮಾಡಿದ್ದ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ರಸಾಯನಶಾಸ್ತ್ರ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಹಿರಿಯ ಐಎಎಸ್ ಅಧಿಕಾರಿಯೊಬ್ಬರ ಹೆಸರು ಕೇಳಿಬಂದಿದೆ. ಮತ್ತೊಂದೆಡೆ ಕಳೆದ ಎರಡು ದಿನಗಳ ಹಿಂದೆ ಸಿಐಡಿ ದಾಳಿ ಮಾಡಿದ 11 ಪದವಿಪೂರ್ವ ಕಾಲೇಜುಗಳಲ್ಲಿ ಹಿರಿಯ ಕಾಂಗ್ರೆಸ್ ಮುಖಂಡರೊಬ್ಬರು ಕೂಡ ಇದರಲ್ಲಿ ಶಾಮೀಲಾಗಿರುವ ಶಂಕೆ ವ್ಯಕ್ತವಾಗಿದೆ. ಬಿಬಿಎಂಪಿ ಮಾಜಿ ಆಯುಕ್ತ ಹಾಗೂ ಹಾಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಲಕ್ಷ್ಮಿ ನಾರಾಯಣ ಹೆಸರು ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಕೇಳಿಬಂದಿದ್ದು ವಿವಾದ ಹೊಸ ಸ್ವರೂಪ ಪಡೆದುಕೊಂಡಿದೆ.

ಈಗಾಗಲೇ ಸಿಐಡಿ ವಶದಲ್ಲಿರುವ ವೈದ್ಯಕೀಯ ಶಿಕ್ಷಣ ಸಚಿವ ಶರಣ್ ಪ್ರಕಾಶ್ ಪಾಟೀಲ್ ಅವರ ಮಾಜಿ ವಿಶೇಷ ಕರ್ತವ್ಯಾಧಿಕಾರಿ ಓಬಳರಾಜು ಜೊತೆ ಲಕ್ಷ್ಮಿನಾರಾಯಣ್ ಮೊಬೈಲ್‌ನಲ್ಲಿ ಮಾತುಕತೆ ನಡೆಸಿರುವುದನ್ನು ಸಿಐಡಿ ತನಿಖಾ ತಂಡ ಪತ್ತೆ ಮಾಡಿದೆ. ಮಾ.12ರಂದು ರಸಾಯನಶಾಸ್ತ್ರ ಪ್ರಶ್ನೆಪತ್ರಿಕೆ ಪರೀಕ್ಷೆ ಪ್ರಾರಂಭಕ್ಕೂ ಮುನ್ನ ಅಂದರೆ 11ರಂದು ಓಬಳರಾಜು ಲಕ್ಷ್ಮಿನಾರಾಯಣ ಅವರ ಮೊಬೈಲ್‌ಗೆ ಹಲವಾರು ಬಾರಿ ಕರೆ ಮಾಡಿ ಮಾತನಾಡಿದ್ದಾನೆ. ಅಲ್ಲದೆ 30ರಂದು ನಡೆಯಬೇಕಿದ್ದ ಮರು ಪರೀಕ್ಷೆ ಮುನ್ನವೂ ಈ ಇಬ್ಬರು ಮೊಬೈಲ್‌ನಲ್ಲಿ ಮೆಸೇಜ್‌ಗಳನ್ನು ವಿನಿಮಯ ಮಾಡಿಕೊಂಡಿರುವುದು ಬಯಲಿಗೆ ಬಂದಿದೆ.

ವಿಚಾರಣೆ ಸಾಧ್ಯತೆ:

ಮೇಲ್ನೋಟಕ್ಕೆ ಪ್ರಶ್ನೆಪತ್ರಿಕೆ ಸೋರಿಕೆಯಲ್ಲಿ ಈ ಅಧಿಕಾರಿಯ ನೇರ ಕೈವಾಡ ಇಲ್ಲದಿದ್ದರೂ ಓಬಳ ರಾಜು ಜೊತೆ ಯಾವ ಕಾರಣಕ್ಕಾಗಿ ಮಾತುಕತೆ ನಡೆಸಿದ್ದಾರೆ ಎಂಬುದನ್ನು ಪತ್ತೆ ಮಾಡಲು ಸಿಐಡಿ ಮುಂದಾಗಿದೆ. ಈ ಸಂಬಂಧ ಸಿಐಡಿ ಡಿಐಜಿ ಸೋನಿಯಾ ನಾರಂಗ್, ಎಸ್ಪಿ ಸಿರಿಗೌರಿ ನೇತೃತ್ವದ ತನಿಖಾ ತಂಡ ಲಕ್ಷ್ಮಿನಾರಾಯಣ್ ಅವರನ್ನು ಸದ್ಯದಲ್ಲೇ ವಿಚಾರಣೆಗೊಳಪಡಿಸಲು ತೀರ್ಮಾನಿಸಿದೆ ಎಂದು ಅತ್ಯಂತ ನಂಬಲರ್ಹ ಮೂಲಗಳು ತಿಳಿಸಿವೆ.

ಕೈ ಮುಖಂಡನ ಕೈವಾಡ?

ಎರಡು ದಿನಗಳ ಹಿಂದಷ್ಟೇ ಸಿಐಡಿ ತನಿಖಾ ತಂಡ ಪ್ರಶ್ನೆ ಪತ್ರಿಕೆ ಸೋರಿಕೆ ಸಂಬಂಧ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಹನ್ನೊಂದು ಪದವಿಪೂರ್ವ ಕಾಲೇಜುಗಳ ಮೇಲೆ ದಾಳಿ ನಡೆಸಿತ್ತು. ಬೆಂಗಳೂರು, ಮಂಗಳೂರು, ಬಳ್ಳಾರಿ ಸೇರಿದಂತೆ ಒಟ್ಟು 11 ಕಾಲೇಜುಗಳ ಮೇಲೆ ದಾಳಿ ನಡೆಸಿ ಕೆಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿತ್ತು. ದಾಳಿ ನಡೆಸಿದ ಕಾಲೇಜುಗಳ ಪೈಕಿ ಬೆಂಗಳೂರಿನ ಕಲ್ಯಾಣನಗರದಲ್ಲಿರುವ ಒಂದು ಕಾಲೇಜು ಹಿರಿಯ ಕಾಂಗ್ರೆಸ್ ಮುಖಂಡರಿಗೆ ಸೇರಿದ್ದು ಎಂಬುದು ಬೆಳಕಿಗೆ ಬಂದಿದೆ.

ಮೂಲತಃ ಮಂಡ್ಯ ಜಿಲ್ಲೆಯವರಾದ ಇವರು ಒಂದು ಬಾರಿ ಶಾಸಕರಾಗಿ ಇತ್ತೀಚೆಗೆ ವಿಧಾನಪರಿಷತ್‌ಗೆ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಪರಾಭವಗೊಂಡಿದ್ದರು. ಬೆಂಗಳೂರಿನಲ್ಲಿ ನೆಲೆಸಿರುವ ಇವರು ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದ್ದಾರೆ. ದ್ವಿತೀಯ ಪಿಯುಸಿ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಇವರ ಒಡೆತನದ ಕಾಲೇಜು ಕೂಡ ಭಾಗಿಯಾಗಿದೆ ಎಂಬ ಆರೋಪದ ಹಿನ್ನಲೆಯಲ್ಲಿ ದಾಳಿ ನಡೆಸಲಾಗಿತ್ತು.

Write A Comment