ಕರ್ನಾಟಕ

ಮೈಸೂರಿನಲ್ಲಿ ವಿವಾಹ ಬಂಧನಕ್ಕೊಳಗಾದ ಆಶಿತಾ-ಶಕೀಲ್ ಜೋಡಿ

Pinterest LinkedIn Tumblr

Love

ಮೈಸೂರು: ಅಂತರ್ ಧರ್ಮೀಯ ವಿವಾಹವನ್ನು ನಿಲ್ಲಿಸಲು ಬಲಪಂಥೀಯ ಗುಂಪುಗಳು ಪ್ರಯತ್ನಿಸಿದರು ಕೂಡ ಕೊನೆಗೂ ಪ್ರೀತಿಯೇ ಗೆದ್ದಿತು. ಮಂಡ್ಯ ಮೂಲದ ಆಶಿತ ಮತ್ತು ಶಕೀಲ್ ಪೊಲೀಸರ ರಕ್ಷಣೆಯಲ್ಲಿ ಮೈಸೂರಿನಲ್ಲಿ ನಿನ್ನೆ ಸಂಜೆ ವಿವಾಹವಾಗಿದ್ದಾರೆ.

ಮದುವೆ ಇಸ್ಲಾಂ ಧರ್ಮದ ಪ್ರಕಾರ ನೆರವೇರಿತು. ಗುಲಾಬಿ ಬಣ್ಣದ ಲೆಹಂಗಾದಲ್ಲಿ ಮದುಮಗಳು ಆಶಿತಾ ಕಂಗೊಳಿಸುತ್ತಿದ್ದರೆ, ಮದುಮಗ ಶಕೀಲ್ ನೀಲಿ ಬಣ್ಣದ ಸೂಟ್ ನಲ್ಲಿ ಮಿಂಚುತ್ತಿದ್ದ. ಮೈಸೂರಿನ ಬನ್ನಿಮಂಟಪದ ಹೊಳೆಯುವ ಹುಲ್ಲುಗಾವಲಿನ ಮುಂದಿರುವ ಸಂಭಾಂಗಣದಲ್ಲಿ ಇಬ್ಬರನ್ನೂ ಕರೆತಂದು ಕೂರಿಸಲಾಯಿತು. ಮದುವೆ ಸಮಾರಂಭದಲ್ಲಿ ಹತ್ತಿರದ ಬಂಧುಗಳು ಮತ್ತು ಸ್ನೇಹಿತರು ಪಾಲ್ಗೊಂಡಿದ್ದರು. ಆಶಿತಾಳ ಹೆಸರನ್ನು ಶೈಶ್ತಾ ಎಂದು ಬದಲಾಯಿಸಲಾಗಿತ್ತು.

22

marrage

ಈ ಜೋಡಿ ಒಂದಾಗುವುದನ್ನು ವಿರೋಧಿಸಿ ಕಳೆದ ಮಂಗಳವಾರ ಬಲಪಂಥೀಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು ಹಾಗೂ ಮದುವೆಯಾಗಲು ಬಿಡುವುದಿಲ್ಲವೆಂದು ಬೆದರಿಕೆ ಸಹ ಹಾಕಿದ್ದರು. ಇದೊಂದು ಲವ್ ಜಿಹಾದ್ ಎಂದು ವ್ಯಾಖ್ಯಾನಿಸಿದ ಪ್ರತಿಭಟನಾಕಾರರು ಎರಡೂ ಕುಟುಂಬಗಳ ಹಿರಿಯರನ್ನು ಭೇಟಿ ಮಾಡಿ ಮದುವೆ ರದ್ದುಗೊಳಿಸುವಂತೆ ಸಹ ಕೋರಿದ್ದರು. ಮಂಡ್ಯ ಬಂದ್ ಗೂ ಕರೆ ನೀಡಲಾಗಿತ್ತು. ಈ ಎಲ್ಲಾ ಕಾರಣದಿಂದ ಜೋಡಿ ತಮ್ಮ ಮದುವೆಗೆ ಪೊಲೀಸರ ರಕ್ಷಣೆಯ ಮೊರೆ ಹೋಗಿತ್ತು.

ಪೊಲೀಸರಿಂದ ಮುನ್ನೆಚ್ಚರಿಕೆ: ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಲು ಪೊಲೀಸರು ಮದುವೆ ಸಭಾಂಗಣದ ಪ್ರವೇಶದ್ವಾರವನ್ನು ತಡೆಹಿಡಿದಿದ್ದರು. ಮೈಸೂರು ಡಿಸಿಪಿ ಶೇಖರ್ ಮುಂದಾಳತ್ವದಲ್ಲಿ ಸುಮಾರು 100 ಮಂದಿ ಪೊಲೀಸ್ ಸಿಬ್ಬಂದಿಯನ್ನು ವಿವಿಧ ಸ್ಥಳಗಳಲ್ಲಿ ನಿಯೋಜಿಸಲಾಗಿತ್ತು. ಮದುವೆ ನಡೆಯುತ್ತಿದ್ದ ಮಂಟಪದ ಬಳಿಯೂ ಸಿವಿಲ್ ಡ್ರೆಸ್ ನಲ್ಲಿ ಪೊಲೀಸರು ಕಾವಲು ಕಾಯುತ್ತಿದ್ದರು. ಮದುವೆಗೆ ಯಾರೆಲ್ಲಾ ಆಗಮಿಸುತ್ತಾರೆ ಎಂದು ಗುರುತಿಸಲು ಹುಡುಗ ಮತ್ತು ಹುಡುಗಿಯ ಮನೆಯವರನ್ನು ಪ್ರವೇಶ ದ್ವಾರದ ಬಳಿ ನಿಲ್ಲುವಂತೆ ಹೇಳಲಾಯಿತು. ಆಶಿತಾಳ ತಂದೆ ತಾಯಿಯರಾದ ಡಾ.ವಿ.ಎಚ್.ನಾಗೇಂದ್ರ ಬಾಬು ಮತ್ತು ಶಕೀಲ್ ನ ತಂದೆ ಮುಕ್ತರ್ ಅಹ್ಮದ್ ಮದುವೆಗೆ ಬಂದ ಅತಿಥಿಗಳನ್ನು ಸ್ವಾಗತಿಸಿದರು.

ಮಳವಳ್ಳಿ ಕ್ಷೇತ್ರದ ಮಾಜಿ ಶಾಸಕ ವೀರಣ್ಣ ಗೌಡ ಅವರ ಮೊಮ್ಮಗಳಾದ ಆಶಿತಾ ಎಂಬಿಎ ಪದವೀಧರೆಯಾಗಿದ್ದು, ಶಾಲಾ ದಿನಗಳಿಂದಲೂ ಆಕೆಗೆ ಶಕೀಲ್ ನ ಪರಿಚಯವಿತ್ತು.

ಪ್ರಗತಿಪರ ಬರಹಗಾರರು, ಎಡಪಂಥೀಯ ಸಂಘಟನೆಗಳ ಕಾರ್ಯಕರ್ತರು ಸೇರಿದಂತೆ ಸುಮಾರು 700 ಜನ ಅತಿಥಿಗಳು ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕೋಮು ಸೌಹಾರ್ದ ವೇದಿಕೆಯ ಗೌರಿ ಲಂಕೇಶ್ ಈ ಸಂದರ್ಭದಲ್ಲಿ ಮಾತನಾಡಿ, ಜೋಡಿಯ ವೈಯಕ್ತಿಕ ನಿರ್ಧಾರವನ್ನು ಯಾರೂ ಪ್ರಶ್ನೆ ಮಾಡಲು ಸಾಧ್ಯವಿಲ್ಲ. ಪ್ರತಿಭಟನೆ ಸಂವಿಧಾನದ ಆಶಯಕ್ಕೆ ವಿರುದ್ಧವಾದುದು ಎಂದರು.

ಬರಹಗಾರ ಕೆ.ಎಸ್.ಭಗವಾನ್ ಮಾತನಾಡಿ, ಅಂತರ್ ಧರ್ಮೀಯ ವಿವಾಹವನ್ನು ವಿರೋಧಿಸುವುದೆಂದರೆ ಜಾತಿರಹಿತ ಸಮಾಜಕ್ಕಾಗಿ ಕೆಲಸ ಮಾಡಿದ ಗಾಂಧೀಜಿಯವರ ತತ್ವಗಳನ್ನು ವಿರೋಧಿಸುವುದೆಂದರ್ಥ. ಜಾತಿ, ಧರ್ಮವನ್ನು ಮೀರಿ ಮಾನವ ಮೌಲ್ಯ ಮತ್ತು ಪ್ರೀತಿ ಮುಖ್ಯ ಎಂದು ಬಯಸಿದ ಜೋಡಿ ನಿಜಕ್ಕೂ ಅಭಿನಂದನಾರ್ಹರು ಎಂದರು. ಅನೇಕ ರಾಜಕೀಯ ಧುರೀಣರೂ ಕೂಡ ಮದುವೆಯಲ್ಲಿ ಪಾಲ್ಗೊಂಡಿದ್ದರು. ಹಿಂದೂ ಮುಸ್ಲಿಂ ಸಂಪ್ರದಾಯದಂತೆ ಮದುವೆ ಊಟದಲ್ಲಿ ಕೂಡ ಸಸ್ಯಾಹಾರ ಮತ್ತು ಮಾಂಸಾಹಾರ ಖಾದ್ಯಗಳು ಒಳಗೊಂಡಿದ್ದವು.

Write A Comment