ಕರ್ನಾಟಕ

ಬೆಂಗಳೂರಿನಲ್ಲಿ ದಾಖಲೆಯ ತಾಪಮಾನ ! 40 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ

Pinterest LinkedIn Tumblr

heat

ಬೆಂಗಳೂರು: ತಂಪು ನಗರಿ, ಉದ್ಯಾನ ನಗರಿ ಎಂದು ಹೆಸರು ಪಡೆದಿದ್ದ ರಾಜಧಾನಿ ಬೆಂಗಳೂರಿನಲ್ಲಿ ಈ ವರ್ಷ ದಾಖಲೆಯ ತಾಪಮಾನ ಕಂಡುಬಂದಿದೆ. ನಗರದ ಹೆಬ್ಬಾಳ, ಬಳ್ಳಾರಿ ರಸ್ತೆಯಲ್ಲಿ ದಾಖಲೆಯ 40.04 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಉಷ್ಣಾಂಶ ಈ ಮಟ್ಟದಲ್ಲಿ ಏರಿಕೆಯಾಗಲು ಮುಖ್ಯ ಕಾರಣ ಬಾನೆತ್ತರದ ಕಟ್ಟಡಗಳು, ನಿರ್ಮಾಣ ಕಾಮಗಾರಿಗಳು ಮತ್ತು ಮರಗಳ ಸಂಖ್ಯೆ ಕಡಿಮೆಯಾಗಿರುವುದು.

ಭಾರತೀಯ ಹವಾಮಾನ ಇಲಾಖೆಯ ವರದಿ ಪ್ರಕಾರ, ಬೆಂಗಳೂರಿನಲ್ಲಿ ನಿನ್ನೆ 37 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಅದು ಪ್ರತಿವರ್ಷ ಏಪ್ರಿಲ್ ತಿಂಗಳಿನಲ್ಲಿ ದಾಖಲಾಗುವ ಸರಾಸರಿ ಉಷ್ಣಾಂಶಕ್ಕಿಂತ 3 ಡಿಗ್ರಿ ಸೆಲ್ಸಿಯಸ್ ಅಧಿಕವಾಗಿದೆ.

ಹವಾಮಾನ ಆಸಕ್ತಿಕಾರ ಮತ್ತು ನಾಗರಿಕ ಹವಾಮಾನ ಜಾಲದ ಸಹ ಸ್ಥಾಪಕ ಪವನ್ ಶ್ರೀನಾಥ್ ಅವರು ಸ್ವಯಂಚಾಲಿತ ಹವಾಮಾನ ಕೇಂದ್ರದ ಸಹಾಯದಿಂದ ಬೆಂಗಳೂರಿನ ಅನೇಕ ಕಡೆಗಳಲ್ಲಿ ನಿಜಾವಧಿಯ ಹವಾಮಾನ ಮಾಹಿತಿಗಳನ್ನು ಸೆರೆಹಿಡಿದಿದ್ದು, ಅದರಲ್ಲಿ ತಾಪಮಾನ ಸ್ಥಳದಿಂದ ಸ್ಥಳಕ್ಕೆ ವ್ಯತ್ಯಾಸವಿರುವುದು ಗೊತ್ತಾಗಿದೆ.

ದ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಸಿಕ್ಕಿರುವ ಮಾಹಿತಿ ಪ್ರಕಾರ, ಹೆಬ್ಬಾಳದಲ್ಲಿ ನಿನ್ನೆ ಗರಿಷ್ಠ 40.4 ಡಿಗ್ರಿ ಸೆಲ್ಸಿಯಸ್, ಜಿಕೆವಿಕೆ ಕ್ಯಾಂಪಸ್ ಮತ್ತು ಜಯನಗರದಲ್ಲಿ ಕ್ರಮವಾಗಿ 35.6 ಮತ್ತು 34.35 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ.

ಖ್ಯಾತ ಪರಿಸರವಾದಿ ಎ.ಎನ್.ಯಲ್ಲಪ್ಪ ರೆಡ್ಡಿ ಮಾತನಾಡಿ, ಸಸ್ಯವರ್ಗ ಮತ್ತು ಗಗನಚುಂಬಿ ಕಟ್ಟಡಗಳನ್ನು ಉಷ್ಣಾಂಶ ಒಳಗೊಂಡಿರುತ್ತದೆ. ನಿರ್ಮಾಣ ಕಟ್ಟಡಗಳಿಗೆ ಕಬ್ಬಿಣ ಮತ್ತು ಸ್ಟೀಲ್ ಗಳನ್ನು ಬಳಸಲಾಗುತ್ತದೆ. ಇದು ಹೆಚ್ಚಿನ ಉಷ್ಣಾಂಶವನ್ನು ಹೊರಸೂಸುತ್ತದೆ. ಮರಗಳು ಪರಿಸರದಲ್ಲಿ ಹೆಚ್ಚಾಗಿದ್ದರೆ ಅವು ಶೇಕಡಾ 70ರಷ್ಟು ಉಷ್ಣತೆಯನ್ನು ಹೀರಿಕೊಳ್ಳುತ್ತವೆ ಎಂದು ಹೇಳಿದರು.

ವಾತಾವರಣದಲ್ಲಿ ಉಷ್ಣಾಂಶ ಹೆಚ್ಚಾದರೆ ಜೀವಸಂಕುಲದ ಮೇಲೆ ಬಹಳ ಪರಿಣಾಮ ಬೀರುತ್ತದೆ. ಬೆಂಗಳೂರಿನಲ್ಲಿ ವಾಹನ, ಕಟ್ಟಡಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದು, ಮರ, ಗಿಡಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಈಗಿಂದಲೇ ಗಿಡಗಳನ್ನು ನೆಟ್ಟು, ಹುಲ್ಲುಗಾವಲು ಬೆಳೆಸಿದರೆ ಭವಿಷ್ಯದಲ್ಲಿ ಸ್ವಲ್ಪವಾದರೂ ಆಸರೆಯಾಗಬಹುದು, ಇಲ್ಲದಿದ್ದರೆ ನಮ್ಮ ಮುಂದಿನ ಜನಾಂಗದ ಪರಿಸ್ಥಿತಿ ಚಿಂತಾಜನಕವಾಗಲಿದೆ ಎಂದರು.

ಕಳೆದ 4 ದಶಕಗಳಲ್ಲಿ ನಗರೀಕರಣದ ನೆಪದಲ್ಲಿ ಬೆಂಗಳೂರು ಶೇಕಡಾ 78ರಷ್ಟು ಮರ, ಗಿಡಗಳನ್ನು ಕಳೆದುಕೊಂಡಿದೆ. ಶೇಕಡಾ 79ರಷ್ಟು ಜಲ ಸಂಪನ್ಮೂಲವನ್ನು ಕಳೆದುಕೊಂಡಿದೆ ಎಂದು ತಿಳಿಸಿದರು.

Write A Comment