ಕರ್ನಾಟಕ

ಪುರಾಣ ಪ್ರಸಿದ್ಧ ಕರಗ ಉತ್ಸವಕ್ಕೆ ಸಿಲಿಕಾನ್ ಸಿಟಿ ಬೆಂಗಳೂರು ಸಜ್ಜು

Pinterest LinkedIn Tumblr

kಇತಿಹಾಸ ಮತ್ತು ಪುರಾಣ ಪ್ರಸಿದ್ದ ಕರಗ ಉತ್ಸವಕ್ಕೆ ಉದ್ಯಾನನಗರಿ, ಸಿಲಿಕಾನ್ ಸಿಟಿ ಬೆಂಗಳೂರು ಸಜ್ಜುಗೊಂಡಿದೆ. ಬೆಂಗಳೂರು ಕರಗ ರಾಜ್ಯದಲ್ಲಷ್ಟೇ ಅಲ್ಲ ದೇಶದಲ್ಲೇ ಪ್ರಸಿದ್ದಿ ಪಡೆದಿದ್ದು, ದೇಶದ ನಾನಾ ಮೂಲೆಗಳಿಂದ ಭಕ್ತರು ಬೆಂಗಳೂರಿಗೆ ಧಾವಿಸಿ ಉತ್ಸವವನ್ನು ಕಣ್ತುಂಬಿಕೊಳ್ಳುತ್ತಾರೆ. ಐತಿಹಾಸಿಕ, ಪುರಾಣ ಪ್ರಸಿದ್ದ ಕರಗ ಮಹೋತ್ಸವಕ್ಕೆ ನಗರದ ತಿಗಳರಪೇಟೆ ಯಲ್ಲಿರುವ ಧರ್ಮರಾಯಸ್ವಾಮಿ ದೇವಸ್ಥಾನದಲ್ಲಿ ಸಕಲ ಸಿದ್ಧತೆ ಮಾಡಲಾಗಿದೆ. ಇಂದು ರಾತ್ರಿ ಸಕಲ ವಿಧಿವಿಧಾನಗಳೊಂದಿಗೆ ಕರಗ ಉತ್ಸವಕ್ಕೆ ಚಾಲನೆ ನೀಡಲಾಗುತ್ತದೆ. ತಿಗಳರ ಕುಟುಂಬದ ಜರಗನಹಳ್ಳಿಯ ಜನರು ಸಂಜೆ ಕರಗ ಉತ್ಸವಕ್ಕೆ ಅತ್ಯಾವಶ್ಯಕವಾಗಿರವ ಬಿದಿರಿನ ಬಂಬುಗಳನ್ನು ದೇವಸ್ಥಾನಕ್ಕೆ ತಂದು ಅವುಗಳಿಗೆ ವಿಶೇಷ ಪೂಜೆ ನೆರವೇರಿಸುವ ಮೂಲಕ ಧಾರ್ಮಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಗುತ್ತಿದೆ.

ನಂತರ ಶಕ್ತಿ ಸ್ವರೂಪಿಣಿ ದ್ರೌಪದಮ್ಮ ಹಾಗೂ ಅರ್ಜುನರ ಮೂರ್ತಿಗಳನ್ನಿಟ್ಟು ಉತ್ಸವ ನಡೆಸಲಾಗುತ್ತದೆ. ನಾಳೆ ಮುಂಜಾನೆ 4 ಗಂಟೆಗೆ ಧ್ವಜಾರೋಹಣ ನೆರವೇರಿಸವ ಮೂಲಕ ಕರಗ ಉತ್ಸವಕ್ಕೆ ವಿದ್ಯುಕ್ತ ಚಾಲನೆ ನೀಡಲಾಗುತ್ತದೆ. 11 ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಚೈತ್ರ ಶುಕ್ಲ ಸಪ್ತಮಿ ಯಿಂದ ಬಹುಳ ಬಿದಿಗೆಯವರೆಗೆ ನೆರವೇರಿಲಿದೆ. ಏಪ್ರಿಲ್ 22ರಂದು ಕರಗ ಶಕ್ಯೋತ್ಸವ ಹಾಗೂ ಶ್ರೀ ಧರ್ಮರಾಯಸ್ವಾಮಿ ಮಹಾರಥೋತ್ಸವ ನೆರವೇರಲಿದೆ. ಶಕ್ಯೋತ್ಸವದಂದು ಎಲ್ಲ ದೇವಾಲಯಗಳಲ್ಲಿ ವಿಶೇಷ ಪೂಜೆ, ಅಭಿಷೇಕ, ಮಹಾಮಂಗಳಾರತಿ ನಡೆಯಲಿದೆ.

ಅಂದು ಮುಂಜಾನೆ ಕರಗ ಶಕ್ಯೋತ್ಸವ ನಡೆಸಿಕೊಡುವ ವೀರಕುಮಾರರಿಗೆ ಅರಿಶಿನ ಬಣ್ಣದ ಸೀರೆ ಉಡಿಸಿ, ಬಳೆ ತೊಡಿಸಿ ಕಬ್ಬನ್‌ಪಾರ್ಕ್‌ನಲ್ಲಿರುವ ಕರಗದ ಕುಂಟೆಯಲ್ಲಿ ದೇವಿಗೆ ಗಂಗೆಪೂಜೆ ಮಾಡಲಾಗುತ್ತದೆ. ಅಲ್ಲಿಂದ ಹಸಿ ಕರಗವನ್ನು ಮಂಟಪಕ್ಕೆ ಕರೆತಂದು ವಿಶೇಷ ಪೂಜೆ ನೆರವೇರಿಸಿ ದೇವಾಲಯಕ್ಕೆ ಕರೆತರಲಾಗುತ್ತದೆ. ಮಧ್ಯರಾತ್ರಿ 12 ಗಂಟೆ ವೇಳೆಗೆ ದೇವಾಲಯದಿಂದ ಹೊರಡಲಿರುವ ಐತಿಹಾಸಿಕ ಕರಗ ನಗರದ ಹಲವಾರು ಪ್ರದೇಶಗಳಿಗೆ ತೆರಳಿ ಬೆಳಗಿನ ಜಾವ ವಾಪಸಾಗಲಿದೆ.

Write A Comment