ಕನ್ನಡ ವಾರ್ತೆಗಳು

ರಾಜು ಕೊಟ್ಯಾನ್ ಕೊಲೆ ಪ್ರಕರಣ : ಮೂವರು ಆರೋಪಿಗಳ ಸೆರೆ : ಇನ್ನೂ ಮೂವರಿಗಾಗಿ ಶೋಧ

Pinterest LinkedIn Tumblr

Raju-Kotyan_murder_1

ಮಂಗಳೂರು / ಉಳ್ಳಾಲ : ಮಂಗಳೂರು ನಗರದ ಉಳ್ಳಾಲ ಮೊಗವೀರಪಟ್ನದಲ್ಲಿ ದಿನಾಂಕ: 12-04-2016 ರಂದು ನಡೆದ ಮೀನುಗಾರ ರಾಜು ಕೊಟ್ಯಾನ್ ಎಂಬವರ ಕೊಲೆ ಪ್ರಕರಣದ ಆರು ಮಂದಿ ಆರೋಪಿಗಳಲ್ಲಿ ಅಪ್ರಾಪ್ತ ಬಾಲಕ ಸಹಿತಾ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಬಂಧಿತರನ್ನು ಉಳ್ಳಾಲದ ನಿವಾಸಿಗಳಾದ ಮೊಹಮ್ಮದ್ ಅಸ್ವೀರ್ ಯಾನೆ ಅಚ್ಚು (19) ಹಾಗೂ ಅಬ್ದುಲ್ ಮುತ್ತಾಲಿಪ್ ಯಾನೆ ಮುತ್ತು ( 20 ) ಎಂದು ಹೆಸರಿಸಲಾಗಿದೆ. ಇವರ ಜೊತೆ ಓರ್ವ ಅಪ್ರಾಪ್ತ ಬಾಲಕನನ್ನು ಬಂಧಿಸಲಾಗಿದೆ. ಆರೋಪಿಗಳನ್ನು ದಿನಾಂಕ 14-04-2016 ರಂದು ಮದ್ಯಾಹ್ನ 3-00 ಗಂಟೆಗೆ ಸೋಮೇಶ್ವರ ರೈಲ್ವೆ ನಿಲ್ದಾಣದ ಬಳಿ ಬಂಧಿಸಲಾಗಿದೆ ಎಂದು ಪೊಲೀಸ್ ಇಲಾಖೆ ತಮ್ಮ ಪ್ರಕಟಣೆಯಲ್ಲಿ ತಿಳಿಸಿದೆ.

ದಿನಾಂಕ 12-04-2016 ರಂದು ಬೆಳಗ್ಗಿನ ಜಾವ ಸುಮಾರು 2-40 ಗಂಟೆಯ ಸಮಯಕ್ಕೆ ಉಳ್ಳಾಲ ಮೊಗವೀರಪಟ್ನ ವಾಸಿ ರಾಜೇಶ್ ಕೊಟ್ಯಾನ್ ಯಾನೆ ರಾಜ ಎಂಬವರು ಎಂದಿನಂತೆ ತಮ್ಮ ಮನೆಯಿಂದ ಉಳ್ಳಾಲ ಕೋಟೆಪುರ ಜೆಟ್ಟಿ ಕಡೆಗೆ ಬೋಟಿನಲ್ಲಿ ಮೀನುಗಾರಿಕೆಯ ಬಗ್ಗೆ ಕೆಲಸಕ್ಕೆ ಹೋದವರನ್ನು ಯಾರೋ ದುಷ್ಕಮಿ ಗಳು ಉಳ್ಳಾಲ ಕೋಟೆಪುರ ಬರಕಾ ಓವರ್ ಸೀಸ್ ಪ್ಯಾಕ್ಟರಿಯ ಬಳಿ ಕೊಲೆ ಮಾಡಿರುತ್ತಾರೆ ಎಂದು ಮೃತರ ತಮ್ಮ ಜಗದೀಶ ಕೊಟ್ಯಾನ್ ರವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿತ್ತು.

ಕಳೆದ ಮಂಗಳವಾರದಂದು ಮೊಗವೀರಪಟ್ಣ ಕೋಟೆಪುರ ನಡುವಿನ ಬರಕಾ ಪಿಶ್‌ ಮಿಲ್‌ ಬಳಿ ಮೀನುಗಾರಿಕೆಗೆ ತೆರಳಿದ್ದ ಮೊಗವೀರಪಟ್ಣ ನಿವಾಸಿ ರಾಜ ಕೋಟ್ಯಾನ್‌ ಅವರನ್ನು ಕಲ್ಲಿನಿಂದ ಜಜ್ಜಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿತ್ತು. ಸ್ಥಳೀಯರು ಇದೊಂದು ಕೊಲೆಯಾಗಿದ್ದು ಸರಿಯಾದ ರೀತಿಯಲ್ಲಿ ತನಿಖೆ ನಡೆಸಿ ಕೊಲೆಗಾರರನ್ನು ಬಂಧಿಸಬೇಕೆಂದು ಆಗ್ರಹಿಸಿದ್ದರು.

ಬಳಿಕ ಉಳ್ಳಾಲ ಮೊಗವೀರ ಪಟ್ಣ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು. ಆರೋಪಿಗಳನ್ನು ಬಂಧಿಸುವಂತೆ ಪೊಲೀಸ್ ಠಾಣೆಗೆ ಮುತ್ತಿಗೆ ಮತ್ತು ಠಾಣೆಯೆದುರು ಮೃತದೇಹವನ್ನಿಟ್ಟು ಪ್ರತಿಭಟನೆ ನಡೆಸಲಾಗಿತ್ತು.

ಈ ಕೊಲೆ ಪ್ರಕರಣವನ್ನು ಭೇದಿಸಲು ಮಂಗಳೂರು ನಗರ ದಕ್ಷಿಣ ಉಪ-ವಿಭಾಗದ ಎ.ಸಿ.ಪಿ ಶ್ರೀ. ಕಲ್ಯಾಣ್ ಶೆಟ್ಟಿ, ಮತ್ತು ಇನ್ಸ್ ಪೆಕ್ಟರ್ ರವರಾದ ವೆಲೆಂಟೈನ್ ಡಿ’ಸೋಜ, ಅಶೋಕ್, ಪಿ, ದಿನಕರ್ ಶೆಟ್ಟಿ, ಮತ್ತು ಪಿಎಸ್ಐ ಶ್ಯಾಮಸುಂದರ್, ಭಾರತಿ, ರಾಜೇಂದ್ರ ರವರುಗಳನ್ನೊಳಗೊಂಡ ತಂಡಗಳನ್ನು ರಚಿಸಲಾಗಿತ್ತು. ಈ ಪೈಕಿ ಕೊಲೆ ಪ್ರಕರಣದಲ್ಲಿ ನೇರವಾಗಿ ಭಾಗಿಯಾಗಿದ್ದಾರೆ ಎನ್ನಲಾದ ಮೊಹಮ್ಮದ್ ಅಸ್ವೀರ್ ಯಾನೆ ಅಚ್ಚು, ಅಬ್ದುಲ್ ಮುತ್ತಾಲಿಪ್ ಯಾನೆ ಮುತ್ತು ಹಾಗೂ ಓರ್ವ ಅಪ್ರಾಪ್ತ ಬಾಲಕನನ್ನು ಬಂಧಿಸಲಾಗಿದೆ. ಈ ಕೊಲೆ ಪ್ರಕರಣದಲ್ಲಿ ಆರು ಮಂದಿಭಾಗಿಯಾಗಿರುವ ಬಗ್ಗೆ ಮಾಹಿತಿ ಲಭಿಸಿದ್ದು, ಉಳಿದ ಆರೋಪಿಗಳ ಪತ್ತೆಗಾಗಿ ಬಲೆ ಬೀಸಲಾಗಿದೆ.

ಬಂಧಿತರ ವಿರುದ್ಧ ಬೇರೆ ಪ್ರಕರಣಗಳಿಲ್ಲ :

ಸೆರೆ ಸಿಕ್ಕವರ ಹೆಸರು ಈ ಹಿಂದೆ ಯಾವುದೇ ಅಪರಾಧ ಪ್ರಕರಣಗಳಲ್ಲಿ ದಾಖಲಾಗಿಲ್ಲ, ಆದರೆ ತಲೆಮರೆಸಿ ಕೊಂಡಿರುವ ಪ್ರಮುಖ ಆರೋಪಿ ಈ ಹಿಂದೆ ಪ್ರಕರಣದಲ್ಲಿ ಭಾಗವಹಿಸಿದ್ದ ಎನ್ನಲಾಗಿದೆ. ಗಾಂಜಾ ಸೇರಿದಂತೆ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿತ್ತು ಎನ್ನಲಾಗಿದ್ದು, ಕೊಲೆಗೆ ಯಾವುದೇ ಪೂರ್ವದ್ವೇಷ ವಿಲ್ಲದಿದ್ದರೂ, ಕೋಮು ಸಾಮರಸ್ಯ ಕೆಡಿಸುವ ಉದ್ದೇಶದಿಂದ ಈ ಕೊಲೆ ನಡೆದಿದೆ ಎನ್ನಲಾಗಿದೆ.
ಸಚಿವ ಯು.ಟಿ ಖಾದರ್ ಆರೋಪಿಗಳನ್ನು ಪತ್ತೆಹಚ್ಚಿ ಶೀಘ್ರ ಬಂಧಿಸುವಂತೆ ಪೊಲೀಸ್ ಇಲಾಖೆಗೆ ಆದೇಶಿಸಿದ್ದರು

ಸಿಸಿಟಿವಿಯಲ್ಲಿ ಆರೋಪಿಗಳ ಸುಳಿವು ಪತ್ತೆ ;

ಘಟನೆಗೆ ಸಂಬಂಧಿಸಿದಂತೆ ಬರಕಾ ಫಿಶ್ ಮುಲ್ ಬಳಿ ಉಳ್ಳಾಲ ಪೊಲೀಸ್ ಠಾಣೆಯಿಂದ ಆಳವಡಿಸಲಾಗಿದ್ದ ಸಿಸಿಟಿವಿ ಮಹತ್ವದ ಪುರಾವೆ ನೀಡಿದೆ. ಘಟನೆಯ ಬಳಿಕ ೬ ಜನರ ತಂಡ ಸ್ಥಳದಿಂದ ಹೋಗುವ ದೃಶ್ಯ ದೊರೆತಿದ್ದು ಇದರ ಅಧಾರದಲ್ಲಿ ಶಂಕಿತರನ್ನು ಬಂಧಿಸಲಾಗಿದೆ.

ಎಸ್ ಐ ಭಾರತೀ ನೇತೃತ್ವದಲ್ಲಿ ಶಂಕಿತರ ವಿಚಾರಣೆ :

ಘಟನೆಯ ಬಳಿಕ ಎಸ್ ಐ ಭಾರತೀ ನೇತೃತ್ವದಲ್ಲಿ ಐವರನ್ನು ವಶಕ್ಕೆ ಪಡೆದುಕೊಳ್ಳಲಾಗಿತ್ತು. ಬಳಿಕ ವಿಶೇಷ ಪೊಲೀಸರ ತಂಡ ಸುಮಾರು ೧೫ಕ್ಕೂ ಹೆಚ್ಚು ಜನರನ್ನು ತನಿಖೆಗೆ ಒಳಪಡಿಸಿ ಕೊಲೆ ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದೆ.

Write A Comment