ಕರ್ನಾಟಕ

‘ಪನಾಮಾ ಪತ್ರ’ ದಾಖಲೆ ಪಟ್ಟಿಯಲ್ಲಿ 31 ಬೆಂಗಳೂರಿಗರು

Pinterest LinkedIn Tumblr

Vijay_Mallya

ಬೆಂಗಳೂರು: ಪನಾಮಾ ಪತ್ರ ದಾಖಲೆ ಬಹಿರಂಗವಾಗಿ ಭಾರತದ ಸಾಕಷ್ಟು ಮಂದಿ ಉದ್ಯಮಿಗಳ, ಒಂದಿಷ್ಟು ಮಂದಿ ಚಿತ್ರ ನಟ-ನಟಿಯರ, ರಾಜಕಾರಣಿಗಳ ಹೆಸರುಗಳೆಲ್ಲ ಕೇಳಿಬಂದ ಬಳಿಕ ಈಗ ಇನ್ನೊಂದು ಸ್ಪೋಟಕ ಸುದ್ದಿ ವರದಿಯಾಗಿದೆ.

ಉದ್ಯಮಿ ವಿಜಯ್ ಮಲ್ಯ ಸೇರಿದಂತೆ ಒಟ್ಟು 31 ಮಂದಿ ಬೆಂಗಳೂರಿಗರ ಹೆಸರುಗಳು ಪನಾಮಾ ಪತ್ರಗಳ ದಾಖಲೆಯಲ್ಲಿವೆ. ಅಷ್ಟೇ ಅಲ್ಲ, ವಿಜಯ್ ಮಲ್ಯ ಅವರಿಗೇ ಸೇರಿದ ಯುಬಿ ಗ್ರೂಪ್​ನ ಮಾಜಿ ಸಿಎಫ್​ಒ, ಮಾಜಿ ಎಂಡಿ, ಯುನೈಟೆಡ್ ಸ್ಪಿರಿಟ್​ನ ಮಾಜಿ ಸಿಎಫ್​ಒ ಹೆಸರುಗಳೆಲ್ಲವೂ ಪನಾಮಾ ಪತ್ರ ದಾಖಲೆಗಳಲ್ಲಿವೆ ಎಂದು ಹೇಳಲಾಗುತ್ತಿದೆ.

ವಿಜಯ್ ಮಲ್ಯ ಅವರನ್ನು ಹೊರತುಪಡಿಸಿ ಯುಬಿ ಗ್ರೂಪ್​ನ ಮೂವರು ಕಾರ್ಯನಿರ್ವಹಣಾಧಿಕಾರಿಗಳು ಪನಾಮಾದಲ್ಲಿ ಠೇವಣಿ ಖಾತೆ ಹೊಂದಿದ್ದಾರೆ ಎನ್ನಲಾಗಿದೆ. ದಾಖಲೆಗಳಲ್ಲಿರುವಂತೆ ಒಟ್ಟು 31 ಬೆಂಗಳೂರಿಗರು ದ್ವೀಪರಾಷ್ಟ್ರದಲ್ಲಿ ಹಣ ಹೂಡಿದ್ದಾರೆ ಎಂದು ಹೇಳಲಾಗುತ್ತಿದೆ. ಇವೆಲ್ಲದರ ಜತೆಗೆ ಯುಬಿ ಗ್ರೂಪ್​ನ ಮಾಜಿ ವಿತ್ತ ಅಧಿಕಾರಿ ಅಯಾನಿ ಕುರುಸ್ಸಿ ರವೀಂದ್ರನಾಥ್ ನೆಡುಂಗಡಿ, ಯುಬಿ ಹೋಲ್ಡಿಂಗ್ಸ್​ನ ಅತ್ತಿಕುಕ್ಕೆ ಹರೀಶ್ ಭಟ್ ಹಾಗೂ ಯುನೈಟೆಡ್ ಸ್ಪಿರಿಟ್​ನ ಮಾಜಿ ವಿತ್ತ ಅಧಿಕಾರಿ ಪಥೈ ಅನಂತಸುಬ್ರಹ್ಮಣಿಯನ್ ಮುರಳಿ ಹೆಸರುಗಳು ಈ ಪಟ್ಟಿಯಲ್ಲಿವೆ.

ಬಹಿರಂಗಗೊಂಡಿರುವ ದಾಖಲೆಗಳ ಪ್ರಕಾರ ಪನಾಮಾ ಮೂಲದ ಮೊಡೆಸ್ಟೋ ಗ್ರೂಪ್ ಲಿಮಿಟೆಡ್ ಕಂಪನಿಯಲ್ಲಿ ನೆಡುಂಗಡಿ ಅವರೂ 2005, ಏಪ್ರಿಲ್ 5ರಿಂದ ಷೇರುದಾರರಾಗಿದ್ದಾರೆ ಎನ್ನಲಾಗಿದೆ. ವಿಜಯ್ ಮಲ್ಯ ಅವರ ಮೇಲಿನ ಅವ್ಯವಹಾರ ತನಿಖೆ ನಡೆಯುವ ವೇಳೆ ಜಾರಿ ನಿರ್ದೇಶನಾಲಯ ನೆಡುಂಗಡಿ ಅವರನ್ನೂ ವಿಚಾರಣೆಗೊಳಪಡಿಸಿತ್ತು.

ವರದಿಯೊಂದರ ಪ್ರಕಾರ ಇನ್ನೊಂದಿಷ್ಟು ಮಹತ್ವದ ಅಂಶಗಳು ಹೀಗಿವೆ.

ಬ್ಲೇಝಿಂಗ್ ಹಾರಿಜನ್ ಲಿಮಿಟೆಡ್ ಕಂಪನಿಯಲ್ಲಿ ಹರೀಶ್ ಭಟ್ ಹಾಗೂ ಪಾಲುಗಾರ್ತಿ ಬೃಂದಾ ಭಟ್ ಅವರು ಹಣ ಹೂಡಿದ್ದಾರೆ.

ಡೈಮಂಡ್ ಡಸ್ಟ್ ಇಂಕ್ ಕಂಪನಿಯಲ್ಲಿ ಪಿಎ ಮುರಳಿ ಮತ್ತು ಪಾಲುಗಾರ್ತಿ ರುಕ್ಮಿಣಿ ಮುರಳಿ ಹಣ ಹೂಡಿದ್ದಾರೆ.

ಬಳ್ಳಾರಿಯ ಇಬ್ಬರು ಗಣಿ ಉದ್ಯಮಿಗಳ ಕುಟುಂಬಸ್ಥರು, ಬೆಂಗಳೂರಿನ ಕನ್ನಿಂಗ್​ಹ್ಯಾಂ ಮಾರ್ಗದ ನಂ-58ರಲ್ಲಿ ವಾಸವಿದ್ದು, ಅವರು ಬಟರ್​ವರ್ಥ್ ಹೋಲ್ಡಿಂಗ್ ಪ್ರಾಪರ್ಟೀಸ್, ಯಿಎಲ್ಡಿಂಗ್ ರಿಟರ್ನ್ಸ್ ಲಿಮಿಟೆಡ್, ಗೋಲ್ಡ್ ಮೆಯಾಡಾವ್ ಹೋಲ್ಡಿಂಗ್ಸ್ ಲಿಮಿಟೆಡ್ ಹಾಗೂ ಕ್ಯಾಪ್9ಬಿಜ್ ಲಿಮಿಟೆಡ್​ನಲ್ಲಿ ಹಣ ಹೂಡಿದ್ದಾರೆ.

ಉಳಿದಂತೆ ಬೇರೆ ಬೇರೆ ಕಂಪನಿಗಳಲ್ಲಿ ಒಟ್ಟು 31 ಮಂದಿ ಹಣ ಹೂಡಿದ್ದಾರೆ.
(ವಿಜಯವಾಣಿ)

Write A Comment