ಕರ್ನಾಟಕ

ಯಡಿಯೂರಪ್ಪ ಬಿಜೆಪಿ ಘಟಕಕ್ಕೆ ರಾಜ್ಯಾಧ್ಯಕ್ಷರಾಗಿ ನೇಮಕವಾದ ಬೆನ್ನಲ್ಲೇ ಆಪರೇಷನ್ ಕಮಲ ಆರಂಭ ! ಕಾಂಗ್ರೆಸ್ ನ ಯೋಗೀಶ್ವರ್, ಜೆಡಿಎಸ್ ನ ಬಾಲಕೃಷ್ಣ – ಚೆಲುವರಾಯಸ್ವಾಮಿ ಬಿಜೆಪಿ ಸೇರ್ಪಡೆ ಸಾಧ್ಯತೆ

Pinterest LinkedIn Tumblr

oparation kamala

ಬೆಂಗಳೂರು: ಕರ್ನಾಟಕ ಬಿಜೆಪಿ ಘಟಕಕ್ಕೆ ರಾಜ್ಯಾಧ್ಯಕ್ಷರಾಗಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ನೇಮಕವಾದ ಬೆನ್ನಲ್ಲೇ ಆಪರೇಷನ್ ಕಮಲ ಶುರುವಾಗಿರುವ ಮಾಹಿತಿಗಳು ಲಭ್ಯವಾಗುತ್ತಿವೆ.

ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಮಾಜಿ ಮುಖ್ಯಮಂತ್ರಿ, ಬಿಎಸ್ ಯಡಿಯೂರಪ್ಪ ಅವರು ಇಂದು ಅಧಿಕಾರ ಸ್ವೀಕಾರ ಮಾಡುತ್ತಿದ್ದು, ಇದೇ ಸಂದರ್ಭದಲ್ಲಿ ಕಾಂಗ್ರೆಸ್ 1 ಮತ್ತು ಜೆಡಿಎಸ್ ನ ಮೂವರು ಪ್ರಮುಖ ಮುಖಂಡರು ಬಿಜೆಪಿ ಸೇರ್ಪಡೆಯಾಗುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಮೂಲಗಳ ಪ್ರಕಾರ ಆಡಳಿತ ಪಕ್ಷ ಕಾಂಗ್ರೆಸ್ ನ ಚೆನ್ನಪಟ್ಟಣ ಕ್ಷೇತ್ರದ ಶಾಸಕರಾದ ಸಿಪಿ ಯೋಗೀಶ್ವರ್, ಜೆಡಿಎಸ್ ನ ಮಾಗಡಿ ಕ್ಷೇತ್ರದ ಶಾಸಕರಾದ ಬಾಲಕೃಷ್ಣ, ನಾಗಮಂಗಲ ಕ್ಷೇತ್ರದ ಶಾಸಕರಾದ ಚೆಲುವರಾಯಸ್ವಾಮಿ ಮತ್ತು ಜೆಡಿಎಸ್ ನ ಮೇಲ್ಮನೆ ಸದಸ್ಯರಾದ ಪುಟ್ಟಣ್ಣ ಅವರು ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.

ರಾಜ್ಯ ಬಿಜೆಪಿ ಘಟಕದ ಪ್ರಭಾವಿ ಮುಖಂಡರೋರ್ವರ ಮನೆಯಲ್ಲಿ ಈ ನಾಲ್ಕು ಮುಂಖಡರು ಸಭೆ ಸೇರಿದ್ದು, ಬಿಜೆಪಿ ಸೇರ್ಪಡೆಗೆ ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಕರ್ನಾಟಕ ವಿಧಾನಸಭೆ ಚುನಾವಣೆಗೆ ಇನ್ನೂ 2 ವರ್ಷಗಳಿದ್ದು, ಈಗಲೇ ಅಪರೇಷನ್ ಕಮಲದ ಅಗತ್ಯತೆ ಇದೆಯೇ ಪ್ರಶ್ನೆಗಳು ಕೂಡ ಬಿಜೆಪಿ ವಲಯದಲ್ಲಿ ಹುಟ್ಟಿಕೊಂಡಿವೆ. ಇನ್ನು ಆಡಳಿತಾ ರೂಢ ಕಾಂಗ್ರೆಸ್ ಪಕ್ಷವನ್ನು ಶತಾಯಗತಾಯ ಹಣಿಯಲು ಸಜ್ಜಾಗಿರುವ ಬಿಜೆಪಿ ಇದೇ ಕಾರಣಕ್ಕಾಗಿ ಪಕ್ಷಾಂತರ ಮೂಲಕ ಕಾಂಗ್ರೆಸ್ ಗೆ ಸೇರ್ಪಡೆಯಾಗಿರುವ ಚೆನ್ನಪಟ್ಟಣ ಶಾಸಕ ಸಿಪಿ ಯೋಗೀಶ್ವರ್ ಅವರಿಗೆ ಗಾಳ ಹಾಕಿದೆ ಎನ್ನಲಾಗುತ್ತಿದೆ. ಇನ್ನು ಜೆಡಿಎಸ್ ನಲ್ಲಿ ಭುಗಿಲೆದ್ದಿರುವ ಅಸಮಾಧಾನದಿಂದಾಗಿ ಪಕ್ಷದಿಂದ ದೂರವಾಗಿರುವ ಭಿನ್ನಮತೀಯ ಶಾಸಕರಾದ ಬಾಲಕೃಷ್ಣ, ಚೆಲುವರಾಯಸ್ವಾಮಿ ಅವರನ್ನು ಕೂಡ ಬಿಜೆಪಿಗೆ ಕರೆತರುವ ಪ್ರಯತ್ನಗಳು ಜೋರಾಗಿಯೇ ನಡೆದಿದೆ ಎಂದು ಹೇಳಲಾಗುತ್ತಿದೆ.

ಇದಲ್ಲದೆ ಜೆಡಿಎಸ್ ನ ಮೇಲ್ಮನೆ ಸದಸ್ಯ ಪುಟ್ಟಣ್ಣ ಅವರನ್ನೂ ಕೂಡ ಬಿಜೆಪಿಗೆ ಕರೆತರುವ ಪ್ರಯತ್ನಗಳು ನಡೆಯುತ್ತಿವೆ. ಇನ್ನು ಶೀಘ್ರದಲ್ಲಿಯೇ ರಾಜ್ಯ ನಾಯಕರು ಈ ನಾಯಕರ ಬಿಜೆಪಿ ಸೇರ್ಪಡೆ ಕುರಿತಂತೆ ಬಿಜೆಪಿ ಹೈಕಮಾಂಡ್ ನೊಂದಿಗೆ ಚರ್ಚಿಸಲಿದ್ದು, ಅಲ್ಲಿ ಗ್ರೀನ್ ಸಿಗ್ನಲ್ ದೊರೆತರೆ ಕೂಡಲೇ ಅವರನ್ನು ಪಕ್ಷಕ್ಕೆ ಬರ ಮಾಡಿಕೊಳ್ಳಲಾಗುತ್ತದೆ ಎಂದು ತಿಳಿದುಬಂದಿದೆ.

ಜೆಡಿಎಸ್ ನಲ್ಲಿನ ಭಿನ್ನಮತದಿಂದಾಗಿ ತೀವ್ರ ಸುದ್ದಿಗೆ ಗ್ರಾಸವಾಗಿದ್ದ ಚೆಲುವರಾಯಸ್ವಾಮಿ ಮತ್ತು ಬಾಲಕೃಷ್ಣ ಅವರು ಬಹಿರಂಗವಾಗಿಯೇ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರ ಸ್ವಾಮಿ ಅವರ ವಿರುದ್ಧ ಹೇಳಿಕೆಗಳನ್ನು ನೀಡಿದ್ದರು. ಅಲ್ಲದೆ ಕುಮಾರ ಸ್ವಾಮಿ ಅವರು ತಮ್ಮ ಕ್ಷೇತ್ರದ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದ್ದರು. ಅಲ್ಲದೆ ಕಳೆದ ಹಲವು ದಿನಗಳಿಂದ ಪಕ್ಷದ ಚಟುವಟಿಕೆಗಳಿಂದ ದೂರವಿದ್ದರು ಎಂಬ ಮಾತುಗಳು ಕೇಳಿಬಂದಿವೆ.

ಒಟ್ಟಾರೆ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿಎಸ್ ಯಡಿಯೂರಪ್ಪ ಅವರು ಅಧಿಕಾರ ಸ್ವೀಕಾರ ಮಾಡುತ್ತಿದ್ದಂತೆಯೇ ಮತ್ತೆ ಅಪರೇಷನ್ ಕಮಲದ ಮೂಲಕ ಎದುರಾಳಿ ಪಕ್ಷಗಳಿಗೆ ಬಲವಾದ ಹೊಡೆತ ನೀಡಲು ಮುಂದಾಗುತ್ತಾರೆಯೇ ಕಾದು ನೋಡಬೇಕಿದೆ.

Write A Comment