ಕನ್ನಡ ವಾರ್ತೆಗಳು

ಬಾಳಿಗ ಹತ್ಯೆ ಪ್ರಕರಣ : 3ನೇ ಆರೋಪಿ ಸೆರೆ / ನರೇಶ್ ಶೆಣೈ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ

Pinterest LinkedIn Tumblr

Baliga_Murder_arest

ಮಂಗಳೂರು: ಮಾಹಿತಿ ಹಕ್ಕು ಕಾರ್ಯಕರ್ತ ವಿನಾಯಕ ಪಿ.ಬಾಳಿಗ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಮೂರನೇ ಆರೋಪಿ ಪಂಜಿಮೊಗರು ನಿವಾಸಿ ಶಿವು (28) ಬಂಧನ ಮಾಹಿತಿ ಖಚಿತಗೊಂಡಿದೆ.

ಬಂದರು ಪೊಲೀಸ್ ನಿರೀಕ್ಷಕ ಶಾಂತರಾಮ ನೇತ್ರತ್ವದ ತಂಡ ಆರೋಪಿ ಶಿವು ( ಶಿವಪ್ರಸಾದ್ @ ಶಿವ @ ಶಿವಪ್ರಸನ್ನ (28), ತಂದೆ: ಸಂಜೀವ ಕರ್ಕೇರ, ವಾಸ: ಮಾತೃಶ್ರೀ ನಿಲಯ, ಹೋಲಿ ಕ್ರಾಸ್ ಚರ್ಚ ಬಳಿ, ಉರುಂಡಾಡಿಗುಡ್ಡೆ, ಪಂಜಿಮೊಗರು ಅಂಚೆ, ಪಡುಕೋಡಿ ಗ್ರಾಮ, ಮಂಗಳೂರು ತಾಲೂಕು.)ನನ್ನು ಉಪ್ಪಿನಂಗಡಿ ಬಸ್ ನಿಲ್ದಾಣದ ಬಳಿ ಪತ್ತೆ ಮಾಡಿ ವಶಕ್ಕೆ ಪಡೆದುಕೊಂಡು ದಸ್ತಗಿರಿ ಮಾಡಲಾಗಿದೆ ಎಂದು ಪೊಲೀಸ್ ಇಲಾಖೆ ತನ್ನ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ

ಈ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಪದವಿನಂಗಡಿ ಬಟ್ರೆಕುಮೇರು ನಿವಾಸಿ ವಿನಿತ್ ಪೂಜಾರಿ (26) ಹಾಗೂ ಶಕ್ತಿನಗರ ನಿವಾಸಿ ನಿಶಿತ್ ದೇವಾಡಿಗ (23) ನನ್ನು ಮಾ.27ರಂದು ಬಂಧಿಸಲಾಗಿತ್ತು.

ನರೇಶ್ ಶೆಣೈ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ :

ಆರ್‌ಟಿಐ ಕಾರ್ಯಕರ್ತ ವಿನಾಯಕ ಬಾಳಿಗ ಹತ್ಯೆ ಪ್ರಕರಣದ ಇನ್ನೋರ್ವ ಆರೋಪಿ ಎನ್ನಲಾದ ನಮೋ ಬ್ರಿಗೇಡ್ ಮುಖಂಡ ನರೇಶ್ ಶೆಣೈ ವಕೀಲರೊಬ್ಬರ ಮೂಲಕ ನಿರೀಕ್ಷಣಾ ಜಾಮೀನು ಕೋರಿ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ಇದಕ್ಕೆ ಆಕ್ಷೇಪ ಸಲ್ಲಿಸುವಂತೆ ನ್ಯಾಯಾಲಯವು ಸರ್ಕಾರಿ ವಕೀಲರಿಗೆ ಸೂಚಿಸಿದ್ದು, ಏ.18ರಂದು ಆಕ್ಷೇಪ ಸಲ್ಲಿಸುವ ಸಾಧ್ಯತೆ ಇದೆ. ಅಪರಾಧ ಪ್ರಕ್ರಿಯೆ ಸಂಹಿತೆ 438ರ ಅಡಿಯಲ್ಲಿ ನಿರೀಕ್ಷಣಾ ಜಾಮೀನು ಮಂಜೂರು ಮಾಡುವಂತೆ ನರೇಶ್ ಶೆಣೈ ಪರ ವಕೀಲ ಕೆ.ಎಸ್. ಶರ್ಮಾ ಅರ್ಜಿ ಸಲ್ಲಿಸಿದ್ದಾರೆ.

ಇದರಲ್ಲಿ ರಾಜ್ಯ ಸರ್ಕಾರವನ್ನು ಮೊದಲ ಪ್ರತಿವಾದಿಯಾಗಿ ಮತ್ತು ಬರ್ಕೆ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್‌ ಅವರನ್ನು 2ನೇ ಪ್ರತಿವಾದಿಯನ್ನಾಗಿ ಹೆಸರಿಸಲಾಗಿದೆ.ನ್ಯಾಯಾಲಯಕ್ಕೆ ಆಕ್ಷೇಪ ಸಲ್ಲಿಸಲು ಪೊಲೀಸರಿಂದ ವರದಿ ಕೇಳಲಾಗಿದ್ದು, ಏ.18ರ ಒಳಗೆ ವರದಿ ನೀಡಿದರೆ ಅಂದೇ ಆಕ್ಷೇಪ ಸಲ್ಲಿಸಲಾಗುವುದು. ಇಲ್ಲದಿದ್ದರೆ ಎರಡು ದಿನ ವಿಳಂಬವಾಗಬಹುದು.

ಮಾ.21ರಂದು ಮುಂಜಾನೆ 5.30ರ ಸುಮಾರಿಗೆ ಪಿವಿಎಸ್ ಕಲಾಕುಂಜಾ ಸಮೀಪ ಆರ್‌‌‌ಟಿಐ ಕಾರ್ಯಕರ್ತ ವಿನಾಯಕ ಬಾಳಿಗ ಅವರ ಹತ್ಯೆ ನಡೆದಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಳಿಕ ಶಿವು ಮತ್ತು ಶ್ರೀಕಾಂತ್ ಎಂಬಿಬ್ಬರನ್ನು ತಲೆಮರೆಸಿಕೊಂಡ ಆರೋಪಿಗಳೆಂದು ಪೊಲೀಸರು ಪೊಲೀಸ್ ಬ್ಲಾಗ್‌ನಲ್ಲಿ ಪ್ರಕಟಿಸಿದ್ದರು.

ಈ ನಡುವೆ ನಮೋ ಬ್ರಿಗೇಡ್‌ನ ನರೇಶ್ ಶೆಣೈ ಅವರು ಕೂಡ ಹತ್ಯೆಯಲ್ಲಿ ಭಾಗಿಯಾಗಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದು, ಅವರ ಮನೆಗೂ ದಾಳಿ ನಡೆಸಿದ್ದರು. ಇದೀಗ ಪೊಲೀಸರು ಶ್ರೀಕಾಂತ್ ಹಾಗೂ ನರೇಶ್ ಶೆಣೈಗಾಗಿ ಶೋಧ ಕಾರ್ಯ ಆರಂಭಿಸಿದ್ದು, ನರೇಶ್ ಶೆಣೈ ಪತ್ತೆಗೆ ಇತ್ತೀಚೆಗೆ ಲುಕ್‌ಔಟ್‌ ನೋಟಿಸ್ ಕೂಡ ಜಾರಿ ಮಾಡಲಾಗಿದೆ.

Write A Comment