ಕರ್ನಾಟಕ

ಸದಾನಂದಗೌಡರ ಗ್ರೀನ್ ಟೀಗೆ ಖರ್ಚಾಗಿದ್ದು 4 ಲಕ್ಷ ರು.: ತನಿಖೆಗೆ ಆದೇಶ

Pinterest LinkedIn Tumblr

dvs-newಬೆಂಗಳೂರು: ಕೇಂದ್ರ ಕಾನೂನು ಸಚಿವ ಡಿ.ವಿ.ಸದಾನಂದಗೌಡ ಅವರು ದೇವನಹಳ್ಳಿ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ 4 ಲಕ್ಷ ರು. ಬೆಲೆಯ ಗ್ರೀನ್ ಟೀ ಸೇವಿಸಿದ್ದಾರಂತೆ.
ವಿದೇಶಿ ಗಣ್ಯರು, ಕೇಂದ್ರ ಸಚಿವರು, ಬೇರೆ ರಾಜ್ಯದ ಸಿಎಂಗಳ ರಾಜ್ಯ ಭೇಟಿ ಸಂದರ್ಭ ಶಿಷ್ಟಾಚಾರ ಪಾಲನೆಗೆ ನಿಯೋಜಿತರಾಗುವ ರಾಜ್ಯದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಡಿಪಿಎಆರ್) ಸಿಬ್ಬಂದಿವರ್ಗ ವಿಮಾನ ನಿಲ್ದಾಣದ ಕ್ಯಾಂಟೀನ್ ಸಿಬ್ಬಂದಿಯೊಂದಿಗೆ ಶಾಮೀಲಾಗಿ ಲಕ್ಷಾಂತರ ರೂ. ಲಪಟಾಯಿಸಲು ಈ ರೀತಿ ಬಿಲ್ ನೀಡಿರುವುದು ಬಹಿರಂಗವಾಗಿದೆ.
ನಾನು ಯಾವುದೇ ತಿಂಡಿ-ತಿನಿಸು, ಪಾನೀಯ ಸೇವನೆ ಮಾಡದಿದ್ದರೂ ನನ್ನ ಹೆಸರಿನಲ್ಲಿ ಬಿಲ್‌ ಮಾಡಿರುವುದು ಗಂಭೀರ ವಿಷಯವಾಗಿದೆ. ಈ ಹಿನ್ನೆಲೆಯಲ್ಲಿ ಪ್ರಕರಣದ ಕುರಿತು ರಾಜ್ಯ ಸರ್ಕಾರ ತನಿಖೆ ನಡೆಸಬೇಕು. ಅಲ್ಲದೆ, ಇಂತಹ ಅಚಾತುರ್ಯಕ್ಕೆ ಕಾರಣರಾದವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿರುವ ಅವರು, ಮಾಡಿರುವ ಬಿಲ್‌ನ ವಿವರ ಮತ್ತು ಸಂಬಂಧಿಸಿದವರ ವಿರುದ್ಧ ಕೈಗೊಂಡಿರುವ ಕ್ರಮದ ಬಗ್ಗೆ ವರದಿ ನೀಡಬೇಕು ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.
ಪ್ರಯಾಣ ದಿನಗಳಂದು ನನ್ನ ಹೆಸರಲ್ಲಿ ಊಟ, ತಿಂಡಿ, ತಿನಿಸುಗಳಿಗಾಗಿ ಬಿಲ್‌ ಮಾಡಲಾಗಿದೆ. ದೆಹಲಿ ಸೇರಿದಂತೆ ದೇಶದ ಇತರೆ ರಾಜ್ಯಗಳ ಪ್ರವಾಸ ಕೈಗೊಂಡಾಗ ವಿಶ್ರಾಂತಿ ಕೊಠಡಿಯಲ್ಲಿ ವಿಶ್ರಾಂತಿ ಪಡೆಯಲಾಗಿದೆಯೇ ಹೊರತು ಯಾವುದೇ ರೀತಿಯ ತಿಂಡಿ, ತಿನಿಸು ಮತ್ತು ಪಾನೀಯ ಉಪಯೋಗಿಸಿಲ್ಲ ಎಂದು ಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ.
ವಿಮಾನ ನಿಲ್ದಾಣದಲ್ಲಿ ಗ್ರೀನ್ ಟೀ ಮಾತ್ರ ಸೇವಿಸುವ ಡಿ.ವಿ.ಸದಾನಂದಗೌಡರ ಹೆಸರಿನಲ್ಲಿ ಸ್ಯಾಂಡ್​ವಿಚ್, ಬರ್ಗರ್ ಮತ್ತಿತರ ತಿಂಡಿ, ತಿನಿಸು, ಪಾನೀಯಗಳ ಬಳಕೆಗಾಗಿ ದೊಡ್ಡ ಮೊತ್ತದ ಬಿಲ್ ಮಾಡಲಾಗಿತ್ತು. ಇದು ಖುದ್ದು ಸದಾನಂದಗೌಡರ ಗಮನಕ್ಕೆ ಬರುತ್ತಿದ್ದಂತೆ ರಾಜ್ಯ ಸರ್ಕಾರಕ್ಕೆ ಮಾಹಿತಿ ನೀಡಿದ್ದಾರೆ.
ಕೇಂದ್ರ ಸಚಿವರ ದೂರು ಆಧರಿಸಿ ಪರಿಶೀಲಿಸಿದಾಗ ಗಣ್ಯ ಅತಿಥಿಗಳ ಹೆಸರಿನಲ್ಲಿ ಕೆಲವೇ ದಿನಗಳ ಅವಧಿಗೆ 4 ಲಕ್ಷ ರೂ.ಗೂ ಅಧಿಕ ಬಿಲ್ ಮಾಡಿರುವುದು ಬೆಳಕಿಗೆ ಬಂದಿದೆ. ವಿಮಾನ ನಿಲ್ದಾಣದ ಕ್ಯಾಂಟೀನ್ ಸಿಬ್ಬಂದಿಯೊಂದಿಗೆ ಶಿಷ್ಟಾಚಾರ ಪಾಲನೆ ಸಿಬ್ಬಂದಿ ಶಾಮೀಲಾಗಿ ಸುಳ್ಳು ಲೆಕ್ಕದಲ್ಲಿ ಹಣ ಲಪಟಾಯಿಸುತ್ತಿರುವುದು ಮೇಲ್ನೊಟಕ್ಕೆ ಖಚಿತವಾಗಿದ್ದು ತನಿಖೆ ನಡೆಸುವಂತೆ ಡಿವಿಎಸ್ ಒತ್ತಾಯಿಸಿದ್ದಾರೆ.

Write A Comment