ಕರ್ನಾಟಕ

ಕೇರಳದ ಪಟಾಕಿ ದುರಂತದ ಹಿನ್ನಲೆಯಲ್ಲಿ ಬೆಂಗಳೂರಿನ ಪ್ರಖ್ಯಾತ ಕರಗ ಮಹೋತ್ಸವದಲ್ಲೂ ಪಟಾಕಿ ನಿಷೇಧ

Pinterest LinkedIn Tumblr

karagaಬೆಂಗಳೂರು, ಏ.11-ಕೇರಳದ ಕೊಲ್ಲಂನಲ್ಲಿ ನಿನ್ನೆ ನಡೆದ ಬೆಂಕಿ ದುರಂತದ ಹ್ನಿನೆಲೆಯಲ್ಲಿ ಬೆಂಗಳೂರಿನ ಪ್ರಖ್ಯಾತ ಕರಗ ಮಹೋತ್ಸವದಲ್ಲೂ ಈ ಬಾರಿ ಪಟಾಕಿ ಮತ್ತು ಸಿಡಿ ಮದ್ದನ್ನು ಬಳಕೆ ಮಾಡದಿರಲು ನಿರ್ಧರಿಸಲಾಗಿದೆ. ಶತಮಾನಗಳಿಂದಲೂ ನಡೆಯುತ್ತಿರುವ ಬೆಂಗಳೂರಿನ ಕರಗದಲ್ಲಿ ಪ್ರಮುಖ ಆಕರ್ಷಣೆಯೇ ಪಟಾಕಿ ಹಾಗೂ ಸಿಡಿಮದ್ದುಗಳಾಗಿವೆ. ಆದರೆ ನಿನ್ನೆ ನಡೆದ ದುರಂತದ ಹಿನ್ನೆಲೆಯಲ್ಲಿ ಇದೇ 22ರ ಮುಂಜಾನೆ ನಡೆಯಲಿರುವ ಕರಗದಲ್ಲಿ ಈ ಮುನ್ನೆಚ್ಚರಿಕೆ ಕೈಗೊಳ್ಳಲಾಗುತ್ತಿದೆ ಎಂದು ಕರಗ ಸಮಿತಿ ಹೇಳಿದೆ.

ಬಿಸಿಲಿನ ತಾಪ ಹೆಚ್ಚಳದಿಂದಾಗಿ ಸಣ್ಣಪುಟ್ಟ ಕಿಡಿಗಳಿಂದಲೂ ಆಗಬಹುದಾದ ದೊಡ್ಡ ಅನಾಹುತ ತಪ್ಪಿಸಲು ಪಟಾಕಿಯನ್ನು ನಿಷೇಧಿಸಲಾಗಿದೆ. ಯಾವುದೇ ಕಾರಣಕ್ಕೂ ಭಕ್ತರಾಗಲಿ, ಸಂಘಟನೆಗಳಾಗಲಿ ಪಟಾಕಿ ಬಳಸಬಾರದಂತೆ ಕಟ್ಟುನಿಟ್ಟಿನ ಸೂಚನೆಯನ್ನು ಕರಗ ಸಮಿತಿ ಉಪಾಧ್ಯಕ್ಷ ಹಾಗೂ ಮಾಜಿ ಮೇಯರ್ ಪಿ.ಆರ್.ರಮೇಶ್ ತಿಳಿಸಿದ್ದಾರೆ. ಪ್ರತಿವರ್ಷದಂತೆ ಈ ವರ್ಷವೂ ಇದೇ 14 ರಿಂದ 24ರವರೆಗೆ ಕರಗ ಮಹೋತ್ಸವ ಎಂದಿನ ಸಾಂಪ್ರದಾಯಿಕ ವಿಧಿ ವಿಧಾನಗಳೊಂದಿಗೆ ನಡೆಯಲಿದೆ.

ಈ ಬಾರಿ ಅರ್ಚಕ ಲಕ್ಷ್ಮೀಶ ಕರಗ ಹೊರಲಿದ್ದು, ಅದಕ್ಕೂ ಮುನ್ನ ಕಟ್ಟುನಿಟ್ಟಿನ ಉಪವಾಸ ವ್ರತವನ್ನು ಕೈಗೊಳ್ಳುವುದು ವಾಡಿಕೆ. 14 ರಂದು ರಾತ್ರಿ ಧ್ವಜಾರೋಹಣದ ಮೂಲಕ ಕರಗಕ್ಕೆ ಚಾಲನೆ ದೊರೆಯಲಿದೆ. 15 ರಿಂದ 18ರವರೆಗೆ ಗಂಗೆ ಪೂಜೆ, 19ರ ರಾತ್ರಿ ಆರತಿ ಉತ್ಸವ, 20ರ ರಾತ್ರಿ ಹಸಿ ಕರಗ, 21ಕ್ಕೆ ಪೊಂಗಲ್ ಸೇವೆ ನಡೆಯಲಿದ್ದು, 22ರ ಮುಂಜಾನೆ ಕರಗ ಮಹೋತ್ಸವ ನೆರವೇರಲಿದೆ.

Write A Comment