ತುಮಕೂರು: ಕಾಡಿನಿಂದ ದಾರಿತಪ್ಪಿ ಬಂದ ಜಿಂಕೆಯೊಂದು ಎರಡು ಗಂಟೆಗೂ ಹೆಚ್ಚು ಕಾಲ ಪ್ರಾಣ ರಕ್ಷಣೆಗಾಗಿ ಅತ್ತಿಂದಿತ್ತ, ಇತ್ತಿಂದತ್ತ ಓಡಾಡಿ ಕೊನೆಗೂ ಅರಣ್ಯ ಇಲಾಖೆ ಬೀಸಿದ ಬಲೆಗೆ ಬಿದ್ದ ಪ್ರಸಂಗ ಭಾನುವಾರ ಜಯನಗರ ಪೂರ್ವ ಬಡಾವಣೆ 7ನೇ ಕ್ರಾಸ್ ಉದ್ಯಾನದಲ್ಲಿ ನಡೆಯಿತು.
ಉದ್ಯಾನದಲ್ಲಿ ಸಂಚರಿಸುತ್ತಿದ್ದ ಜಿಂಕೆಯನ್ನು ಕಂಡ ಕೆಲ ವಾಯುವಿಹಾರಿಗಳು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ಮುಟ್ಟಿಸಿದರು. ಜಿಂಕೆ ಬಂದಿರುವ ಸುದ್ದಿ ತಿಳಿದ ಸಾರ್ವಜನಿಕರು ಕ್ಷಣ ಮಾತ್ರದಲ್ಲಿ ಗುಂಪುಗೂಡಿದರು. ಜನರ ದಂಡು ನೋಡಿ ಹೆದರಿದ ಜಿಂಕೆ, ಪ್ರಾಣ ರಕ್ಷಣೆಗಾಗಿ ಉದ್ಯಾನದ ಒಂದು ತುದಿಯಿಂದ ಮತ್ತೊಂದು ತುದಿಯತ್ತ ಓಡಾಡಿತು. ಸುತ್ತಲೂ ಫೆನ್ಸಿಂಗ್ ಹಾಕಿದ್ದ ಪರಿಣಾಮ ಹೊರ ಹೋಗಲು ಪರದಾಡಿತು.
ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕಾಗಮಿಸಿ ಜಿಂಕೆ ಹಿಡಿಯುವ ಕಾರ್ಯಾಚರಣೆ ಆರಂಭಿಸುತ್ತಿದ್ದಂತೆ ಮತ್ತಷ್ಟು ಹೆದರಿತು. ಒಂದೆರಡು ಬಾರಿ ಫೆನ್ಸಿಂಗ್ ಜಿಗಿಯಲು ಹೋಗಿ ಕೆಳಗೆ ಬಿದ್ದಿತು. ಎರಡು ಕಡೆಯಿಂದ ಬಲೆಗಳನ್ನು ಹಿಡಿದು ಇನ್ನೇನು ಸಿಕ್ಕೇಬಿಟ್ಟಿತು ಎನ್ನುವಾಗಲೇ ಚಂಗನೇ ಮೇಲೆ ಹಾರಿ ತಪ್ಪಿಸಿಕೊಳ್ಳುತ್ತಿತ್ತು. ಹೀಗೆ 2 ಗಂಟೆಗಳ ಕಾಲ ಯಾರಿಗೂ ಸಿಗದೇ ಎಲ್ಲರ ಬೆವರಿಳಿಸಿತು.
ಕಾಂಪೌಂಡ್ ಫೆನ್ಸಿಂಗ್ ದಾಟಲು ಹೋದಾಗ ಕೆಳಗೆ ಬಿದ್ದು ಬಾಯಿ ಹಾಗೂ ಕೊಂಬುಗಳಿಗೆ ಗಾಯ ಮಾಡಿಕೊಂಡಿತು. ವಲಯ ಅರಣ್ಯಾಧಿಕಾರಿ ನರಸಿಂಹಮೂರ್ತಿ, ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಸಾರ್ವಜನಿಕರು ಉದ್ದನೆಯ ಬಲೆಗಳನ್ನು ಕಾರ್ಯಾಚರಣೆಗೆ ಇಳಿದರು. ಜಿಂಕೆಯನ್ನ ಸುತ್ತುವರೆಯುತ್ತಿದ್ದಂತೆ ಜನರ ಗುಂಪಿನ ಮಧ್ಯೆ ಜಿಗಿದು ಓಡಲು ಪ್ರಯತ್ನಿಸಿದಾಗ ಜಿಂಕೆ ಬಲೆಗೆ ಬಿದ್ದಿತು. ಅರಣ್ಯ ಇಲಾಖೆ ಸಿಬ್ಬಂದಿ ಗಾಯಗೊಂಡ ಜಿಂಕೆಗೆ ಪ್ರಥಮ ಚಿಕಿತ್ಸೆ ನೀಡಿದರು.
ದೇವರಾಯನದುರ್ಗ ಅರಣ್ಯ ಪ್ರದೇಶದಿಂದ 3 ವರ್ಷದ ಜಿಂಕೆ ದಾರಿತಪ್ಪಿ ಬಂದಿದೆ. ಕಾರ್ಯಾಚರಣೆ ವೇಳೆ ಬಾಯಿ ಹಾಗೂ ಕೊಂಬಿಗೆ ಗಾಯವಾಗಿದ್ದು, ಪಶುವೈದ್ಯರ ಬಳಿ ಚಿಕಿತ್ಸೆ ಕೊಡಿಸಿ, ಕಾಡಿಗೆ ಬಿಡಲಾಗುವುದು ಎಂದು ವಲಯ ಅರಣ್ಯಾಧಿಕಾರಿ ನರಸಿಂಹಮೂರ್ತಿ ಸುದ್ದಿಗಾರರಿಗೆ ತಿಳಿಸಿದರು. ಕಾರ್ಯಾಚರಣೆ ವೀಕ್ಷಿಸಲು ಶಾಸಕ ಡಾ.ರಫೀಕ್ ಅಹಮದ್ ಸೇರಿದಂತೆ ಸಾರ್ವಜನಿಕರು ಭಾರಿ ಸಂಖ್ಯೆಯಲ್ಲಿ ಸೇರಿದ್ದರು.
ಕರ್ನಾಟಕ