ರಾಷ್ಟ್ರೀಯ

ಕೊಲ್ಲಂ ದುರಂತ: ಸಿಡಿಮದ್ದು ನಿಷೇಧಕ್ಕೆ ಹೈಕೋರ್ಟ್‌ಗೆ ಅರ್ಜಿ

Pinterest LinkedIn Tumblr

puttingal-kollamಕೊಲ್ಲಂ (ಏಜೆನ್ಸೀಸ್‌): ಕೇರಳದ ಕೊಲ್ಲಂ ಜಿಲ್ಲೆಯ ಪರವೂರ್‌ನ ಪುಟ್ಟಿಂಗಲ್‌ ದೇವಿ ದೇವಾಲಯದಲ್ಲಿ ಭಾನುವಾರ ಬೆಳಗಿನ ಜಾವ ಸಂಭವಿಸಿದ ದುರಂತಕ್ಕೆ ಕಾರಣವಾದ ಸಿಡಿಮದ್ದು ಸಿಡಿಸುವ ಆಚರಣೆಯನ್ನು ನಿಷೇಧಿಸುವಂತೆ ಕೇರಳ ಹೈಕೋರ್ಟ್‌ನ ನ್ಯಾಯಮೂರ್ತಿ ವಿ.ಚಿದಂಬರೇಶ್‌ ಹೈಕೋರ್ಟ್‌ನ ನ್ಯಾಯಪೀಠಕ್ಕೆ ಅರ್ಜಿ ಸಲ್ಲಿಸಿದ್ದಾರೆ.
ದುರಂತಕ್ಕೆ ಕಾರಣವಾದ ಸಿಡಿಮದ್ದು ಸಿಡಿಸುವ ಆಚರಣೆಯನ್ನು ನಿಷೇಧಿಸಬೇಕು ಹಾಗೂ ತಮ್ಮ ಅರ್ಜಿಯನ್ನು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಎಂದು ಪರಿಗಣಿಸಬೇಕು ಎಂದು ಚಿದಂಬರೇಶ್‌ ಅವರು ನ್ಯಾಯಪೀಠಕ್ಕೆ ಮನವಿ ಮಾಡಿದ್ದಾರೆ. ಅರ್ಜಿಯನ್ನು ಪರಿಗಣಿಸಿರುವ ನ್ಯಾಯಪೀಠ ವಿಚಾರಣೆಯನ್ನು ಮಂಗಳವಾರಕ್ಕೆ ಮುಂದೂಡಿದೆ.
ಕೇರಳ ಅಪರಾಧ ವಿಭಾಗದ ತನಿಖೆಯ ಜತೆಗೆ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಯೊಬ್ಬರ ನೇತೃತ್ವದ ನ್ಯಾಯಾಂಗ ತನಿಖೆಗೂ ರಾಜ್ಯ ಸರ್ಕಾರ ಆದೇಶಿಸಿದೆ.
ದೇವಾಲಯದ ಆಡಳಿತ ಹಾಗೂ ಸಿಡಿಮದ್ದು ಪೂರೈಕೆಯ ಪರವಾನಗಿದಾರರ ವಿರುದ್ಧ ಭಾರತೀಯ ದಂಡ ಸಂಹಿತೆಯ ಕಲಂ 307 (ಕೊಲೆ ಯತ್ನ) ಮತ್ತು 308 (ಕೊಲೆ ಯತ್ನದ ದಂಡನಾರ್ಹ ಅಪರಾಧ) ಹಾಗೂ ಸ್ಫೋಟಕ ವಸ್ತುಗಳ ಕಾಯ್ದೆಯ ಕಲಂ 4ರಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ ಎಂದು ‘ಮನೋರಮಾ ಆನ್‌ಲೈನ್‌’ ವರದಿ ಮಾಡಿದೆ.
109ಕ್ಕೇರಿದ ಸಾವಿನ ಸಂಖ್ಯೆ
ಕೊಲ್ಲಂ ದುರಂತದಲ್ಲಿ ಈವರೆಗೆ ಮೃತಪಟ್ಟವರ ಸಂಖ್ಯೆ 109ಕ್ಕೆ ಏರಿದೆ. ಕೊಲ್ಲಂನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇಬ್ಬರು ಮತ್ತು ತಿರುವನಂತಪುರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಒಬ್ಬ ವ್ಯಕ್ತಿ ಸೋಮವಾರ ಮೃತಪಟ್ಟಿದ್ದಾರೆ. ಘಟನೆಯಲ್ಲಿ 400ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಮೂರು ಕಾರುಗಳಲ್ಲಿ ಸ್ಫೋಟಕ?
ದುರಂತ ಸಂಭವಿಸಿದ ಪುಟ್ಟಿಂಗಲ್‌ ದೇವಿ ದೇವಾಲಯದ ಸಮೀಪದಲ್ಲಿ ಸೋಮವಾರ ಸ್ಫೋಟಕ ವಸ್ತು ತುಂಬಿದ್ದ ಮೂರು ಕಾರುಗಳು ಪತ್ತೆಯಾಗಿವೆ ಎಂದು ಸ್ಥಳೀಯ ದೃಶ್ಯ ಮಾಧ್ಯಮಗಳು ವರದಿ ಮಾಡಿವೆ. ಸ್ಥಳಕ್ಕೆ ಬಾಂಬ್‌ ನಿಷ್ಕ್ರಿಯ ದಳ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದೆ. ಕಾರಿನಲ್ಲಿ ಸ್ಫೋಟಕಗಳಿರುವುದನ್ನು ಈವರೆಗೆ ಪೊಲೀಸರು ಖಚಿತಪಡಿಸಿಲ್ಲ.

Write A Comment