ಕರ್ನಾಟಕ

ಇಡೀ ವ್ಯವಸ್ಥೆ ಹಾಳಾಗಿದೆ ಎಚ್.ಎಸ್. ದೊರೆಸ್ವಾಮಿ ವ್ಯಥೆ

Pinterest LinkedIn Tumblr

hs

ಬೆಂಗಳೂರು, ಏ. ೧೦- ಸಮಾಜ ಕುಲಗೆಟ್ಟಿದೆ. ಇಲ್ಲಿ ರಾಜಕೀಯ ಆರ್ಥಿಕ ಕ್ಷೇತ್ರ ಕುಲಗೆಟ್ಟಿದೆ ಎಂದು ವಿಂಗಡಿಸಿ ಹೇಳುವ ಪರಿಸ್ಥಿತಿ ಇಲ್ಲ. ಇಡೀ ವ್ಯವಸ್ಥೆಯೇ ಹಾಳಾಗಿದ್ದು, ಇದನ್ನು ವಿಚಾರಧಾರೆ ಮೂಲಕ ಸರಿಪಡಿಸುವ ಕೆಲಸವಾಗಬೇಕು.
ಯುವ ಜನತೆ ವ್ಯವಸ್ಥೆ ಬದಲಾವಣೆಗೆ ಕಂಕಣ ತೊಡಬೇಕು ಎಂದು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ಸಲಹೆ ನೀಡಿದರು.
ನಗರದ ಬನಶಂಕರಿ 2ನೇ ಹಂತದ ಜೆಎಸ್‌ಎಸ್ ಶಾಲೆಯ ಸಭಾಂಗಣದಲ್ಲಿ ನಾಡಪ್ರಭು ಕೆಂಪೇಗೌಡ ನಾಗರಿಕ ಹಿತರಕ್ಷಣಾ ವೇದಿಕೆಯಿಂದ ದೊರೆಸ್ವಾಮಿಯವರು 98ನೇ ವರ್ಷಕ್ಕೆ ಪದಾರ್ಪಣೆ ಮಾಡಿದ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಸಮಾಜದಲ್ಲಿ ಈ ಹಿಂದೆ ಬಡವ-ಬಲ್ಲಿದ ಎಂಬ ಎರಡು ವರ್ಗವಿತ್ತು. ಆದರೆ ಈಗ ಬಡತನ ರೇಖೆಗಿಂತ ಕೆಳಗಿನವರನ್ನೂ ಕಾಣಬಹುದಾಗಿದೆ.
ಶ್ರೀಮಂತರು ಶ್ರೀಮಂತರಾಗಿಯೇ ಹೋಗುತ್ತಿದ್ದಾರೆ, ಬಡವರು ಇಂದೂ ಸಹ ಒಪ್ಪತ್ತಿನ ಊಟಕ್ಕಾಗಿ ಪರದಾಡುವ ಸ್ಥಿತಿ ಕಾಣಬಹುದಾಗಿದೆ. ಇದಕ್ಕೆ ಇಲ್ಲಿಯತನಕ ಆಡಳಿತ ನಡೆಸಿದ ಸರಕಾರಗಳು, ನಾಯಕರ ಭ್ರಷ್ಟಾಚಾರ ಮತ್ತು ಮುಂದಾಲೋಚನೆ ಇಲ್ಲದ ಆಡಳಿತ ನಡೆಸಿದ್ದೇ ಕಾರಣ ಎಂದರು.
ಸಮಾಜದಲ್ಲಿ ಮೌಲ್ಯಗಳು ಕುಸಿದಿದೆ. ಯುವಕರು ಸಾಮಾಜಿಕ ಸಂಘಟನೆಗಳು ಜವಾಬ್ದಾರಿ ಅರಿತು ಮುನ್ನಡೆಯಬೇಕಿದೆ. ಭ್ರಷ್ಟಾಚಾರ ತೊಡೆದು ಹಾಕಲು ಹಾಗೂ ಬಡತನ ನಿರ್ಮೂಲನೆಗೆ ಕಟಿಬದ್ಧರಾಗಬೇಕಾಗಿದೆ. ರಾಜಕಾರಣಿಗಳ ಬಾಲನ್‌ಗೋಚುಗಳಾಗದೆ ಸ್ವಾಭಿಮಾನ, ಸ್ವತಂತ್ರ್ಯದ ಬದುಕು ರೂಪಿಸಿಕೊಂಡು ಭವ್ಯ ಭಾರತ ಕಟ್ಟಬೇಕಾಗಿದೆ. ಆ ಮೂಲಕ ಹಸಿವುಮುಕ್ತ ರಾಮರಾಜ್ಯದ ಕನಸನ್ನು ನನಸಾಗಿಸಬೇಕಾಗಿದೆ ಎಂದರು.
ಭಗವಂತ ನನಗೆ ಇನ್ನು ಒಂದೆರೆಡು ವರ್ಷ ಆಯಸ್ಸು ನೀಡಿದರೆ ರಾಜಕೀಯ ಕ್ಷೇತ್ರದಲ್ಲಿ ತಾಂಡವವಾಡುತ್ತಿರುವ ಭ್ರಷ್ಟಾಚಾರವನ್ನು ತೊಡೆದು ಹಾಕುವುದಲ್ಲದೆ ಪ್ರತೀ ಬಡವನಿಗೆ 5 ಎಕರೆ ಜಮೀನನ್ನು ಕೊಡಿಸಲು ಹೋರಾಡುವುದಾಗಿ ಅವರು ಇದೇ ಸಂದರ್ಭದಲ್ಲಿ ಹೇಳಿದರು.
ದೇಶದಲ್ಲಿ ಸ್ವಾತಂತ್ರ್ಯ ಹೋರಾಟ ಮತ್ತು ಜೆಪಿ ಚಳವಳಿ ಎರಡು ಪ್ರಮುಖ ಘಟ್ಟಗಳಾಗಿದ್ದು, ಇದೀಗ ರಾಜಕೀಯ ಹಸನುಗೊಳಿಸುವುದು ಮತ್ತು ಬಡವರಿಗೆ ಭೂಮಿ ಒದಗಿಸುವುದು 3ನೇ ಹೋರಾಟವಾಗಿ ರೂಪುಗೊಳ್ಳಬೇಕಾಗಿದೆ. ಇದೇ ಆಗಸ್ಟ್ ತಿಂಗಳಿನಿಂದ ದೇವರಾಜು ಅರಸುರವರ ಕನಸನ್ನು ನನಸಾಗಿಸಲು ಹಾಗೂ ಬಡವರಿಗೆ ನ್ಯಾಯ ಕಲ್ಪಿಸಲು ಪ್ರಬಲವಾದ ಹೋರಾಟವನ್ನು ಹಮ್ಮಿಕೊಳ್ಳುವುದಾಗಿ ಅವರು ಇದೇ ಸಂದರ್ಭದಲ್ಲಿ ಪ್ರಕಟಿಸಿದರು.
ನನಗೆ ಸಹ ಜೀವನದಲ್ಲಿ ಹಲವು ಭಾರಿ ಒಪ್ಪತ್ತಿನ ಊಟಕ್ಕೂ ಪರದಾಟ ನಡೆಸಬೇಕಾದ ಪರಿಸ್ಥಿತಿ ಬಂದಿದ್ದರೂ ಯಾರ ಬಳಿಯೂ ಕೈಚಾಚದೆ ಸ್ವಾಭಿಮಾನ ಉಳಿಸಿಕೊಂಡು ಸರಳ ರೀತಿಯ ಬದುಕು ಸಾಗಿಸುತ್ತಿರುವುದಾಗಿ ಹೇಳಿದ ದೊರೆಸ್ವಾಮಿ ಅವರು, ಯುವಕರು ಸ್ವಾಭಿಮಾನ ರೂಢಿಸಿಕೊಂಡಾಗ ಮಾತ್ರ ದೇಶದ ಉದ್ಧಾರ ಮತ್ತು ದೇಶಕ್ಕೆ ಭವಿಷ್ಯ ಇರಲು ಸಾಧ್ಯವಾಗುತ್ತದೆ ಎಂದರು.
ಮಾಜಿ ಸಭಾಪತಿ ಡಾ. ಬಿ.ಎನ್. ಶಂಕರ್ ಮಾತನಾಡಿ, ಸಮಾಜದಲ್ಲಿ ನೈತಿಕ ಮೌಲ್ಯಗಳು ಕುಸಿದಿದ್ದು, ಹಲವು ಸಮಸ್ಯೆಗಳಿಗೆ ರಾಜಕೀಯ ನಾಯಕರು ಕಾರಣರಾಗಿದ್ದರು. ಪಕ್ಷಗಳಲ್ಲಿ ಹಣ, ತೋಳ್ಬಲ, ಜಾತಿಬಲ ಇರುವವರಿಗೆ ಮಣೆ ಹಾಕುತ್ತಿದ್ದು, ಇದೊಂದು ಕೆಟ್ಟ ಸಂಪ್ರದಾಯವಾಗಿ ಸಾಮಾಜಿಕ ಅದಃಪತನಕ್ಕೆ ಕಾರಣವಾಗುತ್ತಿದೆ. ಇಂತಹ ಸಂದರ್ಭದಲ್ಲಿ ಪ್ರಾಮಾಣಿಕ ದೊರೆಸ್ವಾಮಿ ಅಂತವರು ನಮ್ಮೆದಿರುಗಿರುವುದು ನಮ್ಮೆಲ್ಲರ ಪುಣ್ಯ ಎಂದರು.
ನಾಡಪ್ರಭು ಕೆಂಪೇಗೌಡ ನಾಗರಿಕ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಎ.ಎಚ್. ಬಸವರಾಜ್ ಮಾತನಾಡಿ, ರಾಜ್ಯ, ನಗರದ ಯಾವುದೇ ಸಮಸ್ಯೆ ಉಲ್ಬಣವಾದರೂ ತಕ್ಷಣ ದನಿ ಎತ್ತಿ ಹೋರಾಡುವ ದೊರೆಸ್ವಾಮಿ ಅವರು, ನಮ್ಮಂತವರಿಗೆ ಸ್ಫೂರ್ತಿಯ ಚಿಲುಮೆಯಾಗಿದ್ದಾರೆ. ಇಂತಹ ಮಹಾನ್ ಚೇತನದ ಹುಟ್ಟುಹಬ್ಬ ಆಚರಿಸುತ್ತಿರುವುದಕ್ಕೆ ಸಂತಸವಿದೆ ಎಂದರು.
ಸಮಾರಂಭದಲ್ಲಿ ಮಾಜಿ ಸಚಿವ ಪಿ.ಜಿ.ಆರ್ ಸಿಂಧ್ಯಾ, ಶಾಸಕ ಬಿ.ಎನ್. ವಿಜಯಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ದೊರೆಸ್ವಾಮಿ ಅವರ ಹುಟ್ಟುಹಬ್ಬದ ಪ್ರಯುಕ್ತ ವೇದಿಕೆ ವತಿಯಿಂದ ಆಸ್ಪತ್ರೆವೊಂದಕ್ಕೆ ರೋಗಿಗಳ ಅನುಕೂಲಕ್ಕಾಗಿ 2 ವ್ಹೀಲ್ ಚೇರ್‌ಗಳನ್ನು ವಿತರಿಸಲಾಯಿತು.

Write A Comment