ಕರ್ನಾಟಕ

ಪ್ರಶ್ನೆಪತ್ರಿಕೆ ಸೋರಿಕೆಯ ‘ಕಿಂಗ್‌ಪಿನ್‌’ ಶಿವಕುಮಾರ್ ಈವರೆಗೆ ಐದು ಸಲ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದ…!

Pinterest LinkedIn Tumblr

shivakumar

ಬೆಂಗಳೂರು: ಪಿಯುಸಿ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ‘ಕಿಂಗ್‌ಪಿನ್’ ಎನ್ನಲಾದ ನಿವೃತ್ತ ಶಿಕ್ಷಕ ಶಿವಕುಮಾರ್ (66), ಪ್ರಶ್ನೆಗಳನ್ನು ಬಹಿರಂಗ ಮಾಡುವುದು ಮಾತ್ರವಲ್ಲದೆ ಹೆಚ್ಚು ಹಣ ಕೊಡುವ ವಿದ್ಯಾರ್ಥಿಗಳಿಗೆ ನುರಿತ ಶಿಕ್ಷಕರ ಮೂಲಕ ಪಾಠವನ್ನೂ ಮಾಡಿಸಿ ಅವರನ್ನು ತಯಾರಿ ಮಾಡುತ್ತಿದ್ದ! ಪರೀಕ್ಷಾ ಅಕ್ರಮ ಸಂಬಂಧ ಹಿಂದೆ ಶಿವಕುಮಾರ್‌ನನ್ನು ಬಂಧಿಸಿದ್ದ ಸಿಸಿಬಿ ಅಧಿಕಾರಿಗಳು ನೀಡಿದ ಮಾಹಿತಿ ಇದು.

‘2008ರಿಂದ ಈ ದಂಧೆ ಪ್ರಾರಂಭಿಸಿದ ಶಿವಕುಮಾರ್, ಈವರೆಗೆ ಐದು ಸಲ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾನೆ. ಜೈಲು ಸೇರಿದ ಒಂದೆರಡು ದಿನಗಳಲ್ಲೇ ಜಾಮೀನಿನ ಮೇಲೆ ಹೊರಬರುವ ಈತ, ಮತ್ತೆ ತನ್ನ ಕೃತ್ಯಗಳನ್ನು ಮುಂದುವರಿಸುತ್ತಾನೆ.

‘ಐಜಿಪಿ, ಎಸ್ಪಿ, ಡಿವೈಎಸ್ಪಿ ದರ್ಜೆಯ ಅಧಿಕಾರಿಗಳೂ ಈ ಹಿಂದೆ ಶಿವಕುಮಾರ್‌ನಿಂದ ಲಾಭ ಪಡೆದಿದ್ದಾರೆ. ಅವರ ಮಕ್ಕಳು ಪರೀಕ್ಷೆಯ ಹಿಂದಿನ ದಿನ ಶಿವಕುಮಾರ್‌ನ ಟ್ಯುಟೋರಿಯಲ್‌ನಲ್ಲೇ ಓದಿ ಹೆಚ್ಚು ಅಂಕ ಗಳಿಸಿರುವ ಉದಾಹರಣೆಗಳೂ ಇವೆ.

‘ಕಾಟನ್‌ಪೇಟೆಯ ಸರ್ಕಾರಿ ಶಾಲೆಯಲ್ಲಿ ಮುಖ್ಯಶಿಕ್ಷಕನಾಗಿದ್ದ ಶಿವಕುಮಾರ್, ಆರಂಭದಲ್ಲಿ ನಕಲಿ ಪ್ರಶ್ನೆಪತ್ರಿಕೆಗಳನ್ನು ಮಾರಾಟ ಮಾಡುವ ಮೂಲಕ ಅಪರಾಧ ಕೃತ್ಯಗಳನ್ನು ಪ್ರಾರಂಭಿಸಿದ್ದ. ನಂತರ ಮಗ ದಿನೇಶ್ ಹಾಗೂ ದೂರದ ಸಂಬಂಧಿ ಕಿರಣ್ ಅಲಿಯಾಸ್ ಕುಮಾರಸ್ವಾಮಿ ಜತೆ ಸೇರಿಕೊಂಡು ವ್ಯವಸ್ಥಿತ ಜಾಲವನ್ನು ಸೃಷ್ಟಿಸಿಕೊಂಡ. ಕ್ರಮೇಣ, ಹಣದ ಆಮಿಷ ಒಡ್ಡಿ ಶಿಕ್ಷಕರನ್ನೇ ಮಧ್ಯವರ್ತಿಗಳನ್ನಾಗಿ
ಮಾಡಿಕೊಂಡ’ ಎಂದು ಮಾಹಿತಿ ನೀಡಿದರು.

ಪ್ಯಾಕೇಜ್ ವ್ಯವಸ್ಥೆ: ‘ಹಣ ಕೊಡುವ ವಿದ್ಯಾರ್ಥಿಗಳಿಗೆ ಉತ್ತಮ ಅಂಕ ಬರುವಂತೆ ಮಾಡುವುದರಿಂದ ಆರಂಭಗೊಂಡು, ಪ್ರತಿಷ್ಠಿತ ಕಾಲೇಜುಗಳಲ್ಲಿ ಅವರಿಗೆ ಪ್ರವೇಶ ಕೊಡಿಸುವವರೆಗೂ ಈ ಜಾಲ ಕೆಲಸ ಮಾಡುತ್ತದೆ. ‘ಪಿಯು ಶಿಕ್ಷಣ ಇಲಾಖೆ ಸಿಬ್ಬಂದಿ ಅಥವಾ ಖಜಾನೆ ಅಧಿಕಾರಿಗಳಿಗೆ ಲಕ್ಷಗಟ್ಟಲೆ ಹಣ ಕೊಟ್ಟು ಪ್ರಶ್ನೆಪತ್ರಿಕೆ ಕದಿಯುವ ಇವರು, ಅದರಿಂದ ಕೋಟ್ಯಂತರ ರೂಪಾಯಿ ಗಳಿಸುತ್ತಾರೆ.

‘ರಾಜ್ಯದಲ್ಲಿ ಇಂಥದ್ದೊಂದು ಜಾಲ ಕಾರ್ಯ ನಿರ್ವಹಿಸುತ್ತಿರುವ ಬಗ್ಗೆ ಐದು ವರ್ಷಗಳ ಹಿಂದೆಯೇ ಸುಳಿವು ಸಿಕ್ಕಿತ್ತು. 2011ರಲ್ಲಿ ಪಿಯುಸಿ ಪ್ರಶ್ನೆಪತ್ರಿಕೆ ಸೋರಿಕೆಯಾದಾಗ ಸಿಕ್ಕಿಬಿದ್ದಿದ್ದ ಆರೋಪಿಯೊಬ್ಬ ಇಡೀ ಜಾಲದ ಕಾರ್ಯವೈಖರಿಯನ್ನು ಬಿಚ್ಚಿಟ್ಟಿದ್ದ. ಆದರೆ, ಅಗತ್ಯ ಸಾಕ್ಷ್ಯಗಳು ದೊರೆಯದ ಕಾರಣ ಈ ‘ಪ್ಯಾಕೇಜ್ ಮಾಫಿಯಾ’ವನ್ನು ಮಟ್ಟಹಾಕಲು ಆಗಿರಲಿಲ್ಲ. ಈ ಸಲ ಕೂಡ ಇದೇ ಜಾಲ ವ್ಯವಸ್ಥಿತವಾಗಿ ಸಂಚು ರೂಪಿಸಿ, ಪ್ರಶ್ನೆಪತ್ರಿಕೆ ಸೋರಿಕೆ ಮಾಡಿದೆ’ ಎಂದು ಅಧಿಕಾರಿಗಳು ಹೇಳುತ್ತಾರೆ.

ಒಂದು ಪತ್ರಿಕೆ, 15 ಕೋಟಿ!
‘ಪ್ರಶ್ನೆಪತ್ರಿಕೆಗಳನ್ನು ಖಜಾನೆಗೆ ಸಾಗಿಸುವ ಮಾರ್ಗಮಧ್ಯೆಯೇ ಶಿವಕುಮಾರ್ ತನ್ನ ಕೈಚಳಕ ತೋರುತ್ತಾನೆ. ವಾಹನದ ಚಾಲಕನಿಂದ ಹಿಡಿದು ಪರೀಕ್ಷಾ ಪ್ರಕ್ರಿಯೆಯ ಬಹುತೇಕ ಸಿಬ್ಬಂದಿಯನ್ನು ತನ್ನ ತೆಕ್ಕೆಗೆ ಹಾಕಿಕೊಂಡಿರುತ್ತಾನೆ. ಮಾರ್ಗಮಧ್ಯೆ ಕದಿಯಲು ಆಗದಿದ್ದರೆ, ಖಜಾನೆ ಅಧಿಕಾರಿಗಳಿಗೆ ಲಕ್ಷಾಂತರ ರೂಪಾಯಿ ಹಣ ಕೊಟ್ಟು ಸ್ಟ್ರಾಂಗ್ ರೂಂನಿಂದ ಪ್ರಶ್ನೆಪತ್ರಿಕೆ ಎಗರಿಸುತ್ತಾನೆ.

ನಂತರ ಶಿಕ್ಷಕರು, ಮಧ್ಯವರ್ತಿಗಳ ಮೂಲಕ ಅವುಗಳನ್ನು ಸಾವಿರಾರು ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಾನೆ. ತನಿಖಾಧಿಕಾರಿಗಳ ಅಂದಾಜಿನಂತೆ ಒಂದು ಪ್ರಶ್ನೆಪತ್ರಿಕೆ ಕದ್ದರೆ, ಅದರಿಂದ ಈತ ಸಂಪಾದಿಸುವುದು ಬರೋಬ್ಬರಿ ₹ 15 ಕೋಟಿ!

12 ಟ್ಯುಟೋರಿಯಲ್
ಎಸ್ಸೆಸ್ಸೆಲ್ಸಿ, ಪಿಯುಸಿ, ಸಿಇಟಿ, ಟಿಇಟಿ ಸೇರಿದಂತೆ ಹಲವು ಪರೀಕ್ಷೆಗಳಲ್ಲಿ ಶಿವಕುಮಾರ್ ಅಕ್ರಮಗಳ ಮೂಲಕ ತನ್ನ ಹೆಜ್ಜೆ ಗುರುತು ಮೂಡಿಸಿದ್ದಾನೆ. ಈ ಅವ್ಯವಹಾರದಿಂದ ಗಳಿಸಿದ ಹಣದಲ್ಲಿ ನಂದಿನಿಲೇಔಟ್‌ನಲ್ಲಿ ದೊಡ್ಡ ಮನೆ ಕಟ್ಟಿಸಿರುವ ಈತ, ಐದು ಐಷಾರಾಮಿ ಕಾರುಗಳನ್ನು ಖರೀದಿಸಿದ್ದಾನೆ.

ವಿದ್ಯಾರ್ಥಿಗಳು ಹಾಗೂ ಪೋಷಕರನ್ನು ಸುಲಭವಾಗಿ ಖೆಡ್ಡಾಕ್ಕೆ ಕೆಡವುವ ಉದ್ದೇಶದಿಂದ ರಾಜ್ಯದಾದ್ಯಂತ 12 ಟ್ಯುಟೋರಿಯಲ್‌ಗಳನ್ನು ಪ್ರಾರಂಭಿಸಿದ್ದಾನೆ. ತುಮಕೂರಿನಲ್ಲಿ ಈತನ ಫಾರ್ಮ್‌ಹೌಸ್ ಇದೆ. 2011ರಲ್ಲಿ ಸಿಸಿಬಿ ಪೊಲೀಸರು ಶಿವಕುಮಾರ್‌ನನ್ನು ಅಲ್ಲಿಂದಲೇ ಬಂಧಿಸಿ ನಗರಕ್ಕೆ ಕರೆತಂದಿತ್ತು.

Write A Comment