ಕರ್ನಾಟಕ

ಪ್ರಶ್ನೆಪತ್ರಿಕೆ ಸೋರಿಕೆ: ಮತ್ತಿಬ್ಬರ ಬಂಧನ; ಕಿಂಗ್‌ಪಿನ್ ಮನೆಯಲ್ಲಿ ಜೆರಾಕ್ಸ್‌ ಯಂತ್ರ ಪತ್ತೆ!

Pinterest LinkedIn Tumblr

crime

ಬೆಂಗಳೂರು: ಪಿಯುಸಿ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಮತ್ತಿಬ್ಬರು ದೈಹಿಕ ಶಿಕ್ಷಣ ಶಿಕ್ಷಕರು ಸಿಐಡಿ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ. ಈ ಮೂಲಕ ಬಂಧಿತರ ಸಂಖ್ಯೆ ಐದಕ್ಕೆ ಏರಿದೆ.

‘ಇಲ್ಲಿನ ಪ್ಯಾಲೇಸ್‌ ಗುಟ್ಟಹಳ್ಳಿಯ ಸರ್ಕಾರಿ ಪ್ರೌಢಶಾಲೆಯ ಸತೀಶ್ ಹಾಗೂ ಸದಾಶಿವನಗರದ ಪೂರ್ಣಪ್ರಜ್ಞಾ ಶಾಲೆಯ ಅನಿಲ್‌ ಕುಮಾರ್ ಬಂಧಿತರು. ಆರೋಪಿ ಮಂಜುನಾಥ್‌ಗೆ ಹಣ ಕೊಟ್ಟು ರಸಾಯನ ವಿಜ್ಞಾನ ಪ್ರಶ್ನೆಪತ್ರಿಕೆ ಪಡೆದಿದ್ದ ಇವರು, ಅದನ್ನು ಹಲವು ವಿದ್ಯಾರ್ಥಿಗಳಿಗೆ ಮಾರಾಟ ಮಾಡಿ ಸುಮಾರು ₹ 6 ಲಕ್ಷ ಸಂಗ್ರಹಿಸಿದ್ದಾರೆ’ ಎಂದು ಸಿಐಡಿ ಡಿಐಜಿ ಸೋನಿಯಾ ನಾರಂಗ್ ತಿಳಿಸಿದರು.

ಪಾತ್ರ ಖಚಿತ: ವಾಟ್ಸ್‌ಆ್ಯಪ್ ಮೂಲಕ ಪ್ರಶ್ನೆಪತ್ರಿಕೆ ಪಡೆದ ಕೆಲ ವಿದ್ಯಾರ್ಥಿಗಳು ನೀಡಿದ್ದ ಸುಳಿವಿನಿಂದ ಸಿಐಡಿ ಅಧಿಕಾರಿಗಳು ಮಾರ್ಚ್‌ 29ರ ರಾತ್ರಿಯೇ ಸತೀಶ್ ಸೇರಿದಂತೆ ಐದು ಮಂದಿಯನ್ನು ವಶಕ್ಕೆ ಪಡೆದಿದ್ದರು. ನಂತರ ವಿಚಾರಣೆ ವೇಳೆ ಲಭ್ಯವಾದ ಮಾಹಿತಿ ಆಧರಿಸಿ ಮಂಜುನಾಥ್‌ ಅವರನ್ನು ಬಂಧಿಸಿದ್ದರು.

‘ಆರಂಭದಲ್ಲಿ ಸತೀಶ್‌ ಪಾತ್ರ ಖಚಿತವಾಗಿರಲಿಲ್ಲ. ಆದರೆ ಮಂಜುನಾಥ್, ಸಚಿವ ಶರಣಪ್ರಕಾಶ ಪಾಟೀಲರ ವಿಶೇಷ ಅಧಿಕಾರಿ ಓಬಳರಾಜು ಹಾಗೂ ಲೋಕೋಪಯೋಗಿ ಇಲಾಖೆ ಕಚೇರಿ ಅಧೀಕ್ಷಕ ರುದ್ರಪ್ಪ ಅವರನ್ನು ಕಸ್ಟಡಿಗೆ ಪಡೆದು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಯಿತು. ಆಗ ಸತೀಶ್ ಹಾಗೂ ಅನಿಲ್‌ನ ಹೆಸರುಗಳನ್ನು ಮಂಜುನಾಥ್‌ ಬಹಿರಂಗಪಡಿಸಿದ್ದಾಗಿ’ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

‘ಪ್ರಕರಣದ ಕಿಂಗ್‌ಪಿನ್‌ಗಳು ಎನ್ನಲಾದ ಅಪ್ಪ– ಮಗ ಶಿವಕುಮಾರ್, ಮತ್ತು ದಿನೇಶ್ ಹಾಗೂ ಎಲ್‌ಐಸಿ ಏಜೆಂಟ್ ಕಿರಣ್‌ ಜತೆ ಮಂಜುನಾಥ್‌ಗೆ ನಿಕಟ ಸಂಪರ್ಕ ಇತ್ತು. ಅವರಿಂದ ಪಡೆದ ಪ್ರಶ್ನೆಪತ್ರಿಕೆಯನ್ನು ₹ 1.5 ಲಕ್ಷಕ್ಕೆ ಸತೀಶ್ ಹಾಗೂ ಅನಿಲ್‌ಗೆ ಅವರು ಮಾರಾಟ ಮಾಡಿದ್ದರು. ಇವರಿಬ್ಬರೂ ಅದನ್ನು ಪರಿಚಿತ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ಮಾರಿದ್ದರು’ ಎಂದು ಹೇಳಲಾಗಿದೆ.

ಕ್ರೀಡಾಕೂಟದಲ್ಲಿ ಪರಿಚಯ: ಮಂಜುನಾಥ್, ಸತೀಶ್ ಹಾಗೂ ಅನಿಲ್ ಮೂವರು ದೈಹಿಕ ಶಿಕ್ಷಣ ಶಿಕ್ಷಕರು. 2014ರಲ್ಲಿ ಬೆಂಗಳೂರಿನಲ್ಲಿ ನಡೆದ ವಾರ್ಷಿಕ ಕ್ರೀಡಾಕೂಟದಲ್ಲಿ ಪರಿಚಿತರಾಗಿದ್ದರು. ಬ್ಯಾಂಕ್ ಖಾತೆಗೆ ಹಣ ಹಾಕಿಸಿಕೊಂಡರೆ ಸಿಕ್ಕಿ ಬೀಳಬಹುದೆಂದು ಅನಿಲ್ ಹಾಗೂ ಸತೀಶ್ ಅವರು, ವಿದ್ಯಾರ್ಥಿಗಳ ಪೋಷಕರು–ಶಿಕ್ಷಕರಿಂದ ನಗದು ರೂಪದಲ್ಲಿ ಹಣ ಪಡೆದಿದ್ದರು. ಈ ಇಬ್ಬರಿಗೂ ಕಿಂಗ್‌ಪಿನ್‌ಗಳ ಜತೆ ನೇರ ಸಂಪರ್ಕ ಇಲ್ಲ. ಮಂಜುನಾಥ್‌ ನಿರ್ದೇಶನದಂತೆ ಕೆಲಸ ಮಾಡುತ್ತಿದ್ದರು ಎನ್ನುವ ಮಾಹಿತಿ ಸಿಐಡಿಗೆ ಸಿಕ್ಕಿದೆ.

‘ಈ ಜಾಲವು ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಬಳ್ಳಾರಿ ಸೇರಿದಂತೆ ರಾಜ್ಯದಾದ್ಯಂತ ವಿಸ್ತರಿಸಿದೆ. ಸದ್ಯ ಮಂಜುನಾಥ್‌ ಅವರ ಬ್ಯಾಂಕ್‌ ಖಾತೆ ಸ್ಥಗಿತಗೊಳಿಸಲಾಗಿದೆ. ಬಂಧಿತರಲ್ಲಿ ಪ್ರೌಢಶಾಲೆಯ ಶಿಕ್ಷಕರ ಸಂಖ್ಯೆಯೇ ಹೆಚ್ಚಿರುವ ಕಾರಣ ಇವರು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲೂ ಅಕ್ರಮ ನಡೆಸಿದ್ದರೇ ಎಂಬ ಅನುಮಾನ ವ್ಯಕ್ತವಾಗಿದೆ. ಬಂಧಿತರನ್ನು ಗುರುವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು’ ಎಂದು ಅಧಿಕಾರಿಗಳು ಹೇಳಿದರು.

ದಾಖಲೆಗಳು ಜಪ್ತಿ: ನಂದಿನಿಲೇಔಟ್‌ ಸಮೀಪದ ಕಂಠೀರವ ನಗರದಲ್ಲಿರುವ ಶಿವಕುಮಾರ್‌ ಮನೆ ಮೇಲೆ ಬುಧವಾರ ದಾಳಿ ನಡೆಸಿದ ಸಿಐಡಿ ಅಧಿಕಾರಿಗಳು, ಸಿ.ಸಿ ಟಿ.ವಿ ಕ್ಯಾಮೆರಾ, ಜೆರಾಕ್ಸ್‌ ಯಂತ್ರ, ಹಿಂದಿನ ವರ್ಷಗಳ ಪ್ರಶ್ನೆಪತ್ರಿಕೆಗಳು, ಈ ಸಲದ ರಸಾಯನ ವಿಜ್ಞಾನ ಪ್ರಶ್ನೆಪತ್ರಿಕೆಯ ಪ್ರತಿಗಳು ಸೇರಿದಂತೆ ಕೆಲ ಮಹತ್ವದ ದಾಖಲೆಗಳನ್ನು ಜಪ್ತಿ ಮಾಡಿದ್ದಾರೆ.

ಎಂಟು ವರ್ಷಗಳಿಂದ ಪರೀಕ್ಷಾ ಅಕ್ರಮದಲ್ಲಿ ತೊಡಗಿರುವ ಶಿವಕುಮಾರ್ ಹಾಗೂ ಅವರ ಮಗ ದಿನೇಶ್, ಹತ್ತು ದಿನಗಳಿಂದ ನಾಪತ್ತೆಯಾಗಿದ್ದಾರೆ. ಬುಧವಾರ ಮಧ್ಯಾಹ್ನ ಅಧಿಕಾರಿಗಳ ತಂಡ ಬೀಗ ಮುರಿದು ಮನೆ ಪ್ರವೇಶಿಸಿದೆ. ‘ಸಿ.ಸಿ ಟಿ.ವಿ ಕ್ಯಾಮೆರಾದಲ್ಲಿ ಅಪ್ಪ–ಮಗನ ಚಲನವಲನಗಳು ದಾಖಲಾಗಿವೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬಂಧಿತರ ಮಕ್ಕಳ ಉತ್ತರಪತ್ರಿಕೆ ಪರಿಶೀಲನೆಗೆ ನಿರ್ಧಾರ
ಬೆಂಗಳೂರು:ರಸಾಯನ ವಿಜ್ಞಾನ ಮಾತ್ರವಲ್ಲದೆ ಉಳಿದೆಲ್ಲ ವಿಷಯಗಳ ಪ್ರಶ್ನೆಪತ್ರಿಕೆ ಸೋರಿಕೆ ಸಾಧ್ಯತೆ ಬಗ್ಗೆ ತನಿಖೆ ಪ್ರಾರಂಭಿಸಿರುವ ಸಿಐಡಿ, ಪ್ರಕರಣದಲ್ಲಿ ಬಂಧಿತರಾಗಿರುವ ಓಬಳರಾಜು ಹಾಗೂ ರುದ್ರಪ್ಪ ಅವರ ಮಕ್ಕಳ ಎಲ್ಲ ಉತ್ತರ ಪತ್ರಿಕೆಗಳನ್ನು ಪರಿಶೀಲಿಸಲು ಮುಂದಾಗಿದೆ.

ಅವರ ಉತ್ತರ ಪತ್ರಿಕೆಗಳನ್ನು ತನಿಖಾಧಿಕಾರಿಗಳಿಗೆ ಒಪ್ಪಿಸುವಂತೆ ಡಿಐಜಿ ಸೋನಿಯಾ ನಾರಂಗ್ ಅವರು ಪಿಯು ಶಿಕ್ಷಣ ಇಲಾಖೆಗೆ ಪತ್ರ ಬರೆದಿದ್ದಾರೆ ಎಂದು ತಿಳಿದು ಬಂದಿದೆ.

‘ಆಂತರಿಕ–ಪೂರ್ವಭಾವಿ ಪರೀಕ್ಷೆಗಳಲ್ಲಿ ಆರೋಪಿಗಳ ಮಕ್ಕಳು ಗಳಿಸಿರುವ ಅಂಕಗಳು ಹಾಗೂ ಅಂತಿಮ ಪರೀಕ್ಷೆಯಲ್ಲಿ ಅವರ ಸಾಧನೆಯನ್ನು ಹೋಲಿಕೆ ಮಾಡಲಾಗುವುದು. ರಸಾಯನ ವಿಜ್ಞಾನ ಪ್ರಶ್ನೆಪತ್ರಿಕೆಯು ಪರೀಕ್ಷೆಗೂ ಮೊದಲೇ ಅವರಿಗೆ ಸಿಕ್ಕಿದ್ದರಿಂದ ಚೆನ್ನಾಗಿಯೇ ಪರೀಕ್ಷೆ ಬರೆದಿರುತ್ತಾರೆ. ಅದೇ ನಿಟ್ಟಿನಲ್ಲಿ ಇತರೆ ವಿಷಯಗಳ ಉತ್ತರ ಪತ್ರಿಕೆಗಳನ್ನೂ ಪರಿಶೀಲಿಸಲಾಗುವುದು’ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಮಂಜುನಾಥ್ ಪತ್ನಿ ನಾಪತ್ತೆ: ‘ಮಲ್ಲೇಶ್ವರ 18ನೇ ಅಡ್ಡರಸ್ತೆಯ ಸರ್ಕಾರಿ ಕಾಲೇಜಿನ ವಾಣಿಜ್ಯ ವಿಭಾಗದ ಉಪನ್ಯಾಸಕಿಯಾಗಿರುವ ಮಂಜುನಾಥ್‌ ಪತ್ನಿ ಲೀಲಾವತಿ ಅವರ ಮೊಬೈಲ್ ಸ್ವಿಚ್ ಆಫ್ ಆಗಿದೆ. ಅವರ ವೇತನಕ್ಕೂ, ಬ್ಯಾಂಕ್ ಖಾತೆಯ ವಹಿವಾಟಿಗೂ ಭಾರಿ ಅಂತರ ಕಂಡು ಬಂದಿರುವ ಕಾರಣ ಲೀಲಾವತಿ ಅವರನ್ನು ವಿಚಾರಣೆಗೆ ಒಳಪಡಿಸಬೇಕಿದೆ’ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.

‘ಲೀಲಾವತಿ ಅವರ ಸೇವೆ ಮತ್ತು ವೇತನದ ವಿವರಗಳನ್ನು ಸಿಐಡಿಗೆ ನೀಡಲಾಗಿದೆ. ಈ ಸಲದ ಪರೀಕ್ಷಾ ಕೆಲಸಕ್ಕೆ ಅವರನ್ನು ನಿಯೋಜಿಸಿರಲಿಲ್ಲ’ ಎಂದು ಪಿಯು ಶಿಕ್ಷಣ ಇಲಾಖೆ ನಿರ್ದೇಶಕ ರಾಮೇಗೌಡ ತಿಳಿಸಿದರು.

ಜಿಲ್ಲಾಧಿಕಾರಿಗಳಿಗೆ ಪತ್ರ: ಪ್ರಶ್ನೆಪತ್ರಿಕೆಯ ಬಂಡಲ್‌ಗಳು ಯಾವ ಸಮಯಕ್ಕೆ ತಮ್ಮ ಜಿಲ್ಲೆಗೆ ಬಂದವು, ಸಹಿ ಮಾಡಿ ಅವುಗಳನ್ನು ಪಡೆದವರು ಯಾರು, ಯಾವ ಸಮಯಕ್ಕೆ ಖಜಾನೆಯಲ್ಲಿ ಇಡಲಾಯಿತು, ಭದ್ರತೆಯ ಹೊಣೆ ಹೊತ್ತಿದ್ದವರು ಯಾರು, ಪರೀಕ್ಷಾ ದಿನ (ಮಾರ್ಚ್‌ 21) ಯಾವ ರೀತಿ ಅವುಗಳನ್ನು ಪರೀಕ್ಷಾ ಕೊಠಡಿಗೆ ಕೊಂಡೊಯ್ಯಲಾಯಿತು ಎಂಬ ಬಗ್ಗೆ ವರದಿ ಕೊಡುವಂತೆ ಎಲ್ಲ ಜಿಲ್ಲಾಧಿಕಾರಿಗಳಿಗೂ ಸಿಐಡಿ ಪತ್ರ ಬರೆದಿದೆ.

ಆರೋಪಿ ಪತ್ನಿಯ ಕೈಬರಹ?: 2ನೇ ಸಲ ಸೋರಿಕೆಯಾದ ಪ್ರಶ್ನೆಪತ್ರಿಕೆಯ ಕೈಬರಹ ಮಹಿಳೆಯರದು ಎಂಬ ಶಂಕೆ ವ್ಯಕ್ತವಾಗಿತ್ತು.ಇದು ಬಂಧಿತ ಆರೋಪಿ ಮಂಜುನಾಥ್‌ ಅವರ ಪತ್ನಿ ಲೀಲಾವತಿ ಅವರ ಕೈಬರಹ ಇರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ.

Write A Comment