ಕನ್ನಡ ವಾರ್ತೆಗಳು

ಬಾಳಿಗ ಮರ್ಡರ್ ಕೇಸ್ : ಯುವ ಬ್ರಿಗೇಡ್‌ನ ನರೇಶ್ ಶೆಣೈಗೆ ಲುಕ್ಔಟ್’ ನೋಟಿಸ್ ಜಾರಿ..?

Pinterest LinkedIn Tumblr

Baliga_naresh_shenoy

ಮಂಗಳೂರು: ಮಾಹಿತಿ ಹಕ್ಕು ಕಾರ್ಯಕರ್ತ ವಿನಾಯಕ ಪಾಂಡುರಂಗ ಬಾಳಿಗ ಅವರ ಹತ್ಯೆ ಪ್ರಕರಣದಲ್ಲಿ ಯುವ ಬ್ರಿಗೇಡ್ ಮುಖಂಡ ನರೇಶ್ ಶೆಣೈ ಅವರ ಪಾತ್ರ ಇರುವ ಬಗ್ಗೆ ಶಂಕೆ ವ್ಯಕ್ತಪಡಿಸುತ್ತಿರುವ ಪೊಲೀಸರು ಇದೀಗ ನರೇಶ್ ಶೆಣೈ ಅವರು ಎಲ್ಲಿಯೂ ಪತ್ತೆಯಾಗದ ಕಾರಣ ‘ಲುಕ್ಔಟ್’ ನೋಟಿಸ್ ಜಾರಿಗೊಳಿಸಿದ್ದಾರೆ ಎಂದು ತಿಳಿದು ಬಂದಿದೆ.

ಬಾಳಿಗ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ವಿಚಾರಣೆಗೆ ಬೇಕಾಗಿರುವ ಯುವ ಬ್ರಿಗೇಡ್ ಮುಖಂಡ ನರೇಶ್ ಶೆಣೈ ನಾಪತ್ತೆಯಾಗಿರುವ ಹಿನ್ನೆಲೆಯಲ್ಲಿ ಅವರ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್‌ ಕೂಡ‌‌ ಹೊರಡಿಸಲಾಗಿದೆ ಎಂಬ ಮಾಹಿತಿ ಮೂಲಗಳಿಂದ ಲಭ್ಯವಾಗಿದೆ.

ಇದೀಗ ನರೇಶ್ ಶೆಣೈ ಪತ್ತೆಗೆ ದೇಶದ ಪ್ರಮುಖ ನಗರ ಹಾಗೂ ವಿಮಾನ ನಿಲ್ದಾಣಗಳಿಗೆ ಲುಕ್ಔಟ್ ನೋಟಿಸ್ ಜಾರಿಗೊಳಿಸಲಾಗಿದೆ. ಇದರಿಂದ ನರೇಶ್ ಶೆಣೈ ವಿದೇಶಕ್ಕೆ ಪರಾರಿಯಾಗುವುದನ್ನು ತಡೆಯುವ ಪ್ರಯತ್ನ ಮಾಡಲಾಗಿದೆ ಎನ್ನಲಾಗಿದೆ.

ಪೊಲೀಸ್ ಮೂಲಗಳ ಪ್ರಕಾರ, ನರೇಶ್ ಶೆಣೈ ವಿದೇಶಕ್ಕೆ ಪರಾರಿಯಾಗಿರುವ ಸಾಧ್ಯತೆ ಇಲ್ಲ. ದೇಶದಲ್ಲೇ ಇದ್ದಾರೆ. ಪೊಲೀಸ್ ತಂಡ ಈಗಾಗಲೇ ಕಾರ್ಯಾಚರಣೆ ಆರಂಭಿಸಿದ್ದು, 5 ತಂಡಗಳು ಅಂತಾರಾಜ್ಯ ಪೊಲೀಸರ ನೆರವಿನಲ್ಲಿ ನಾನಾ ಕಡೆಗಳಲ್ಲಿ ಕಾರ್ಯಾಚರಣೆ ನಡೆಸುತ್ತಿದೆ.

ಈ ನಡುವೆ ನರೇಶ್ ಶೆಣೈ ಪರವಾಗಿ ಹೈಕೋರ್ಟ್‌ನಲ್ಲಿ ಮಂಗಳವಾರವೇ ನಿರೀಕ್ಷಣಾ ಜಾಮೀನು ಪಡೆಯುವ ಪ್ರಯತ್ನ ನಡೆಸಿದ್ದಾರೆ. ನರೇಶ್ ಶೆಣೈ ಹಾಗೂ ಅವರ ಸಹಚರ ಶ್ರೀಕಾಂತ್‌ನನ್ನು ಬಂಧಿಸಲಾಗಿದೆ ಎಂಬ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಕಳೆದೆರಡು ದಿನಗಳಿಂದ ವದಂತಿಗಳು ಹಬ್ಬಿದೆ.

ಈ ಎಲ್ಲಾ ವದಂತಿಗಳ ಬಗ್ಗೆ ಮಾಹಿತಿಯನ್ನು ದೃಡೀಕರಿಸಲು ಉನ್ನತ ಪೊಲೀಸ್ ಅಧಿಕಾರಿಗಳು ಲಭ್ಯವಾಗಿಲ್ಲ.

Write A Comment