ಕನ್ನಡ ವಾರ್ತೆಗಳು

ಇಲೆಕ್ಷನ್ ಸಂದರ್ಭ ಇನ್ನೂ ಮದ್ಯ ಸಿಕ್ಕಲ್ಲ; ಎಣ್ಣೆ ಹೊಡೆದು ಕಿರಿಕ್ ಮಾಡಿದ್ರೆ ಜೈಲು ವಾಸ ತಪ್ಪಲ್ಲ

Pinterest LinkedIn Tumblr

ಉಡುಪಿ: ಚುನಾವಣೆ ಬಂತೆಂದರೇ ಸಾಕು ಹಣ-ಹೆಂಡ ಸಿಗುತ್ತದೆ ಎಂಬ ಕಾತುರ ಅದೆಷ್ಟೋ ಮಂದಿಯದ್ದು. ಆದರೇ ಇನ್ನು ಚುನಾವಣೆ ಸಂದರ್ಭ ಹೆಂಡದ ಆಸೆಯನ್ನು ಮದ್ಯಪ್ರಿಯರು ಬಿಟ್ಟುಬಿಡಬೇಕು. ಅಲ್ಲದೇ ಕುಡಿದು ಸಮಸ್ಯೆ, ರಂಪ-ರಾದ್ಧಾಂತ ಮಾಡಿದ್ರೆ ಜೈಲು ಸೇರೋದು ಗ್ಯಾರೆಂಟಿ. ಚುನಾವಣೆ ಸಂದರ್ಭ ಆ ವ್ಯಾಪ್ತಿಯ ಬಾರ್ ಹಾಗೂ ವೈನ್ ಶಾಪ್ ದಿನಗಟ್ಟಲೇ ಮುಚ್ಚಲೇಬೇಕು.. ಯಾಕೇ ಗೊತ್ತಾ ಈ ವರದಿ ಓದಿ.

download-horz

(ಸಾಂದರ್ಭಿಕ ಚಿತ್ರ)

ಕಾಯ್ದೆಗೆ ತಿದ್ದುಪಡಿ…
ಸರಕಾರ ಕರ್ನಾಟಕ ಪಂಚಾಯತ್‌ರಾಜ್ ಅಧಿನಿಯಮ 1993ಕ್ಕೆ ತಿದ್ದುಪಡಿ ಮಾಡಿ ರಾಜ್ಯಪತ್ರದಲ್ಲಿ ಪ್ರಕಟಿಸಿದೆ. ಮೊದಲು 308 ಅಧಿನಿಯಮವಿದ್ದು ಅದಕ್ಕೆ ತಿದ್ದುಪಡಿ ತಂದು 308-ಸಿ ಎಂಬುದಾಗಿ ಮಾರ್ಪಾಟು ಮಾಡಲಾಗಿದೆ. ಪಂಚಾಯತ್ ರಾಜ್ ಕಾಯ್ದೆಗೆ ತಿದ್ದುಪಡಿ ತರಲು ರಮೇಶ್ ಕುಮಾರ್ ವರದಿಯ ಶಿಪಾರಸ್ಸು ಕಾರಣವಾಗುಗಿದೆ. ಇವರ ವರದಿ ಶಿಪಾರಸ್ಸಿನಂತೆ ಇತ್ತೀಚೆಗೆ ವಿಧಾನಮಂಡಲದಲ್ಲಿ ಮಂಡನೆಯಾಗಿರುವಂತಹ ಪಂಚಾಯತ್ ರಾಜ್ ತಿದ್ದುಪಡಿ-2016ರ ಆಧಾರದಲ್ಲಿ ಕಾಯ್ದೆ 308ಕ್ಕೆ ತಿದ್ದುಪಡಿ ತಂದು ಅದನ್ನು 308-ಸಿ ಎಂದು ನಿಯುಕ್ತಿಗೊಳಿಸಿ ಈ ಹೊಸ ನಿಯಮಗಳನ್ನು ಅಳವಡಿಸಿಕೊಳ್ಳಲಾಗಿದೆ.

ಬಾರು, ವೈನ್ ಶಾಪ್ ಬಂದ್..!
ಚುನಾವಣೆಯ ಅಧಿಸೂಚನೆ ಹೊರಬಿದ್ದ ದಿನಾಂಕದಿಂದ ಮೊದಲ್ಘೊಂಡು ಚುನಾವಣೆಯ ಎಲ್ಲಾ ಪ್ರಕ್ರಿಯೆಗಳು ಮುಗಿಯುವವರೆಗೂ ಕೂಡ ಅಂದರೇ ನೀತಿ ಸಂಹಿತೆ ಜಾರಿಯಲ್ಲಿರುವ ಅಷ್ಟೂ ದಿನಗಳಲ್ಲಿ ಆಯಾ ಪ್ರದೇಶಗಳ ವ್ಯಾಪ್ತಿಗೆ ಒಳಪಡುವ ಬಾರ್, ವೈನ್ ಶಾಪ್ ಹಾಗೂ ದಾಸ್ತಾನು ಕೊಠಡಿಗಳಿಗೆ ಬೀಗಮುದ್ರೆ ಹಾಕಿ ಆ ಕೀಲಿಕೈಗಳನ್ನು ಜಿಲ್ಲಾ ಮ್ಯಾಜಿಸ್ಟೆಟರ್ ಸುಪರ್ದಿಗೆ ನೀಡಬೇಕು. ಅಲ್ಲದೇ ನೀತಿ ಸಂಹಿತೆ ಇರುವ ವ್ಯಾಪ್ತಿಯಲ್ಲಿ ಮದ್ಯ ತಯಾರಿಕ ಘಟಕಗಳಿದ್ದರೇ ಅದನ್ನು ನಿಲ್ಲಿಸಬೇಕು ಎಂದು ವರದಿ ಹೇಳುತ್ತದೆ.

‘ಎಣ್ಣೆ’ ಕುಡಿದು ಕಿರಿಕ್ ಮಾಡಿದ್ರೇ ಜೈಲು…
ಯಾವ ಪಂಚಾಯತ್ ಪ್ರದೇಶದಲ್ಲಿ ನೀತಿಸಂಹಿತೆ ಜಾರಿಯಲ್ಲಿರುತ್ತದೋ ಆ ಪಂಚಾಯತ್ ಪ್ರದೇಶ ದೊಳಗೆ ನೀತಿಸಂಹಿತೆ ಜಾರಿಯಲ್ಲಿರುವಷ್ಟು ಅವಧಿ ಮದ್ಯ ಸೇವಿಸುವಂತಿಲ್ಲ.ಒಂದೊಮ್ಮೆ ಪಕ್ಕದೂರಲ್ಲಿ ಕುಡಿದು ಬಂದು ಕಿರಿಕ್ ಮಾಡಿದರೂ ನೀತಿ ಸಂಹಿತೆ ಮುಗಿಯುವವರೆಗೆ ಕಸ್ಟಡಿಯಲ್ಲಿರಬೇಕಾಗುತ್ತದೆ. ಸದ್ಯ ಗ್ರಾಮಪಂಚಾಯತ್ ಉಪಚುನಾವಣೆ ನಡೇಯುತ್ತಿರುವ ಕಾರಣ ಚುನಾವಣೆ ನಡೆಯುವ ಆಯಾಯ ಪಂಚಾಯತ್ ವ್ಯಾಪ್ತಿಯ ಬಾರುಗಳು, ಮದ್ಯದ ಅಂಗಡಿಗಳನ್ನು ಏ.4ರಿಂದ ಬಂದ್ ಮಾಡಿ ಮೊಹರು ಹಾಕಲಾಗಿದೆ.

ಈ ಹಿಂದೆಲ್ಲಾ ಚುನಾವಣೆ ನಡೆಯುವ ಮತ್ತು ಮತ ಎಣಿಕೆ ದಿನಗಳಂದು ಮಾತ್ರ ಮದ್ಯ ನಿಷೇಧವಿತ್ತು. ಈಗ ನೀತಿ ಸಂಹಿತೆ ಇರುವ ಅಷ್ಟೂ ದಿನಗಳೂ ಇರುತ್ತವೆ. ಇದು ಸದ್ಯ ಪಂಚಾಯತ್‌ರಾಜ್ ಕಾಯಿದೆಗೆ ಆದ ತಿದ್ದುಪಡಿಯಾದ ಕಾರಣ ಎಲ್ಲ ಜಿ.ಪಂ., ತಾ.ಪಂ., ಗ್ರಾ.ಪಂ. ಚುನಾವಣೆಗೆ ಈ ಕಾನೂನು ಅನ್ವಯವಾಗಲಿದೆ. ಇದು ಮುಂದಿನ ದಿನಗಳಲ್ಲಿ ಎಲ್ಲ ಚುನಾವಣೆಗೂ ಇದೇ ನೀತಿ ಸಂಹಿತೆ ಬಂದರೇ ಸಮಸ್ಯೆ ಗ್ಯಾರೆಂಟಿ ಅನ್ನುತ್ತಾರೆ ಮದ್ಯಪ್ರಿಯರು.

Write A Comment