ಕರ್ನಾಟಕ

ನಿವೃತ್ತ ಐಪಿಎಸ್ ಅಧಿಕಾರಿ ಬಿಪಿನ್ ಗೋಪಾಲಕೃಷ್ಣ ನಿಧನ

Pinterest LinkedIn Tumblr

Bipin gopalakrishna

ಬೆಂಗಳೂರು: ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ನಿವೃತ್ತ ಐಪಿಎಸ್ ಅಧಿಕಾರಿ ಬಿಪಿನ್ ಗೋಪಾಲಕೃಷ್ಣ ಅವರು ಗುರುವಾರ ನಿಧನರಾಗಿದ್ದಾರೆ.

ಹಲವು ದಿನಗಳಿಂದ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದ ಬಿಪಿನ್ ಗೋಪಾಲಕೃಷ್ಣ ಅವರು ನಗರದ ಮಲ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ನಿನ್ನೆ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆಂದು ತಿಳಿದುಬಂದಿದೆ.

ಬಿಪಿನ್ ಗೋಪಾಲಕೃಷ್ಣ ಅವರು 1980ರ ಐಪಿಎಸ್ ಬ್ಯಾಚ್ ನ ಅಧಿಕಾರಿಯಾಗಿದ್ದರು. ಮೂಲತಃ ಆಂಧ್ರಪ್ರದೇಶದ ನೆಲ್ಲೂರಿನವರಾದ ಬಿಪಿನ್ ಗೋಪಾಲಕೃಷ್ಣ (63) ಅವರು 1982ರಲ್ಲಿ ಐಪಿಎಸ್ ಪರೀಕ್ಷೆ ಪಾಸು ಮಾಡಿ ಕರ್ನಾಟಕದಲ್ಲಿ ಸೇವೆ ಆರಂಭಿಸಿದ್ದರು. 2015ರ ಜುಲೈನಲ್ಲಿ ಸೇವೆಯಿಂದ ನಿವೃತ್ತರಾಗಿದ್ದರು.

ಉಡುಪಿ, ಚಿಕ್ಕಮಗಳೂರು, ಕಲಬುರಗಿ, ಮೈಸೂರು ಜಿಲ್ಲೆಗಳಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಬಿಪಿನ್ ಗೋಪಾಲಕೃಷ್ಣ ಅವರು ಸೇವೆ ಸಲ್ಲಿಸಿದ್ದರು. ಮೈಸೂರು ನಗರದ ಪೊಲೀಸ್ ಆಯುಕ್ತರಾಗಿ, ಬೆಂಗಳೂರು ನಗರದ ಹೆಚ್ಚುವರಿ ಪೊಲೀಸ್ ಆಯುಕ್ತರಾಗಿ (ಕಾನೂನು ಮತ್ತು ಸುವ್ಯವಸ್ಥೆ), ಸಿಐಡಿ ಡಿಜಿಪಿಯಾಗಿ ಕಾರ್ಯ ನಿರ್ವಹಿಸಿದ್ದರು.

ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಐಜಿಪಿಯಾಗಿ, ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿಯಾಗಿ ಸೇವೆ ಸಲ್ಲಿಸಿದ್ದರು. 2000 ಹಾಗೂ 2006ರಲ್ಲಿ ಗೋಪಾಲಕೃಷ್ಣ ಅವರಿಗೆ ರಾಷ್ಟ್ರಪತಿಗಳ ಪೊಲೀಸ್ ಪದಕ ಲಭಿಸಿತ್ತು. ರಾಜ್ಯದ ಡಿಜಿ, ಐಜಿಪಿ ಹುದ್ದೆಗೆ ಸುಶಾಂತ್ ಮಹಾಪಾತ್ರ, ಆರ್.ಕೆ. ದತ್ತ ಅವರ ಹೆಸರಿನ ಜೊತೆ ಬಿಪಿನ್‌ ಗೋಪಾಲಕೃಷ್ಣ ಹೆಸರು ಕೇಳಿಬಂದಿತ್ತು. ಅಂತಿಮವಾಗಿ ಓಂ ಪ್ರಕಾಶ್ ಅವರು ಡಿಜಿ, ಐಜಿಪಿಯಾಗಿ ನೇಮಕವಾಗಿದ್ದರು.

Write A Comment