ಕರ್ನಾಟಕ

ಹಗಲೆಲ್ಲಾ ಗಂಡಸರಾಗಿದ್ದು, ರಾತ್ರಿಯಾಗುತ್ತಿದ್ದಂತೆಯೇ ಮಂಗಳಮುಖಿಯರ ವೇಷ ಧರಿಸಿ ಅಮಾಯಕ ಜನರ ಸುಲಿಗೆ ! ನಾಲ್ಕು ಮಂದಿ ಖದೀಮರನ್ನು ಬಂಧಿಸಿದ ಬೆಂಗಳೂರು ಪೊಲೀಸರು

Pinterest LinkedIn Tumblr

hij

ಬೆಂಗಳೂರು: ಹಗಲೆಲ್ಲಾ ಗಂಡಸರಾಗಿದ್ದು, ರಾತ್ರಿಯಾಗುತ್ತಿದ್ದಂತೆಯೇ ಮಂಗಳಮುಖಿಯರ ವೇಷ ಧರಿಸಿ ಅಮಾಯಕ ಜನರನ್ನು ಸುಲಿಗೆ ಮಾಡುತ್ತಿದ್ದ ನಾಲ್ಕು ಮಂದಿ ಖದೀಮರನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಬೆಂಗಳೂರಿನ ರಾಜಗೋಪಾಲನಗರದ ಅಂಬಿ ಸರ್ಕಲ್ ನಿವಾಸಿ ದಿನೇಶ್ ಅಲಿಯಾಸ್ ಸ್ವೀಟಿ (22), ಟಿ.ದಾಸರಹಳ್ಳಿಯ ಬೈರೇಗೌಡ ಅಲಿಯಾಸ್ ಗಿರಿಜಾ (45), ಮಧು ಅಲಿಯಾಸ್ ಪ್ರಕೃತಿ (20) ಮತ್ತು ರವಿ ಅಲಿಯಾಸ್ ಶಿವಾನಿ (29) ಎಂದು ಗುರುತಿಸಲಾಗಿದೆ. ಬಂಧಿತರಿಂದ ಪೊಲೀಸರು ಸುಮಾರು 1.12 ಲಕ್ಷ ರು. ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಬಂಧಿತ ವ್ಯಕ್ತಿ ಬೈರೇಗೌಡನಿಗೆ ಮದುವೆಯಾಗಿದ್ದು, ಪತ್ನಿ ಮತ್ತು ಮಕ್ಕಳಿದ್ದಾರೆ.

ಅಚ್ಚರಿ ಎಂದರೆ ಬಂದಿತರು ಕಳೆದ ಮೂರು ವರ್ಷಗಳಿಂದ ಈ ದಂಧೆಯಲ್ಲಿ ತೊಡಗಿದ್ದು, ಅವರ ಕುಟುಂಬಸ್ಥರಿಗೆ ಈ ವಿಚಾರವೇ ತಿಳಿದಿಲ್ಲ. ಪೀಣ್ಯ ಸಮೀಪದ ಸಿದ್ಧ ಉಡುಪು ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಬೈರೇಗೌಡ 3 ವರ್ಷದ ಹಿಂದೆ ಕೆಲಸ ಬಿಟ್ಟಿದ್ದ. ಆದರೆ, ನಿತ್ಯ ಕೆಲಸಕ್ಕೆ ಹೋಗುವುದಾಗಿ ಹೇಳಿ ಮನೆಯಿಂದ ಹೊರಬರುತ್ತಿದ್ದ. ಆದರೆ ಬೈರೇಗೌಡ ಸೀರೆಯುಟ್ಟು ಮಂಗಳಮುಖಿಯಂತೆ ವರ್ತಿಸುತ್ತ ಸಿಗ್ನಲ್‌ಗಳಲ್ಲಿ ಭಿಕ್ಷೆ ಬೇಡುತ್ತಿದ್ದ. ಇದೇ ವೇಳೆ ಪರಿಚಿತರಾದ ಮಧು, ದಿನೇಶ್ ಹಾಗೂ ರವಿಯನ್ನೂ ಇದೇ ಕೆಲಸಕ್ಕೆ ಪುಸಲಾಯಿಸಿದ್ದ. ಹಗಲಿನಲ್ಲಿ ಗಂಡಸರಂತೆ ಮನೆಯಲ್ಲೇ ಇರುತ್ತಿದ್ದ ಆರೋಪಿಗಳು, ಸಂಜೆಯಾಗುತ್ತಿದ್ದಂತೆ ಕೆಲಸಕ್ಕೆ ಹೋಗುವುದಾಗಿ ಮನೆಯಿಂದ ಹೊರಬಿದ್ದು, ತೃತೀಯಲಿಂಗಿಗಳ ವೇಷ ಧರಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಅಂತೆಯೇ ಬಂಧಿತರು 3 ವರ್ಷಗಳಿಂದ ಈ ಕೆಲಸ ಮಾಡುತ್ತಿದ್ದರಾದರೂ ಯಾವುದೇ ಅಪರಾಧ ಚಟುವಟಿಕೆಗಳಲ್ಲಿ ಪಾಲ್ಗೊಂಡಿರಲಿಲ್ಲ. ಆದರೆ, ಮಾರ್ಚ್ 6ರ ರಾತ್ರಿ 7.45ಕ್ಕೆ ಬೈಕ್‌ನಲ್ಲಿ ಹೋಗುತ್ತಿದ್ದ ಬಾಲಾಜಿ ಲೇಔಟ್‌ನ ಉದ್ಯಮಿ ಬಿ.ಕೆ.ನಾರಾಯಣ್‌ನನ್ನು ಜಾಲಹಳ್ಳಿ ಎಂಇಎಸ್ ರೈಲ್ವೆಗೇಟ್ ಸಮೀಪ ಅಡ್ಡಗಟ್ಟಿದ್ದ ಆರೋಪಿಗಳು ಬೆದರಿಸಿ ಆತನ ಬಳಿಯಿದ್ದ 54 ಸಾವಿರ ನಗದು, 2 ಚಿನ್ನದ ಸರ ಹಾಗೂ 7 ಉಂಗುರವನ್ನು ಸುಲಿಗೆ ಮಾಡಿದ್ದರು.

ಈ ಬಗ್ಗೆ ಜಾಲಹಳ್ಳಿ ಠಾಣೆಗೆ ನಾರಾಯಣ್ ದೂರು ನೀಡಿದ್ದರು. ಜಾಲಹಳ್ಳಿ ಸುತ್ತಮುತ್ತಲಿರುವ ಮಂಗಳಮುಖಿಯರ ಪತ್ತೆಹಚ್ಚಿ ವಿಚಾರಿಸಿದಾಗ ಆರೋಪಿಗಳು ಸಿಕ್ಕಿಬಿದ್ದರು. 3 ವರ್ಷಗಳಿಂದ ಗೌಪ್ಯವಾಗಿ ನಡೆಯುತ್ತಿದ್ದ ಈ ‘ಡಬಲ್ ರೋಲ್’ ರಹಸ್ಯ ಉದ್ಯಮಿ ದರೋಡೆ ಪ್ರಕರಣದಲ್ಲಿ ಪೊಲೀಸರ ಕೈಗೆ ಸಿಕ್ಕಿಬೀಳುವ ಮೂಲಕ ಬಯಲಾಗಿದೆ.

ಮೊಬೈಲ್ ಸಂಪರ್ಕದಿಂದ ಆರೋಪಿಗಳ ಅಸಲೀಯತ್ತು ಪತ್ತೆ
ಪೊಲೀಸರು ಜಾಲಹಳ್ಳಿ ಹಾಗೂ ಪೀಣ್ಯ ಸುತ್ತಮುತ್ತಲಲ್ಲಿ ಓಡಾಡುವ ಮಂಗಳಮುಖಿಯರನ್ನು ಪತ್ತೆಹಚ್ಚಿದ್ದರು. ಪ್ರತಿಯೊಬ್ಬರನ್ನೂ ಭೇಟಿ ಮಾಡಿ ತೃತೀಯ ಲಿಂಗಿಗಳಿಗೆ ಸರ್ಕಾರ ಹೊಸ ಯೋಜನೆ ಜಾರಿಗೆ ತರುತ್ತಿದೆ. ಹೀಗಾಗಿ ಮಾಹಿತಿ ಸಲ್ಲಿಸಬೇಕಿದೆ ಎಂದು ಹೇಳಿ ಹೆಸರು, ವಿಳಾಸ ಹಾಗೂ ಮೊಬೈಲ್ ನಂಬರ್ ಪಡೆದಿದ್ದರು. ನಂಬರ್ ಪರಿಶೀಲಿಸಿದಾಗ ಬೈರೇಗೌಡನ ಮೊಬೈಲ್ ದರೋಡೆ ನಡೆದ ಎಂಇಎಸ್ ರೈಲ್ವೆಗೇಟ್ ಬಳಿಯ ಟವರ್‌ನಿಂದ ಸಂಪರ್ಕ ಪಡೆದಿರುವುದು ಗೊತ್ತಾಯಿತು. ಆತನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಸತ್ಯ ಹೇಳಿದ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ಬಂಧಿ ತ ನಾಲ್ವರೂ ಮಂಗಳಮುಖಿಯರಲ್ಲ ಎಂಬುದು ತನಿಖೆಯಲ್ಲಿ ಗೊತ್ತಾಗಿದೆ. ಸುಲಭವಾಗಿ ಹಣ ಗಳಿಸುವ ಉದ್ದೇಶದಿಂದ ಈ ದಾರಿ ಹಿಡಿದಿದ್ದರು. ಉದ್ಯಮಿ ಬಿ.ಕೆ.ನಾರಾಯಣ್ ಅಸಭ್ಯವಾಗಿ ವರ್ತಿಸಿ, ಹಣ ಕೊಡಲು ನಿರಾಕರಿಸಿದ್ದರಿಂದ ಸುಲಿಗೆ ಮಾಡಿದ್ದಾಗಿ ಆರೋಪಿಗಳು ಹೇಳಿಕೆ ನೀಡಿದ್ದಾರೆ. ಬಂಧಿತರ ವಿರುದ್ಧ ಈ ಹಿಂದೆ ಯಾವುದೇ ಅಪರಾಧಗಳಲ್ಲಿ ಭಾಗಿಯಾಗಿರುವ ಮಾಹಿತಿ ಲಭ್ಯವಾಗಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

Write A Comment