ಕರ್ನಾಟಕ

ಪೊಲೀಸ್ ಠಾಣೆಗಳು ಜನಸ್ನೇಹಿಯಾಗಿ ಕಾರ್ಯ ನಿರ್ವಹಿಸಲಿ: ಪರಮೇಶ್ವರ್

Pinterest LinkedIn Tumblr

paraಬೆಂಗಳೂರು,ಏ.1-ಪೊಲೀಸ್ ಠಾಣೆಗಳು ಜನಸ್ನೇಹಿ ಕೇಂದ್ರಗಳಾಗಿ ಕಾರ್ಯ ನಿರ್ವಹಿಸಬೇಕೆಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಇಂದಿಲ್ಲಿ ತಿಳಿಸಿದರು. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಹಯೋಗದೊಂದಿಗೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಆಯೋಜಿಸಿದ್ದ ಶಾಲೆ ಕಡೆ ನನ್ನ ನಡೆ ಎಂಬ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಾಲೆಗೆ ಸೇರಿಸುವ ಜನಾಂದೋಲನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಪೊಲೀಸ್ ಠಾಣೆಗಳು ಜನರ ಸಮಸ್ಯೆಗಳಿಗೆ ಸ್ಪಂದಿಸುವಂತಾಗಬೇಕು. ಇಂದಿಗೂ ಲಕ್ಷಾಂತರ ಮಕ್ಕಳಿಗೆ ಶಾಲಿಗೆ ಹೋಗುವ ಅವಕಾಶವೇ ಸಿಕ್ಕಿಲ್ಲ. ಅಂಥ ಮಕ್ಕಳಿಗೆ ಈ ಆಂದೋಲನ ಸಹಕಾರಿಯಾಗಲಿವೆ ಎಂದರು.

ರಾಜ್ಯದಲ್ಲಿ ಕೇವಲ ಒಂಭತ್ತು ಸಾವಿರ ಮಕ್ಕಳು ಮಾತ್ರ ಶಾಲೆಯಿಂದ ಹೊರಗುಳಿದಿಲ್ಲ. ಬಹಳಷ್ಟು ಜನರಿಗೆ ಶಿಕ್ಷಣದ ಹತ್ತಿರಕ್ಕೂ ಹೋಗಲು ಸಾಧ್ಯವಾಗಿಲ್ಲ ಎಂದು ವಿಷಾದಿಸಿದರು.ದೇಶದಲ್ಲಿ ಶೇ.78ರಷ್ಟು ಸಾಕ್ಷರಸ್ಥರು ಇದ್ದಾರೆ. ಫ್ರಾನ್ಸ್‌ನಲ್ಲಿ ಮಕ್ಕಳನ್ನು ಶಾಲೆಗೆ ಕಳುಹಿಸಿದ್ದರೆ ತಂದೆತಾಯಿಯನ್ನು ಜೈಲಿಗೆ ಕಳಿಸುವಂತಹ ಕಾನೂನು ಇದೆ. ಕಡ್ಡಾಯ ಶಿಕ್ಷಣ ಜಾರಿಗೆ ತರಲು ಪರಿಣಾಮಕಾರಿ ಪ್ರಯತ್ನ ನಡೆಯುತ್ತಿದೆ. ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದಾಗ, ಮರಳಿ ಬಾ ಶಾಲೆಗೆ, ಬಿಸಿಯೂಟ ಜಾರಿಗೆ ತರಲಾಗಿತ್ತು. ಇದರಿಂದ ಲಕ್ಷಾಂತರ ಮಕ್ಕಳು ಶಾಲೆಗೆ ಬರುವಂತಾಯಿತು ಎಂದರು.

ಈಗ ಜನರಲ್ಲಿ ಜಾಗೃತಿ ಮೂಡಿದ್ದು, ಕೂಲಿ ಮಾಡುವವರು ಸಹ ಮಕ್ಕಳನ್ನು ಶಾಲೆಗೆ ಕಳುಹಿಸುವ ಮನಸ್ಸು ಮಾಡಿದ್ದಾರೆ. ಹೂವು ಮಾರುವ ಮಹಿಳೆಯ ಮಗ ಐಎಎಸ್ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ ಎಂದ ಅವರು, ಶಾಲೆ ಕಡೆ ನನ್ನ ನಡೆ ಆಂದೋಲನವು ಪರಿಣಾಮಕಾರಿಯಾಗಲಿದೆ ಎಂದು ಹೇಳಿದರು. ದೇಶದ ಜನಸಂಖ್ಯೆಯಲ್ಲಿ ಶೇ.31ರಷ್ಟು ಮಂದಿ 18 ವರ್ಷದೊಳಗಿನವರಾಗಿದ್ದಾರೆ. ಅದರಲ್ಲಿ 10 ವರ್ಷದೊಳಗಿನ ಮಕ್ಕಳು ಶೇ.52ರಷ್ಟಿದ್ದಾರೆ ಎಂದರು. ಇದೇ ವೇಳೆ ಶಾಲೆಗೆ ಹೋಗದ ಹೆಣ್ಣು ಮಗಳನ್ನು ವೇದಿಕೆ ಮೇಲೆ ಕರೆತಂದು ನೀನು ಕೂಡ ನನ್ನಂತೆಯೇ ಭಾಷಣ ಮಾಡಬೇಕು, ನೀನು ಶಾಲೆಗೆ ಹೋಗಿ ವಿದ್ಯಾವಂತಳಾಗಬೇಕು ಎಂದರು.

ಸಚಿವೆ ಉಮಾಶ್ರೀ ಮಾತನಾಡಿ, ಹುಟ್ಟಿನಿಂದಲೇ ಮಕ್ಕಳ ರಕ್ಷಣೆಯಾಗಬೇಕು. ಶಾಲೆ ಬಿಟ್ಟ ಮಕ್ಕಳನ್ನು ಶಾಲೆಗೆ ಕರೆತರಲು ಸರ್ಕಾರ ಕಾರ್ಯಕ್ರಮ ಕೈಗೊಂಡಿದೆ. ಬಾಲ್ಯ ವಿವಾಹ ಅಮಾನವೀಯವಾದದು, ಅದನ್ನು ತಡೆಗಟ್ಟಲು ಎಲ್ಲರೂ ಸಹಕರಿಸಬೇಕು, ವಿದೇಶದಂತೆ ಮಕ್ಕಳನ್ನು ಶಾಲೆಗೆ ಕಳುಹಿಸದ ಪೋಷಕರನ್ನು ನಮ್ಮಲ್ಲೂ ಜೈಲಿಗೆ ಹಾಕಬೇಕು ಎಂದರು. ರಾಜ್ಯ ಮಕ್ಕಳ ರಕ್ಷಣಾ ಆಯೋಗದ ಅಧ್ಯಕ್ಷೆ ಡಾ.ಕೃಪಾ ಅಮರ್ ಆಳ್ವ ಮಾತನಾಡಿ, ಜಗತ್ತಿನಲ್ಲೇ ಭಾರತದಲ್ಲಿ ಉತ್ತಮ ಮಾನವ ಸಂಪನ್ಮೂಲವಿದೆ. ದೇಶ ಸೂಪರ್ ಪವರ್ ಆಗಬೇಕಾದರೆ ಪ್ರತಿಯೊಬ್ಬರಿಗೂ ಶಿಕ್ಷಣ ದೊರೆಯುವಂತಾಗಬೇಕು ಎಂದು ಹೇಳಿದರು.

ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ ಫೆಲೋ ನಿರಂಜನ್ ಆರಾಧ್ಯ ಮಾತನಾಡಿದರು. ವಾರ್ತಾ ಸಚಿವ ರೋಷಣ್ ಬೇಗ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್, ನಿರ್ದೇಶಕ ವಿಜಯಕುಮಾರ್, ಮಕ್ಕಳ ಹಕ್ಕು ರಕ್ಷಣಾ ಆಯೋಗದ ಸದಸ್ಯರಾದ ಅಪರ್ಣಾ ಕೊಳ, ಆನಂದ್.ವಿ ಲೋಗೋ, ಮರಿಸ್ವಾಮಿ ಮುಂತಾದವರು ಭಾಗವಹಿಸಿದ್ದರು.

Write A Comment