ಕರ್ನಾಟಕ

ಸಿದ್ದರಾಮಯ್ಯ ಕಾರ್ಯವೈಖರಿ ವಿರುದ್ಧ ಕಾಂಗ್ರೆಸ್‌ ಹೈಕಮಾಂಡ್‌ಗೆ ದೂರು ನೀಡಿದ ಕೃಷ್ಣ

Pinterest LinkedIn Tumblr

smkrishna

ನವದೆಹಲಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರ್ಯವೈಖರಿಯಿಂದಾಗಿ ರಾಜ್ಯ ಸರ್ಕಾರದ ವರ್ಚಸ್ಸಿಗೆ ಧಕ್ಕೆಯಾಗುತ್ತಿದ್ದು, ತಕ್ಷಣ ಮಧ್ಯಪ್ರವೇಶಿಸಿ ಪರಿಸ್ಥಿತಿ ಸರಿಪಡಿಸದಿದ್ದರೆ ಪಕ್ಷ ಭಾರಿ ಬೆಲೆ ತೆರಬೇಕಾಗಬಹುದು ಎಂದು ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಕಾಂಗ್ರೆಸ್‌ ಹೈಕಮಾಂಡ್‌ಗೆ ದೂರಿದ್ದಾರೆ.

ಎರಡು ದಿನಗಳಿಂದ ದೆಹಲಿಯಲ್ಲೇ ಇದ್ದ ಕೃಷ್ಣ ಮಂಗಳವಾರ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿ ದೂರು ಸಲ್ಲಿಸಿದರು.

ಭ್ರಷ್ಟಾಚಾರ ದೂರುಗಳ ವಿಚಾರಣೆ ನಡೆಸುತ್ತಿರುವ ಲೋಕಾಯುಕ್ತ ಸಂಸ್ಥೆ ಅಧಿಕಾರ ಮೊಟಕುಗೊಳಿಸಲು ಸಿದ್ದರಾಮಯ್ಯನವರು ನಡೆಸಿರುವ ಪ್ರಯತ್ನದ ವಿರುದ್ಧ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಸಾರ್ವಜನಿಕರು ಮತ್ತು ವಿವಿಧ ನಾಗರಿಕ ಸಂಘಟನೆಗಳು ಪ್ರತಿಭಟನೆಗೆ ಮುಂದಾಗಿವೆ ಎಂದು ಕೃಷ್ಣ ಹೈಕಮಾಂಡ್‌ ನಾಯಕರಿಗೆ ಹೇಳಿದ್ದಾರೆ.

ಸೋನಿಯಾ ಹಾಗೂ ರಾಹುಲ್‌ ಅವರನ್ನು ಕೃಷ್ಣ ರಹಸ್ಯವಾಗಿ ಭೇಟಿ ಮಾಡಿದ್ದರು. ಲೋಕಾಯುಕ್ತ ಸಂಸ್ಥೆಯನ್ನು ದುರ್ಬಲಗೊಳಿಸಲು ಹೊರಟಿರುವ ಸಿದ್ದರಾಮಯ್ಯ ಅವರ ನಡವಳಿಕೆ ಕೆಲವು ಕಾಂಗ್ರೆಸ್‌ ನಾಯಕರಿಗೂ ಅಸಮಾಧಾನ ಉಂಟುಮಾಡಿದೆ ಎಂದು ಅವರು ದೂರಿರುವುದಾಗಿ ಮೂಲಗಳು ತಿಳಿಸಿವೆ.

ರಾಜ್ಯದಲ್ಲಿ ಭೀಕರ ಬರಗಾಲವಿದೆ. ಇದರಿಂದ ರೈತರು ತೀವ್ರ ಸಂಕಷ್ಟಕ್ಕೊಳಗಾಗಿದ್ದಾರೆ. ಆದರೆ, ಸರ್ಕಾರ ಪರಿಸ್ಥಿತಿ ನಿಭಾಯಿಸಲು ವಿಫಲವಾಗಿದೆ. ಸಿದ್ದರಾಮಯ್ಯನವರ ನಾಯಕತ್ವ ಪಕ್ಷದ ಅನೇಕ ಶಾಸಕರಿಗೆ ಅಸಮಾಧಾನ ತಂದಿದೆ. ರಾಜ್ಯ ಸರ್ಕಾರ ಸೃಷ್ಟಿಸಿರುವ ವಿವಾದಗಳಿಂದ ಆಗಿರುವ ಹಾನಿ ಸರಿಪಡಿಸದಿದ್ದರೆ ಭಾರಿ ಬೆಲೆ ತೆರಬೇಕಾಗುತ್ತದೆ ಎಂದೂ ಅವರು ಎಚ್ಚರಿಸಿದ್ದಾರೆ.

ಹೈಕಮಾಂಡ್‌ ನಾಯಕರ ಜತೆ ಮಾತುಕತೆ ನಡೆಸಿದ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿಗಳು ಸಿದ್ದರಾಮಯ್ಯನವರ ದುಬಾರಿ ಕೈಗಡಿಯಾರ ಕುರಿತು ಉಲ್ಲೇಖಿಸಿದ್ದಾರೆ. ಮೂರು ವರ್ಷಗಳಿಂದ ಸಿದ್ದರಾಮಯ್ಯನವರ ಸರ್ಕಾರ ತಮ್ಮನ್ನು ನಿರ್ಲಕ್ಷ್ಯ ಮಾಡಿದೆ ಎಂಬ ಭಾವನೆ ಮೂಲ ಕಾಂಗ್ರೆಸಿಗರಿಗೆ ಬಂದಿದೆ. ಈ ಭಾವನೆ ದೂರ ಮಾಡಲು ಮುಖ್ಯಮಂತ್ರಿ ಕ್ರಮ ಕೈಗೊಂಡಿಲ್ಲ ಎಂದೂ ಅವರು ತಿಳಿಸಿದ್ದಾರೆ.

ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕ ಸರ್ಕಾರ ಸುಭದ್ರವಾಗಿದೆ ಎಂದು ಮೇಲುನೋಟಕ್ಕೆ ಕಂಡುಬರುತ್ತಿದೆ ಎಂದಿದ್ದಾರೆ.

ಕಾಂಗ್ರೆಸ್‌ ನಾಯಕರು ಕೂಡಲೇ ಮಧ್ಯಪ್ರವೇಶಿಸಿ ಬೂದಿ ಮುಚ್ಚಿದ ಕೆಂಡದಂತಿರುವ ಬಿಕ್ಕಟ್ಟುಗಳನ್ನು ಬಗೆಹರಿಸದಿದ್ದರೆ ಅರುಣಾಚಲ ಪ್ರದೇಶ ಮತ್ತು ಉತ್ತರಾಖಂಡದಂತೆಯೇ ಭಿನ್ನಮತ ಸ್ಪೋಟಗೊಳ್ಳುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ ಎಂದೂ ಮಾಜಿ ಮುಖ್ಯಮಂತ್ರಿಗಳು ವಿವರಿಸಿದ್ದಾರೆ.

ಕೃಷ್ಣ ಅವರ ಮಾತುಗಳನ್ನು ಸೋನಿಯಾ ಮತ್ತು ರಾಹುಲ್‌ ತಾಳ್ಮೆಯಿಂದ ಕೇಳಿಸಿಕೊಂಡರಾದರೂ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ ಎಂದೂ ಮೂಲಗಳು ಖಚಿತಪಡಿಸಿವೆ.

Write A Comment