ಕರ್ನಾಟಕ

8 ವರ್ಷ ಬಳಿಕ ಅಪಘಾತ ರಹಿತ ಚಾಲಕರಿಗೆ ಚಿನ್ನದ ಪದಕ

Pinterest LinkedIn Tumblr

Drivers-23-3ಬೆಂಗಳೂರು: ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಅಪಘಾತ ರಹಿತ ಬಸ್‌ ಚಾಲನೆ ಮಾಡುತ್ತಿರುವ ಚಾಲಕರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಅಂತಹ ಚಾಲಕರಿಗೆ ಮುಖ್ಯಮಂತ್ರಿಗಳ ಚಿನ್ನದ ಪದಕ ನೀಡುವ ಕಾರ್ಯವನ್ನು ಸರ್ಕಾರ ಮುಂದುವರಿಸಿದೆ. ಕಳೆದ ಎಂಟು ವರ್ಷಗಳಿಂದ ಸ್ಥಗಿತಗೊಂಡಿದ್ದ ಈ ಕಾಯಕ್ರಮಕ್ಕೆ ಬುಧವಾರ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದ ಅಪಘಾತ ರಹಿತ ಚಾಲಕರಿಗೆ ಚಿನ್ನದ ಪದಕ ಪ್ರದಾನ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಲಾಭ-ನಷ್ಟ ನೋಡದೆ ಸಾಮಾಜಿಕ ಹೊಣೆಗಾರಿಕೆ ನಿಭಾಯಿಸುತ್ತಿರುವ ಕೆಎಸ್‌ಆರ್‌ಟಿಸಿ ದೇಶದ ನಂ.1 ಸಾರಿಗೆ ಸಂಸ್ಥೆಯಾಗಿದೆ. ಈ ಇಲಾಖೆ ಅಭಿವೃದ್ಧಿಗೆ ಸರ್ಕಾರ ಎಲ್ಲಾ ಸವಲತ್ತು ಒದಗಿಸಲು ಬದ್ಧವಾಗಿದೆ ಎಂದು ತಿಳಿಸಿದರು.

ಸಾರಿಗೆ ವಾಹನಗಳಿಂದ ದೇಶದಲ್ಲಿ ಪ್ರತಿವರ್ಷ 1.50 ಲಕ್ಷಕ್ಕೂ ಅಧಿಕ ಅಪಘಾತಗಳು ಸಂಭವಿಸುತ್ತಿವೆ. ರಾಜ್ಯದಲ್ಲಿ 25 ಸಾವಿರ ಅಪಘಾತಗಳಾಗುತ್ತಿವೆ. ಈ ನಡುವೆ ಅಪಘಾತ ರಹಿತವಾಗಿ ಅತ್ಯುತ್ತಮ ಸೇವೆ ಮಾಡಿದ ಚಾಲಕರನ್ನು ಗುರುತಿಸಿ ಗೌರವಿಸುವುದು ಸಮಾಜ ಮತ್ತು ಸರ್ಕಾರದ ಜವಾಬ್ದಾರಿ ಎಂದರು.

ರಾಜ್ಯ ಸಾರಿಗೆ ಸಂಸ್ಥೆ ಪ್ರತಿ ದಿನ 1.10 ಕೋಟಿ ಜನರಿಗೆ ಸಾರಿಗೆ ಸೌಲಭ್ಯ ನೀಡುತ್ತಿದೆ. 29 ಸಾವಿರ ಹಳ್ಳಿಗಳ ಪೈಕಿ 24 ಸಾವಿರ ಹಳ್ಳಿಗಳಿಗೆ ಸಾರಿಗೆ ಸಂಪರ್ಕ ಕಲ್ಪಿಸಿದೆ. ಇದೊಂದು ಲಾಭ ಗಳಿಸಲು ಮಾಡಿದ ಸಂಸ್ಥೆಯಲ್ಲ. ಹಾಗೆಯೇ ನಷ್ಟ ಮಾಡಿಕೊಳ್ಳಬೇಕೆಂದಲ್ಲ. ಲಾಭ-ನಷ್ಟಗಳನ್ನು ಸರಿದೂಗಿಸಿಕೊಂಡು ಹೋಗಬೇಕು ಎಂದರು. ಸಾರಿಗೆ ಇಲಾಖೆಯಲ್ಲಿ ಚಾಲಕರ ಜವಾಬ್ದಾರಿ ಹೆಚ್ಚಿದ್ದು, ಅಪಘಾತ ರಹಿತ ಚಾಲಕರಾಗಿ ದಾಖಲೆ ನಿರ್ಮಿಸಿ ಇತರರಿಗೆ ಸ್ಫೂರ್ತಿಯಾಗಬೇಕು ಎಂದು ಸಲಹೆ ನೀಡಿದರು.

ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ವಾರ್ತಾ ಸಚಿವ ರೋಷನ್‌ಬೇಗ್‌, ಸಂಸದ ಪಿ.ಸಿ.ಮೋಹನ್‌, ಶಾಸಕ ಮುನಿರತ್ನ, ಎಸ್‌.ಟಿ.ಸೋಮಶೇಖರ್‌, ಮೇಯರ್‌ ಮಂಜುನಾಥ್‌ ರೆಡ್ಡಿ, ಉಪಮೇಯರ್‌ ಹೇಮಲತಾ ಗೋಪಾಲಯ್ಯ, ಬಿಎಂಟಿಸಿ ಅಧ್ಯಕ್ಷ ಎಚ್‌.ನಾಭಿರಾಜ್‌ ಜೈನ್‌, ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ಎಂ.ಬಿ.ಸೌದಾಗರ್‌, ಕೆಎಸ್‌ಆರ್‌ಟಿಸಿ ಉಪಾಧ್ಯಕ್ಷ ಲೋಹಿತ್‌ ಡಿ.ನಾಯ್ಡು, ಬಿಎಂಟಿಸಿ ಉಪಾಧ್ಯಕ್ಷ ವಿ.ಎಸ್‌. ಆರಾಧ್ಯ, ಕೆಎಸ್ಸಾರ್ಟಿಸಿ ಎಂ.ಡಿ. ರಾಜೇಂದರ್‌ ಕುಮಾರ ಕಟಾರಿಯಾ ಮತ್ತಿತರರು ಇದ್ದರು.

8 ಗ್ರಾಂ ಚಿನ್ನ, 30 ಗ್ರಾಂ ಬೆಳ್ಳಿ
ಕಳೆದ 7 ವರ್ಷಗಳಿಂದ ಅಪಘಾತ ರಹಿತವಾಗಿ ಬಸ್‌ ಚಾಲನೆ ಮಾಡಿದ ಚಾಲಕರಿಗೆ 8 ಗ್ರಾಂ ಚಿನ್ನ, 30 ಗ್ರಾಂ ಬೆಳ್ಳಿ ಒಳಗೊಂಡಿರುವ ಮುಖ್ಯಮಂತ್ರಿ ಪದಕ ಹಾಗೂ ತಲಾ 5 ಸಾವಿರ ನಗದನ್ನು ಬಹುಮಾನವಾಗಿ ವಿತರಿಸಲಾಯಿತು.
-ಉದಯವಾಣಿ

Write A Comment