ಕರ್ನಾಟಕ

ಕಲಬುರಗಿ ಕೇಂದ್ರ ಕಾರಾಗೃಹದಿಂದ ಸಿನಿಮೀಯ ರೀತಿಯಲ್ಲಿ ವಿಚಾರಣಾಧೀನ ಖೈದಿಗಳು ಎಸ್ಕೇಪ್

Pinterest LinkedIn Tumblr

kalaburgi

ಕಲಬುರಗಿ, ಮಾ.23: ಜೈಲು ಬ್ಯಾರಕ್ನ ಗೋಡೆ ಕೊರೆದು ನಂತರ ಕಾಂಪೌಂಡ್ ಗೋಡೆ ಹಾರಿ ನಾಲ್ವರು ವಿಚಾರಣಾಧೀನ ಖೈದಿಗಳು ಸಿನಿಮೀಯ ರೀತಿಯಲ್ಲಿ ಪರಾರಿಯಾಗಿರುವ ಘಟನೆ ಇಲ್ಲಿನ ಕೇಂದ್ರ ಕಾರಾಗೃಹದಲ್ಲಿ ತಡರಾತ್ರಿ ಸುಮಾರು 1 ಗಂಟೆ ಸಮಯದಲ್ಲಿ ನಡೆದಿದೆ. ಕೊಲೆ ಹಾಗೂ ಅತ್ಯಾಚಾರ ಪ್ರಕರಣದಲ್ಲಿ ಜೈಲು ಸೇರಿದ್ದ ಸುನಿಲ್, ಕುಮಾರ್, ತಾಜಾವುದ್ದೀನ್, ಲಕ್ಷ್ಮಣ್ ವಿಚಾರಣಾಧೀನ ಖೈದಿಗಳು. ಇವರು ಸಿನಿಮೀಯ ರೀತಿಯಲ್ಲಿ ಪರಾರಿಯಾಗಿದ್ದು, ಇವರಿಗಾಗಿ ಪೊಲೀಸರು ಮತ್ತು ಜೈಲು ಸಿಬ್ಬಂದಿ ತೀವ್ರ ಶೋಧ ನಡೆಸುತ್ತಿದ್ದಾರೆ.

ಕಾರಾಗೃಹ ಅಧಿಕಾರಿಗಳ ಮತ್ತು ಸಿಬ್ಬಂದಿಗಳ ನಿರ್ಲಕ್ಷ್ಯದಿಂದ ಖೈದಿಗಳು ಪರಾರಿಯಾಗಿದ್ದಾರೆ ಎಂದು ಹೇಳಲಾಗಿದೆ. ಮಧ್ಯರಾತ್ರಿ ಜೈಲು ಬ್ಯಾರಕ್ನ ಗೋಡೆಯ ಸುರಂಗ ಕೊರೆದು ಕಾಂಪೌಂಡ್ ಗೋಡೆ ಹಾರಿ ಗ್ರೇಟ್ ಎಸ್ಕೇಪ್ ಆಗಿರುವ ಇವರು ಬಹಳ ದಿನಗಳಿಂದಲೇ ಪೂರ್ವ ತಯಾರಿ ಮಾಡಿಕೊಂಡಿದ್ದಾರೆ.

ಈ ವಿಚಾರಾಣಾಧೀನ ಖೈದಿಗಳ ಮೇಲೆ ಫರಾಹತ್ತಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಖೈದಿಗಳು ಪರಾರಿಯಾದ ಸುದ್ದಿ ತಿಳಿಯುತ್ತಿದ್ದಂತೆ ಹಿರಿಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಈಶಾನ್ಯ ವಲಯ ಐಜಿಪಿ ಶಿವಕುಮಾರ್ ಕಾರಾಗೃಹಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಧಿಕಾರಿಗಳು, ಸಿಬ್ಬಂದಿಗಳ ನಿರ್ಲಕ್ಷ್ಯಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. ಮಧ್ಯರಾತ್ರಿ ಒಂದು ಗಂಟೆಯಿಂದ ಎರಡು ಗಂಟೆಯೊಳಗೆ ಖೈದಿಗಳು ಪರಾರಿಯಾಗಿರುವ ಸಾಧ್ಯತೆಯಿದೆ. ಈ ಖೈದಿಗಳು ಪರಾರಿಯಾದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಪರಾರಿಯಾದ ಮೂರು ಗಂಟೆ ಬಳಿಕ ಅಧಿಕಾರಿಗಳಿಂದ ಮಾಹಿತಿ ಲಭ್ಯವಾಗಿದೆ. ವಿಚಾರಣಾಧೀನ ಖೈದಿಗಳ ಪರಾರಿ ಪ್ರಕರಣದಲ್ಲಿ ಸಹಖೈದಿಗಳು ನೆರವಾಗಿರುವುದು ಮೇಲ್ನೋಟಕ್ಕೆ ಕಂಡುಬಂದಿಲ್ಲ. ಈ ಖೈದಿಗಳ ಬಂಧನಕ್ಕೆ ವಿಶೇಷ ತಂಡ ರಚಿಸಲಾಗಿದೆ. ಈಗಾಗಲೇ ಬೀದರ್, ಯಾದಗಿರಿ, ರಾಯಚೂರು, ಮಹಾರಾಷ್ಟ್ರ ಮತ್ತು ಸೊಲ್ಲಾಪುರ ಜಿಲ್ಲೆಗಳ ಪೊಲೀಸರಿಗೆ ಖೈದಿಗಳ ಫೋಟೋ ರವಾನಿಸಲಾಗಿದ್ದು, ಕಾರಾಗೃಹ ಅಧಿಕಾರಿಗಳಿಂದ ತನಿಖೆ ನಡೆಸಲಾಗುತ್ತಿದೆ. ಪರಾರಿ ಪ್ರಕರಣ ಸಂಬಂಧ ಫರಾಹತ್ತಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Write A Comment