ಮುಂಬೈ

ದಂಡ ಕಟ್ಟುವುದಿಲ್ಲ; ಮೊದಲು ವಿಜಯ್ ಮಲ್ಯರನ್ನು ಬಂಧಿಸಿ: ಅಧಿಕಾರಿಗಳಿಗೆ ತಲೆನೋವು ತಂದ ಮಹಿಳೆಯ ವಾದ

Pinterest LinkedIn Tumblr

mallya

ಮುಂಬೈ: ಆಕೆ ಆರ್ಥಿಕವಾಗಿ ಶ್ರೀಮಂತೆ. ರೈಲಿನಲ್ಲಿ ಟಿಕೆಟ್ ಪಡೆಯದೆ ಪ್ರಯಾಣಿಸುತ್ತಿದ್ದಳು. ಟಿಸಿ ಬಂದು ಚೆಕ್ ಮಾಡಿದಾಗ ಟಿಕೆಟ್ ಪಡೆದಿಲ್ಲದಿರುವುದು ಗೊತ್ತಾಯಿತು, ಸರಿ ದಂಡ ಕಟ್ಟಿ ಎಂದು ಟಿಸಿ ಹೇಳಿದಾಗ ಆಕೆ ಮಾಡಿದ ವಾದವೇನು ಗೊತ್ತೇ?

ಅಧಿಕಾರಿಗಳು ಮೊದಲು ಮದ್ಯದ ದೊರೆ ವಿಜಯ್ ಮಲ್ಯ ಅವರನ್ನು ಬಂಧಿಸಿ ಅವರಿಂದ ಸಾಲ ವಸೂಲಾತಿ ಮಾಡಲಿ ನಂತರ ನಾನು ದಂಡ ಕಟ್ಟುತ್ತೇನೆ ಎಂದು ಹೇಳಿದ್ದಾಳೆ. ಇದನ್ನು ಕೇಳಿದ ಅಧಿಕಾರಿಗಳು ಒಂದು ಕ್ಷಣ ದಂಗಾಗಿದ್ದಂತೂ ಹೌದು.

ಪ್ರೇಮಲತಾ ಬಲ್ಸಾಲಿ ಇಬ್ಬರು ಮಕ್ಕಳ ತಾಯಿ, ದಕ್ಷಿಣ ಮುಂಬೈಯ ಪ್ರತಿಷ್ಠಿತ ಭುವನೇಶ್ವರ್ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ಮುಂಬೈಯ ಉಪನಗರ ಮಹಾಲಕ್ಷ್ಮಿ ನಿಲ್ದಾಣದಲ್ಲಿ ಮಹಿಳಾ ಟಿಕೆಟ್ ಪರೀಕ್ಷಕಿ ಬಂದು ಟಿಕೆಟ್ ಪರೀಕ್ಷಿಸಿದಾಗ ಸಿಕ್ಕಿಬಿದ್ದಿದ್ದಾರೆ. ಟಿಕೆಟ್ ತೆಗೆದುಕೊಳ್ಳದ್ದಕ್ಕಾಗಿ 260 ರೂಪಾಯಿ ದಂಡ ಕಟ್ಟಿ ಇಲ್ಲವೇ ಏಳು ದಿನ ಜೈಲಿಗೆ ಹೋಗಿ ಎಂದು ಟಿಸಿ ಹೇಳಿದರು. ಆಗ ಪ್ರೇಮಲತಾ, ”ಮೊದಲು ವಿಜಯ್ ಮಲ್ಯ ಅವರನ್ನು ಬಂಧಿಸಿ, ಅವರಿಂದ 9 ಸಾವಿರ ಕೋಟಿ ರೂಪಾಯಿ ಸಾಲ ವಸೂಲಿ ಮಾಡಿಕೊಳ್ಳಲಿ, ನಂತರ ನಾನು ದಂಡ ಕಟ್ಟುತ್ತೇನೆ” ಎಂದು ಹೇಳಿದ್ದಾರೆ.

ಪ್ರೇಮಲತಾರನ್ನು ಇಂದು ಮ್ಯಾಜಿಸ್ಟ್ರೇಟ್ ಕೋರ್ಟ್ ಮುಂದೆ ಹಾಜರುಪಡಿಸಿ ದಂಡ ಕಟ್ಟಲು ಹೇಳಲಾಗುತ್ತದೆ. ಆದರೆ ಅವರು ಈಗಾಗಲೇ ದಂಡ ಕಟ್ಟಲು ನಿರಾಕರಿಸಿದ್ದು, ಜೈಲಿಗೆ ಹೋಗಲು ಸಿದ್ಧ ಎಂದು ಹೇಳಿದ್ದಾರೆ ಎಂದು ಪಶ್ಚಿಮ ರೈಲ್ವೆಯ ಮುಂಬೈ ವಲಯದ ಹಿರಿಯ ವಿಭಾಗೀಯ ಭದ್ರತಾ ಆಯುಕ್ತ ಆನಂದ್ ವಿಜಯ್ ಜ್ಹಾ ತಿಳಿಸಿದ್ದಾರೆ.

ಮಹಿಳಾ ಪೊಲೀಸ್ ಕಾನ್ಸ್ಟೇಬಲ್ ಪ್ರೇಮಲತಾ ಅವರ ಮನವೊಲಿಸಲು ಬಹಳ ಪ್ರಯತ್ನಪಟ್ಟು ದಂಡ ಕಟ್ಟಿ ಹೋಗುವಂತೆ ಹೇಳಿದರು. ಆದರೆ ಪ್ರೇಮಲತಾ ರೈಲ್ವೆ ಅಧಿಕಾರಿಗಳೊಂದಿಗೆ ಸುಮಾರು 12 ಗಂಟೆಗಳ ಕಾಲ ವಾದ ಮಾಡುತ್ತಾ ನಿಂತಿದ್ದರು. ಯಾಕೆ ಅಧಿಕಾರಿಗಳು ಮಲ್ಯ ಅವರ ಬಗ್ಗೆ ಮೃದು ಧೋರಣೆ ತಳೆದಿದ್ದು, ಸಾಮಾನ್ಯ ಜನರಿಗೆ ಮಾತ್ರ ಕಿರುಕುಳ ನೀಡುತ್ತಾರೆ ಎಂದು ಪ್ರಶ್ನಿಸುತ್ತಿದ್ದರು. ಕೊನೆಗೆ ಬೇಸತ್ತು ಪೊಲೀಸರು ಆಕೆಯ ಪತಿ ರಮೇಶ್ ಬನ್ಸಾಲಿಯವರನ್ನು ಕರೆದು ದಂಡ ಕಟ್ಟುವಂತೆ ಹೇಳಿದರು. ಆದರೂ ಕೂಡ ಆಕೆ ಒಪ್ಪಲಿಲ್ಲ. ಬದಲಿಗೆ ಏಳು ದಿವಸ ಜೈಲಿಗೆ ಹೋಗುವುದಾಗಿ ತಿಳಿಸಿದರು ಎನ್ನುತ್ತಾರೆ ಅಧಿಕಾರಿಗಳು.

Write A Comment