ಬೆಂಗಳೂರು: ರಾಜ್ಯಾದ್ಯಾಂತ ಸೋಮವಾರದಂದು ನಡೆದಿದ್ದ ದ್ವಿತೀಯ ಪಿಯುಸಿ ರಸಾಯನಶಾಸ್ತ್ರ ಪರೀಕ್ಷೆಯ ಪ್ರಶ್ನೆಪತ್ರಿಕೆಗಳು ಸೋರಿಕೆಯಾಗಿರುವ ಹಿನ್ನಲೆಯಲ್ಲಿ ಈಗಾಗಲೆ ನಡೆದಿರುವ ಪರೀಕ್ಷೆಯನ್ನು ರದ್ದುಗೊಳಿಸಿ ಮರು ಪರೀಕ್ಷೆಯನ್ನು ನಡೆಸಲು ದ್ವಿತೀಯ ಪಿ.ಯು. ಪರೀಕ್ಷಾ ಮಂಡಳಿ ತೀರ್ಮಾನಿಸಿದೆ.
ಬಳ್ಳಾರಿ ಗಾಂಧಿನಗರದ ಮಹಿಳಾ ಸರಕಾರಿ ಪದವಿ ಪೂರ್ವ ಕಾಲೇಜು, ಕೋಲಾರ ಮಾಲೂರಿನ ಸರಕಾರಿ ಪದವಿ ಪೂರ್ವ ಕಾಲೇಜು ಈ ಎರಡು ಕೇಂದ್ರಗಳಲ್ಲಿ ಸೋಮವಾರ ಪರೀಕ್ಷೆಗೂ ಮೊದಲು ಪ್ರಶ್ನೆಪತ್ರಿಕೆ ಸೋರಿಕೆಯಾಗಿರುವ ಹಿನ್ನಲೆಯಲ್ಲಿ ಈ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ರಾಜ್ಯ ಪದವಿಪೂರ್ವ ಶಿಕ್ಷಣ ಮಂಡಳಿಯ ನಿರ್ದೇಶಕಿ ಪಲ್ಲವಿ ಆಕೃತಿ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಮರುಪರೀಕ್ಷಾ ದಿನಾಂಕವನ್ನು ಸದ್ಯದಲ್ಲಿಯೇ ಪ್ರಕಟಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಸಹಮುಖ್ಯ ಅಧೀಕ್ಷರನ್ನು ಅಮಾನತುಗೊಳಿಸಲಾಗಿದೆ ಹಾಗೂ ಪ್ರಶ್ನೆಪತ್ರಿಕೆ ಸೋರಿಕೆ ಸಂಬಂಧ ವಿಸ್ತೃತ ತನಿಖೆಗೆ ಪಿ.ಯು. ಮಂಗಳಿ ಆದೇಶಿದೆ. ಪ್ರಶ್ನೆಪತ್ರಿಕೆ ಸೋರಿಕೆಯಾಗಿರುವ ಈ ಎರಡು ಪರೀಕ್ಷಾ ಕೇಂದ್ರಗಳನ್ನು ಬದಲಾಯಿಸಲು ನಿರ್ಧರಿಸಲಾಗಿದೆ.
-ಉದಯವಾಣಿ