
ಬೆಂಗಳೂರು: ದಾಖಲೆಯ 11ನೆ ಬಜೆಟ್ ಮಂಡಿಸಿ ನೆಮ್ಮದಿಯ ನಿಟ್ಟುಸಿರು ಬಿಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಇದೀಗ ಸಚಿವ ಸಂಪುಟ ವಿಸ್ತರಣೆ ಹಾಗೂ ಪುನಾರಚನೆಯ ಸಂಕಷ್ಟ ಎದುರಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಮೂರು ವರ್ಷ ಪೂರ್ಣಗೊಳಿಸಲು ಇನ್ನು ಕೆಲವು ದಿನಗಳು ಬಾಕಿ ಉಳಿದಿವೆ. ಈ ಹಂತದಲ್ಲಿ ಉಳಿದಿರುವ ಎರಡು ವರ್ಷಗಳ ಅವಧಿಯಲ್ಲಿ ಕುಂದಿರುವ ಸರ್ಕಾರದ ವರ್ಚಸ್ಸು ಹಾಗೂ ಪಕ್ಷವನ್ನು ಜತೆ ಜತೆಯಾಗಿಯೇ ಮುನ್ನಡೆಸಬೇಕಾದ ಹೊಣೆಗಾರಿಕೆ ಮುಖ್ಯಮಂತ್ರಿ ಮೇಲಿದೆ.
ಕೆಲವು ಅದಕ್ಷ ಸಚಿವರನ್ನು ಸಂಪುಟದಿಂದ ಕೈ ಬಿಟ್ಟು , ಸರ್ಕಾರ ಹಾಗೂ ಪಕ್ಷಕ್ಕೆ ಹೆಸರು ತರುವಂತಹ ಯುವ ಪಡೆಯನ್ನು ಕಟ್ಟಬೇಕೆಂಬ ಇರಾದೆಯನ್ನು ಸಿದ್ದರಾಮಯ್ಯ ಇಟ್ಟುಕೊಂಡಿದ್ದಾರೆ. ಹಾಲಿ ಸಂಪುಟದಲ್ಲಿರುವ ಕೆಲವು ಸಚಿವರಿಗೆ ಖೊಕ್ ಕೊಟ್ಟು, ಹಿರಿಯ-ಕಿರಿಯರನ್ನೊಳಗೊಂಡ ಸಮತೋಲನದ ತಂಡವನ್ನು ಕಟ್ಟಲು ಹಲವು ದಿನಗಳಿಂದಲೂ ಸರ್ಕಸ್ ನಡೆಸುತ್ತಿದ್ದಾರೆ. ಯಾವ ಸಚಿವರನ್ನು ಕೈ ಬಿಡಬೇಕು, ಇನ್ನಾರಿಗೆ ಸಚಿವ ಸ್ಥಾನ ನೀಡಬೇಕು ಎಂಬ ಗೊಂದಲಕ್ಕೆ ಸಿಎಂ ಸಿಲುಕಿರುವುದು ಗುಟ್ಟಾಗಿ ಉಳಿದಿಲ್ಲ. ಏಕೆಂದರೆ ವಿಸ್ತರಣೆ ಹಾಗೂ ಪುನರ್‌ರಚನೆಯನ್ನು ಏಕಕಾಲಕ್ಕೆ ಕೈ ಹಾಕಿದರೆ ಜೇನುಗೂಡಿಗೆ ಕಲ್ಲುಹೊಡೆದಂತೆ ಎಂಬುದನ್ನು ಮುಖ್ಯಮಂತ್ರಿಯವರು ಅರಿಯದಷ್ಟು ಮುಗ್ದರಲ್ಲ.
ಹಾಲಿ ಕೆಲವು ಸಚಿವರಿಗೆ ಕೊಕ್ ನೀಡಿ ಹೊಸ ಮುಖಗಳಿಗೆ ಆದ್ಯತೆ ನೀಡಿದರೆ ಸರ್ಕಾರದಲ್ಲಿ ಮತ್ತೊಂದು ಭಿನ್ನಮತ ಸೃಷ್ಟಿಯಾಗುತ್ತದೆ.ವಿರೋಧ ಪಕ್ಷಗಳು ಮತ್ತು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿರುವ ಅಸಮರ್ಥರನ್ನು ಗಟ್ಟಿ ಧೈರ್ಯ ಮಾಡಿ ಕೊಕ್ ನೀಡಿದರೆ ಭಿನ್ನಮತಕ್ಕೆ ಅವಕಾಶ ನೀಡಿದಂತಾಗುತ್ತದೆ ಎಂಬುದನ್ನು ಚನ್ನಾಗಿಯೇ ಅರಿತಿದ್ದಾರೆ. ಕೇವಲ ಭಿನ್ನಮತ ಸೃಷ್ಟಿಯಾಗುತ್ತದೆ ಎಂಬ ಕಾರಣಕ್ಕಾಗಿಯೇ ಮೂರು ವರ್ಷಗಳ ಅವಧಿಯಲ್ಲಿ ಏನೂ ಮಾಡದೆ ಸರ್ಕಾರ ಹಾಗೂ ಪಕ್ಷಕ್ಕೆ ತಲೆನೋವಾಗಿರುವವರನ್ನು ಸಂಪುಟದಿಂದ ಕಿತ್ತುಹಾಕಿ ಅವರನ್ನು ಪಕ್ಷದ ಸೇವೆಗೆ ಬಳಸಿಕೊಳ್ಳುವ ಕಾರ್ಯತಂತ್ರವನ್ನು ಮುಖ್ಯಮಂತ್ರಿ ಹೆಣೆದಿದ್ದಾರೆ.
ಈಗಾಗಲೇ ಸಿದ್ದರಾಮಯ್ಯ ಅವರು ಬಜೆಟ್ ಮಂಡನೆಯಾದ ಬಳಿಕ ಸಂಪುಟ ವಿಸ್ತರಣೆ ಮಾಡುವುದಾಗಿ ಹೇಳಿದ್ದರು. ಆದರೆ, ಪುನರ್‌ರಚನೆ ಅಥವಾ ವಿಸ್ತರಣೆಯೋ ಎಂಬುದನ್ನು ಬಹಿರಂಗ ಮಾಡಿರಲಿಲ್ಲ. ಇದೀಗ ಮೂಹರ್ತ ನಿಗದಿಯಾಗಿರುವುರಿಂದ ಅನಿವಾರ್ಯವಲ್ಲದಿದ್ದರೂ, ಸರ್ಕಾರ ಹಾಗೂ ಪಕ್ಷದ ಹಿತದೃಷ್ಟಿಯಿಂದ ಸದ್ಯದಲ್ಲೇ ಕೆಲವರ ತಲೆದಂಡವಾಗುವುದು ಬಹತೇಕ ಖಚಿತವಾಗಿದೆ. ಕೈ ಮೇಲಾಗುವ ಸಾಧ್ಯತೆ ಕಡಿಮೆ..?: ಕೆಲ ದಿನಗಳ ಹಿಂದೆ ದೆಹಲಿಗೆ ತೆರಳಿದ್ದ ಸಿದ್ದರಾಮಯ್ಯ ಅವರು, ಪಕ್ಷದ ಅಧಿನಾಯಕಿ ಸೋನಿಯಾಗಾಂಧಿ, ಉಪಾಧ್ಯಕ್ಷ ರಾಹುಲ್‌ಗಾಂಧಿ ಹಾಗೂ ರಾಜ್ಯ ಉಸ್ತುವಾರಿ ದಿಗ್ವಜಯ್ ಸಿಂಗ್ ಅವರನ್ನು ಭೇಟಿ ಮಾಡಿದ್ದರು. ಆದರೆ, ಈ ಬಾರಿ ವರಿಷ್ಠರು ಸಿದ್ದರಾಮಯ್ಯನವರ ಕಾರ್ಯಶೈಲಿಗೆ ಬೇಸರ ವ್ಯಕ್ತಪಡಿಸಿದ್ದರು.
ನಿರೀಕ್ಷಿತ ಪ್ರಮಾಣದಲ್ಲಿ ಬಾರದ ಪಂಚಾಯತ್ ಚುನಾವಣೆ ಫಲಿತಾಂಶ, ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿನ ಸೋಲು, ದುಬಾರಿ ಬೆಲೆಯ ವಾಚ್ ಪ್ರಕರಣ, ರಾಜ್ಯದಲ್ಲಿ ಕುಸಿದು ಬಿದ್ದ ಕಾನೂನು ಸುವ್ಯವಸ್ಥೆ, ಸೇರಿದಂತೆ ಮತ್ತಿತರ ಘಟನೆಗಳಿಂದ ವರಿಷ್ಠರು ಬೇಸರ ವ್ಯಕ್ತಪಡಿಸಿದ್ದರು.ಇದೀಗ ಸಂಪುಟ ವಿಸ್ತರಣೆ ಹಾಗೂ ಪುನರ್ರಚಗನೆ ಮಾಡಿದ್ದೇ ಆದಲ್ಲಿ ಸಿದ್ದು ಬಣ ಮೇಲುಗೈ ಸಾಧಿಸುವ ಲಕ್ಷಣಗಳು ತೀರಾ ಕಡಿಮೆ ಎನಿಸಿದೆ. ರಾಜ್ಯದಲ್ಲಿ ಮುಖ್ಯಮಂತ್ರಿಯಾದ ಬಳಿಕ ಎಐಸಿಸಿ ವರಿಷ್ಟರು ಯಾವುದೇ ವಿಷಯದಲ್ಲೂ ಹಸ್ತಕ್ಷೇಪ ಮಾಡಿರಲಿಲ್ಲ. ಸಂಪುಟಕ್ಕೆ ಯಾರನ್ನು ತೆಗೆದುಕೊಳ್ಳಬೇಕು, ಯಾರಿಗೆ ನಿಗಮ ಮಂಡಳಿಯಲ್ಲಿ ಅಧ್ಯಕ್ಷ ಸ್ಥಾನ , ಬಿಬಿಎಂಪಿ, ಜಿಲ್ಲಾ, ಹಾಗೂ ತಾಲೂಕ್ ಪಂಚಾಯತ್ ಚುನಾವಣೆಯಲ್ಲಿ ಟಿಕೆಟ್ ಹಂಚಿಕೆ ಸೇರಿದಂತೆ ಪ್ರತಿಯೊಂದರಲ್ಲೂ ಮುಕ್ತ ಅವಕಾಶ ನೀಡಿದ್ದರು.
ಈ ಮುಕ್ತ ಅವಕಾಶವೇ ಪಕ್ಷಕ್ಕೆ ಮುಳುವಾಗಿದೆ ಎಂದು ಮೂಲ ಕಾಂಗ್ರೆಸಿಗರು ಹೈಕಮಾಂಡ್‌ಗೆ ಕಿವಿ ಕಚ್ಚಿದ್ದರಿಂದ ಸಿದ್ದರಾಮಯ್ಯನವರ ಮೇಲೆ ಇದ್ದ ನಿಷ್ಠೆ, ನಂಬಿಕೆಯನ್ನು ವರಿಷ್ಠರು ಕಳೆದುಕೊಂಡಿದ್ದಾರೆ. ಹೀಗಾಗಿ ಈ ಬಾರಿ ಸಂಪುಟದಲ್ಲಿ ಮೂಲ ಕಾಂಗ್ರೆಸ್‌ಗರಿಗೆ ಹೆಚ್ಚಿನ ಆದ್ಯತೆ ಸಿಗುವ ಲಕ್ಷಣಗಳು ಕಂಡು ಬಂದಿವೆ. ಐದು ರಾಜ್ಯಗಳ ವಿಧಾನಸಭಾ ಚುನಾವಣೆ ನಡೆಯುತ್ತಿರುವ ಕಾರಣ ದೆಹಲಿ ನಾಯಕರು, ಕರ್ನಾಟಕದ ಬೆಳವಣಿಗೆಗಳ ಬಗ್ಗೆ ಚಿತ್ತ ಹರಿಸುವಷ್ಟು ಸಮಯವಿಲ್ಲ. ಈ ಹಿನ್ನಲೆಯಲ್ಲಿ ನಿಮ್ಮಿಷ್ಟಕ್ಕನುಗುಣವಾಗಿ ತೀರ್ಮಾನ ಕೈಗೊಳ್ಳಿ ಎಂದು ಸೂಚಿಸಿದರೂ ಆಟ ಮಾತ್ರ ಮೂಲ ಕಾಂಗ್ರೆಸ್ಸಿಗರದ್ದೇ ಆಗಿರುತ್ತದೆ.
ಯಾರ್ಯಾರಿಗೆ ಕೊಕ್?
ವಿ. ಶ್ರೀನಿವಾಸಪ್ರಸಾದ್- ಕಂದಾಯ
ಶ್ಯಾಮನೂರು ಶಿವಶಂಕರಪ್ಪ- ತೋಟಗಾರಿಕೆ
ಅಭಯ್‌ಚಂದ್ರ ಜೈನ್- ಕ್ರೀಡಾ ಮತ್ತು ಯುವ ಜನ
ಕೃಷ್ಣಭೈರೇಗೌಡ- ಕೃಷಿ
ಎಂ.ಎಚ್.ಅಂಬರೀಷ್- ವಸತಿ
ಟಿ.ಪರಮೇಶ್ವರ್‌ನಾಯ್ಕ್- ಕಾರ್ಮಿಕ
ಖಮುರಲ್ ಇಸ್ಲಾಂ- ಅಲ್ಪ ಸಂಖ್ಯಾತ
ವಿನಯ್‌ಕುಮಾರ್ ಸೂರಕೆ- ನಗರಭಿವೃದ್ದಿ
ಶಿವರಾಜ್ ತಂಗಡಗಿ- ಸಣ್ಣ ನೀರಾವರಿ
ಸಂಭವನೀಯರು
ರಮೇಶ್‌ಕುಮಾರ್
ಕೆ.ಬಿ.ಕೋಳಿವಾಡ
ತನ್ವೀರ್ ಸೇಠ್ ಅಥವಾ ಎನ್.ಎ.ಹ್ಯಾರೀಸ್
ಎಸ್.ಎಸ್.ಮಲ್ಲಿಕಾರ್ಜುನ್
ಬಸವರಾಜರಾಯ ರೆಡ್ಡಿ
ಮಾಲೀಕಯ್ಯ ಗುತ್ತೇದಾರ್
ನರೇಂದ್ರಸ್ವಾಮಿ
ಅಧಿಕಾರಕ್ಕೆ ಬಂದ ದಿನದಿಂದಲೂ ಸದನದ ಒಳಗೂ ಮತ್ತು ಹೊರಗೂ ಸರ್ಕಾರಕ್ಕೆ ಚಳಿ ಬೀಡುಸುತ್ತಿರುವ ಸ್ಪೀಕರ್ ಕಾಗೋಡು ತಿಮ್ಮಪ್ಪನವರಿಗೆ ಈ ಬಾರಿಯಾದರೂ ಸಂಪುಟದಲ್ಲಿ ಅವಕಾಶ ಸಿಗಲಿದೆಯೇ..? ಆಪ್ತ ಮೂಲಗಳನ್ನು ಉಲ್ಲೇಖಿಸುವುದಾದರೆ ಈ ಬಾರಿ ಅವರಿಗೆ ಗೂಟದ ಕಾರು ಗ್ಯಾರಂಟಿ ಎಂಬ ಮಾತು ಕಾಂಗ್ರೆಸ್ ಪಾಳಯಲ್ಲಿ ಹಬ್ಬಿದೆ. ಕಾಂಗ್ರೆಸ್ ಪಕ್ಷಕ್ಕೆ ಉಳಿದಿರುವುದು ಇನ್ನು ಎರಡೇ ವರ್ಷ.ಮುಂದಿನ ಒಂದು ವರ್ಷ ಕೊನೆಗೊಂಡರೆ ಬಳಿಕ ಚುನಾವಣೆಗೆ ಸಜಗಬೇಕಾಗುತ್ತದೆ. ಶಿವಮೊಗ್ಗ ಜಿಲ್ಲೆಯಿಂದ ಸಚಿವರಾಗಿರುವ ಕಿಮ್ಮನೆ ರತ್ನಾಕರ ಅವರನ್ನು ಪಕ್ಷದ ಸೇವೆಗೆ ಬಳಸಿಕೊಂಡು ತಿಮ್ಮಪ್ಪನವರನ್ನು ಸಂಪುಟಕ್ಕೆ ತೆಗೆದುಕೊಳ್ಳಬೇಕೆಂಬ ಇಚ್ಛೆ ಸ್ವತಃ ಸಿದ್ದರಾಮಯ್ಯನವರಿಗೂ ಇದೆ.
ಪ್ರತಿ ಬಾರಿ ಸಂಪುಟ ವಿಸ್ತರಣೆಯಾಗುವ ವೇಳೆ ಅವರ ಹೆಸರು ಚಾಲ್ತಿಗೆ ಬಂದು, ಅಷ್ಟೇ ವೇಗದಲ್ಲಿ ಕಣ್ಮರೆಯಾಗುತ್ತಿತ್ತು..ಆದರೆ ಈ ಬಾರಿ ಅವಕಾಶ ಸಿಗುವ ಸಾಧ್ಯತೆ ಹೆಚ್ಚಳವಾಗಿದೆ. ಕಂದಾಯ ಸಚಿವ ಶ್ರೀನಿವಾಸ್ ಪ್ರಸಾದ್ ರಾಜೀನಾಮೆ ನೀಡಿದರೆ ಈ ಖಾತೆ ಕಾಗೋಡು ಹೆಗಲಿಗೆ ದಕ್ಕುವುದು ಗ್ಯಾರಂಟಿ.